ಕೆಂಪಯ್ಯ ಪದಚ್ಯುತಿಗೆ ಸಚಿವರ ಪಟ್ಟು?
ಬೆಂಗಳೂರು, ಜು.19: ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯರನ್ನು ಕೂಡಲೆ ಪದಚ್ಯುತಿಗೊಳಿಸಬೇಕು ಎಂದು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಲಾಭವಿಲ್ಲದ ಸಲಹೆಗಾರ ಗೃಹ ಇಲಾಖೆಗೆ ಬೇಡ. ಮಂಗಳೂರಿನಲ್ಲಿ ನಡೆದ ಗಲಭೆಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಈ ಗಲಭೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಯಾವುದೆ ಸಲಹೆಯನ್ನು ನೀಡಿಲ್ಲ ಎಂದು ಹಲವು ಸಚಿವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.
ಸರಕಾರದಲ್ಲಿ ಈಗ ಗೃಹ ಸಚಿವರು ಇಲ್ಲ. ಇಲಾಖೆ ನಿಮ್ಮ ಅಧೀನದಲ್ಲೆ ಇದೆ. ಇಂತಹ ಸಂದರ್ಭದಲ್ಲಿ ನಿಮಗೂ ಸಲಹೆಯನ್ನು ನೀಡಿಲ್ಲ. ಇದರಿಂದಾಗಿ, ರಾಜ್ಯ ಸರಕಾರದ ಮಾನ ಮರ್ಯಾದೆ ಹಾಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ.
ಐಪಿಎಸ್ ಅಧಿಕಾರಿಗಳನ್ನು ನಂಬಿಕೊಂಡು ಕೆಲಸ ಮಾಡಲು ಆಗುವುದಿಲ್ಲ. ಚುನಾವಣೆ ವರ್ಷದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಿ. ನಮ್ಮ ಶಾಸಕರು, ಸಚಿವರಿಂದ ಜನರ ಎದುರು ನಾವು ನಗೇಪಾಟಲಿಗೆ ಈಡಾಗುತ್ತಿಲ್ಲ. ಕೆಂಪಯ್ಯ ನಿರ್ಧಾರಗಳಿಂದ ಆ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಕೆಂಪಯ್ಯ ಕೈಗೊಳ್ಳುತ್ತಿರುವ ನಿರ್ಧಾರಗಳೆ ಸರಕಾರದ ವಿರುದ್ಧದ ಅಸ್ತ್ರಗಳಾಗಿ ಮಾರ್ಪಟ್ಟಿವೆ ಎಂದು ಹಿರಿಯ ಸಚಿವರು ಮುಖ್ಯಮಂತ್ರಿಗೆ ಕಿವಿಮಾತು ಹೇಳಿದ್ದಾರೆ ಎಂದು ಹೇಳಲಾಗಿದೆ.