×
Ad

ಐಎಎಸ್ ಅಧಿಕಾರಿಗಳಿಗೆ ಕನ್ನಡ ಕಡ್ಢಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-07-19 20:45 IST

ಬೆಂಗಳೂರು, ಜು.19: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಹೊರ ರಾಜ್ಯಗಳ ಐಎಎಸ್ ಅಧಿಕಾರಿಗಳು 10ನೆ ತರಗತಿಯವರೆಗಿನ ಕನ್ನಡ ಭಾಷೆಯನ್ನು ಕಲಿಯುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ನಗರದ ಗಾಂಧಿ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಲೋಕಸೇವಾ ಆಯೋಗದ 2016ನೆ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಪ್ರತಿಭಾವಂತ ಕನ್ನಡಿಗರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಹೊರ ರಾಜ್ಯಗಳ ಐಎಎಸ್ ಅಧಿಕಾರಿಗಳು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವುದು ಅಗತ್ಯ. ಕನ್ನಡಿಗರು ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಲು ಹೋದರೂ ಅವರು ಅಲ್ಲಿನ ಭಾಷೆಯನ್ನು ಕಲಿಯುವುದು ಅನಿವಾರ್ಯ. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಹೊರ ರಾಜ್ಯಗಳ ಐಎಎಸ್ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು. ಈ ಅಧಿಕಾರಿಗಳು ಕನಿಷ್ಠವಾದರು 10ನೆ ತರಗತಿಯ ಕನ್ನಡವನ್ನು ಕಲಿಯುವುದು ಕಡ್ಡಾಯ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೆ ಒಬ್ಬ ಐಎಎಸ್ ಅಧಿಕಾರಿ ರಾಜ್ಯದಲ್ಲಿ 10 ವರ್ಷಗಳವರೆಗೂ ಕಾರ್ಯನಿರ್ವಹಿಸಿದ್ದರೂ ಕನ್ನಡ ಭಾಷೆಯನ್ನು ಕಲಿತ್ತಿರಲಿಲ್ಲ. ಅವರಿಗೆ ಕನ್ನಡ ಕಲಿಯಲು ಕಾಲಾವಕಾಶ ನೀಡಿದ್ದೆ. ಆದರೂ ಕಲಿಯಲಿಲ್ಲ. ಹೀಗಾಗಿ ಅವರನ್ನು ಕೇಂದ್ರಕ್ಕೆ ವಾಪಸ್ಸು ಕಳುಹಿಸಿದೆ ಎಂದು ಹೇಳುವ ಮೂಲಕ ಕನ್ನಡ ಬಾರದ ಐಎಎಸ್ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎಂಬ ನಿಲುವನ್ನು ಪರೋಕ್ಷವಾಗಿ ಹೊರ ಹಾಕಿದರು.

ಮಾತೃ ಭಾಷೆ ಕನ್ನಡವಾಗಿದ್ದರೂ ಕೆಲ ಐಎಎಸ್ ಅಧಿಕಾರಿಗಳು ವ್ಯಾವಹಾರಿಕ ಕಡತಗಳನ್ನು ಇಂಗ್ಲಿಷ್‌ನಲ್ಲಿ ಬರೆಯುವ ಛಾಳಿಯನ್ನು ಇಟ್ಟುಕೊಂಡಿದ್ದಾರೆ. ಇದು ಖಂಡನೀಯ, ಅಲ್ಲದೆ ಮಾತೃ ಭಾಷೆಗೆ ಬಗೆಯುವ ದ್ರೋಹ ಎಂದು ಕಿಡಿ ಕಾರಿದರು.

ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. ಮಾತೃ ಭಾಷೆಯನ್ನು ಗೌರವ, ಪ್ರೀತಿ, ಅಭಿಮಾನದಿಂದ ಕಾಣಬೇಕು ಎಂದು ಹೇಳಿದ ಅವರು, ಹಿಂದುಳಿದ ಜಿಲ್ಲೆಯಿಂದ ಬಂದು ಕನ್ನಡ ಮಾಧ್ಯಮದಲ್ಲೇ ಓದಿ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರದಲ್ಲಿ ಮೊದಲ ಸ್ಥಾನಗಳಿಸಿದ ನಂದಿನಿ ಮತ್ತು ದೃಷ್ಟಿ ಚೇತನ ಕೆಂಪಹೊನ್ನಯ್ಯ ಅವರದ್ದು ದೊಡ್ಡ ಸಾಧನೆ. ಈ ಸಾಧನೆ ಪ್ರತಿ ಕನ್ನಡಿಗರು ಹೆಮ್ಮೆ ಪಡುವಂಥದ್ದು ಎಂದು ಗುಣಗಾನ ಮಾಡಿದರು.

 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಕನ್ನಡಿಗರು ಉತ್ತೀರ್ಣರಾಗುವವರೇ ವಿರಳ ಎನ್ನುವ ಕಾಲ ಈಗ ಬದಲಾಗಿದೆ. 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಟ್ಟು 59 ಮಂದಿ ಕನ್ನಡಿಗರು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಐದು ಮಂದಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಹಾಗೂ ಕನ್ನಡ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದ 15 ಮಂದಿ ಆಯ್ಕೆ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

 2016ನೆ ಸಾಲಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕನ್ನಡಿಗರು ಕಾರ್ಯನಿರ್ವಹಿಸಲು ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳಬೇಕು. ದೇಶದ ಒಕ್ಕೂಟ ವ್ಯವಸ್ಥೆಗೆ ದ್ರೋಹ ಬಗೆಯದಂತೆ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

 ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಆರ್.ನಂದಿನಿ ಅವರಿಗೆ ಒಂದು ಲಕ್ಷ ರೂ., ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾದ 5 ಮಂದಿಗೆ ತಲಾ ಒಂದು ಲಕ್ಷ, ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಆಯ್ಕೆ ಆದ 15 ಅಭ್ಯರ್ಥಿಗಳಿಗೆ ತಲಾ 50 ಸಾವಿರ ರೂ ನಗದು ಪುರಸ್ಕಾರ ಫಲಕವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಒಟ್ಟು 59 ಅಭ್ಯರ್ಥಿಗಳಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ, ವಿಧಾನ ಪರಿಷತ್ತಿನ ಸದಸ್ಯರಾದ ಎಚ್.ಎಂ.ರೇವಣ್ಣ, ಗೋವಿಂದ್‌ರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News