ಕೇಂದ್ರದ ಮೇಲ್ಮನವಿ: ಲಿಷಾಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜು.19: ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರಿಗೆ 1 ಕೋಟಿ ಮೊತ್ತದ ಪರಿಹಾರ ನೀಡುವಂತೆ ಲಿಷಾ ಸಲ್ಲಿಸಿರುವ ಮನವಿ ಪರಿಶೀಲಿಸಿ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಏಕಸದಸ್ಯ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿರುವ ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ಲಿಷಾ ಹಾಗೂ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರಿಗೆ ಕೇಂದ್ರ ಸರಕಾರ ಮಾನವೀಯತೆ ಆಧಾರದಲ್ಲಿ 1 ಕೋಟಿ ನೀಡಬೇಕು ಎಂದು ಲಿಷಾ ಕೇಂದ್ರ ಸರಕಾರಕ್ಕೆ 2015ರ ಜನವರಿ 5 ರಂದು ಮನವಿ ಸಲ್ಲಿಸಿದ್ದರು.
ನಗರದ ಮಲ್ಲೇಶ್ವರದ 11ನೆ ಕ್ರಾಸ್‌ನ ಬಿಜೆಪಿ ಕಚೇರಿ ಮುಂಭಾಗ 2013ರ ಎಪ್ರಿಲ್ 17ರಂದು ಬೆಳಗ್ಗೆ 10.30ಕ್ಕೆ ಬಾಂಬ್ ಸ್ಫೋಟ ನಡೆದಿತ್ತು. ಈ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಲಿಷಾ ಮತ್ತು ಅವರ ಸಹಪಾಠಿ ರಕ್ಷಿತಾ ಗಾಯಗೊಂಡಿದ್ದರು. ಲಿಷಾ ಬಲಗಾಲಿಗೆ ಗಂಭೀರ ಪೆಟ್ಟಾಗಿ ಒಂಬತ್ತು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರಣೆಗೆ ತಡೆ: ಇದೇ ವೇಳೆ ವಿಭಾಗೀಯ ನ್ಯಾಯಪೀಠದಲ್ಲಿ ಲಿಷಾ ಸಲ್ಲಿಸಿರುವ ಮೊಕದ್ದಮೆಯನ್ನು ಈ ಮೇಲ್ಮನವಿ ಇತ್ಯರ್ಥವಾಗುವವರೆಗೆ ವಿಚಾರಣೆ ಮುಂದುವರಿಸಬಾರದು ಎಂದೂ ಮುಖರ್ಜಿ ನೇತೃತ್ವದ ನ್ಯಾಯಪೀಠ ಕೋರಿದೆ.