ಜು.21ರಿಂದ ಕೋಲ್ಕತ್ತಾದಲ್ಲಿ ಕನ್ನಡ ಚಲನಚಿತ್ರೋತ್ಸವ
ಬೆಂಗಳೂರು, ಜುಲೈ 19: ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಭಾರತೀಯ ಚಲನಚಿತ್ರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಕೋಲ್ಕತ್ತಾದ ಪ್ರತಿಷ್ಠಿತ ನಂದನ್ ಸಾಂಸ್ಕೃತಿಕ ಕೇಂದ್ರದಲ್ಲಿ ಜು.21ರಿಂದ 24ರ ವರೆಗೆ 3ದಿನಗಳ ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಂಗೀತ ನಿರ್ದೇಶಕ ಹಂಸಲೇಖ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್ ತಿಳಿಸಿದ್ದಾರೆ.
ಅನನ್ಯಾ ಕಾಸರವಳ್ಳಿ ನಿರ್ದೇಶನದ ಹರಿಕಥಾ ಪ್ರಸಂಗ, ಬಿ.ಎಂ.ನಿರ್ದೇಶನದ ಅಮರಾವತಿ, ಪವನ್ ಕುಮಾರ್ ನಿರ್ದೇಶನದ ಯು-ಟರ್ನ್, ಪೃಥ್ವಿ ಕೊಣನೂರು ನಿರ್ದೇಶನದ ರೈಲ್ವೆ ಚಿಲ್ಡ್ರನ್, ರಿಷಬ್‌ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ, ಡಿ. ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಹಾಗೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ‘ತಿಥಿ’ ಚಿತ್ರ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.