×
Ad

ನ್ಯಾ.ಬಿ.ಮನೋಹರ್ ಸಾಧನೆ ಯುವ ವಕೀಲರಿಗೆ ಸ್ಫೂರ್ತಿ: ಎಸ್.ಕೆ.ಮುಖರ್ಜಿ

Update: 2017-07-19 20:40 IST

ಬೆಂಗಳೂರು, ಜು.19: ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತರಾಗುತ್ತಿರುವ ಬಿ.ಮನೋಹರ್ ಅವರು ಶ್ರಮಜೀವಿ ಹಾಗೂ ಶಾಂತ ಸ್ವಭಾವದವರಾಗಿದ್ದರು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಹೈಕೋರ್ಟ್ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ನ್ಯಾಯಮೂರ್ತಿ ಬಿ.ಮನೋಹರ್ ಅವರಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬಿ.ಮನೋಹರ್ ಅವರು ಶ್ರಮದಿಂದಲೇ ಹೈಕೋರ್ಟ್ ನ್ಯಾಯಮೂರ್ತಿಯಾದವರು. ಇವರ ಸಾಧನೆ ಯುವ ವಕೀಲರಿಗೆ ಸ್ಫೂರ್ತಿಯಾಗಿದ್ದು, ಇವರ ನಿವೃತ್ತಿ ಜೀವನವೂ ಸುಖಕರವಾಗಿರಲಿ ಎಂದು ಆಶಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಬಿ.ಮನೋಹರ್ ಮಾತನಾಡಿ, ಪದವಿ ಮುಗಿಸಿದ ಬಳಿಕ ಉದ್ಯೋಗವನ್ನು ಹುಡುಕುತ್ತಾ ಬೆಂಗಳೂರಿಗೆ ಬಂದಾಗ ಸಂಬಂಧಿಕರೊಬ್ಬರು ತಮ್ಮ ಹೋಟೆಲ್‌ನಲ್ಲಿ ಕೆಲಸವನ್ನು ನೀಡಿ ಓದಿಗೆ ಪ್ರೋತ್ಸಾಹಿಸಿದರು. ಹೀಗಾಗಿಯೇ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆಯಲು ಸಾಧ್ಯವಾಯಿತು ಎಂದು ಹಳೆಯ ನೆನಪುಗಳನ್ನು ಮೇಲುಕು ಹಾಕಿದರು.

ನ್ಯಾಯಮೂರ್ತಿಯಾಗಿದ್ದ ಪಿ.ವಿಶ್ವನಾಥ್‌ಶೆಟ್ಟಿ ಅವರ ಕಚೇರಿಯನ್ನು ಸೇರಿಕೊಂಡ ಬಳಿಕ ಸರಕಾರ ತಮ್ಮನ್ನು ಸರಕಾರಿ ವಕೀಲರನ್ನಾಗಿ ಆಯ್ಕೆ ಮಾಡಿತು. ಆ ಬಳಿಕ ಮತ್ತಷ್ಟು ಕಾನೂನಿನ ಬಗ್ಗೆ ತಿಳಿದುಕೊಂಡು ವಕೀಲ ವೃತ್ತಿಯನ್ನು ಹೆಚ್ಚು ಹೆಚ್ಚಾಗಿ ಗೌರವಿಸುತ್ತಿದ್ದಾಗ ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳೂ ತಮ್ಮ ಹೆಸರನ್ನು ಸೂಚಿಸಿ ನ್ಯಾಯಮೂರ್ತಿ ಸ್ಥಾನದಲ್ಲಿ ಕೂರಿಸಿದರು ಎಂದು ಹೇಳಿದರು. ನ್ಯಾಯಮೂರ್ತಿ ಹುದ್ದೆಯಲ್ಲಿ ತೃಪ್ತಿ ಹಾಗೂ ಖುಷಿ ಸಿಕ್ಕಿದೆ ಎಂದು ಹೇಳಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಂ ಮಾತನಾಡಿ, ಹೈಕೋರ್ಟ್‌ನಲ್ಲಿ ಸಾಕಷ್ಟು ನ್ಯಾಯಮೂರ್ತಿ ಹುದ್ದೆಗಳು ಖಾಲಿಯಿದ್ದು, ಇದರಿಂದ ನೂರಾರು ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಹೀಗಾಗಿ, ಈ ಅರ್ಜಿಗಳನ್ನು ವಿಲೇವಾರಿ ಮಾಡಲು ನ್ಯಾಯಮೂರ್ತಿ ಹುದ್ದೆಗಳನ್ನು ಭರ್ತಿ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News