×
Ad

ನಾಡಧ್ವಜದಿಂದ ರಾಷ್ಟ್ರದ ಧ್ವಜಕ್ಕೆ, ಐಕ್ಯತೆಗೆ ಧಕ್ಕೆ ಇಲ್ಲ: ಸಿಎಂ ಸಿದ್ದರಾಮಯ್ಯ

Update: 2017-07-19 20:49 IST

ಬೆಂಗಳೂರು, ಜು.19: ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಮತ್ತು ಬೇಡ ಎಂದು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಪ್ರತ್ಯೇಕ ನಾಡಧ್ವಜ ಬಳಸುವುದರಿಂದ ರಾಷ್ಟ್ರದ ಧ್ವಜಕ್ಕೆ ಮತ್ತು ರಾಷ್ಟ್ರದ ಐಕ್ಯತೆಗೆ ಯಾವುದೇ ರೀತಿ ಧಕ್ಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಧ್ವಜಕ್ಕೆ ಕಾನೂನಿನ ಸ್ವರೂಪ ನೀಡಲು ಸಮಿತಿಯನ್ನು ಜೂ.6ರಂದೆ ರಚಿಸಲಾಗಿದೆ. ಆದರೆ ಈ ಕುರಿತು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅನಗತ್ಯವಾಗಿ ರಾಜಕೀಯವಾಗಿ ಬಳಕೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಪ್ರತ್ಯೇಕ ನಾಡಧ್ವಜ ಹೊಂದುವುದರಿಂದ ರಾಷ್ಟ್ರಧ್ವಜ್ಕಕೆ ಅವಮಾನವಾಗುವುದಿಲ್ಲ. ನಾವೂ ರಾಷ್ಟ್ರ ಧ್ವಜಕ್ಕೆ ಧಕ್ಕೆ ಬಾರದಂತೆ ನಾಡಧ್ವಜಕ್ಕಿಂತ ಹೆಚ್ಚು ಎತ್ತರದಲ್ಲೇ ಹಾರಿಸಲಾಗುತ್ತದೆ. ರಾಜ್ಯದಲ್ಲಿ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯನ್ನು ಎಲ್ಲ ಸಮಾರಂಭಗಳಲ್ಲೂ ಹಾಡಲಾಗುತ್ತಿದೆ. ಇದರಿಂದ ರಾಷ್ಟ್ರಗೀತೆಗೆ ಧಕ್ಕೆಯಾಗಿದೆಯೇ ಎಂದು ಪ್ರಶ್ನಿಸಿದರು.

ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಪಾಟೀಲ ಪುಟ್ಟಪ್ಪಅವರ ಸಲಹೆ ಮತ್ತು ಆಶಯದಂತೆ ಪ್ರತ್ಯೇಕ ನಾಡಧ್ವಜ ರಚನೆ ಸಂಬಂಧ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಇನ್ನೂ ವರದಿ ನೀಡಿಲ್ಲ, ವರದಿ ಬಂದ ನಂತರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಆರೋಪ ನಿರಾಕರಣೆ: ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯ. ಆಡಳಿತಾತ್ಮಕ ದೃಷ್ಟಿಯಿಂದ ಡಿಐಜಿ ರೂಪ ಮತ್ತು ಸತ್ಯನಾರಾಯಣ ಅವರನ್ನು ವರ್ಗಾವಣೆ ಮಾಡಲಾಗಿದೆ. ಸರಕಾರದಲ್ಲಿ ಮುಖ್ಯ ಮತ್ತು ಅಮುಖ್ಯವೆಂಬ ಕೆಲಸಗಳು ಇಲ್ಲ. ಯಾವ ಅಧಿಕಾರಿ ಎಲ್ಲಿ ಕೆಲಸ ಮಾಡಬೇಕು, ಯಾರನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ನಿರ್ಧರಿಸುವ ಅಧಿಕಾರ ರಾಜ್ಯ ಸರಕಾರಕ್ಕಿದೆಯೇ ವಿನಃ ವಿರೋಧ ಪಕ್ಷಗಳಿಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳನ್ನು ಕುಟುಕಿದರು.

  ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣವನ್ನು ಮರೆಮಾಚಲು ಪ್ರತ್ಯೇಕ ನಾಡಧ್ವಜದ ವಿಚಾರವನ್ನು ರಾಜ್ಯಸರಕಾರ ಕೈಗೆತ್ತಿಕೊಂಡಿದೆ ಎಂದು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ವಿರುದ್ದ ಹರಿಹಾಯ್ದರು.

 ಪದ ಬಳಕೆ ಗೊತ್ತಿಲ್ಲ: ಮಹಾದಾಯಿ ನೀರು ಹಂಚಿಕೆ ಇತ್ಯರ್ಥವನ್ನು ನ್ಯಾಯಾಧಿಕರಣದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಗೋವಾ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಗೋವಾ ಸರಕಾರಕ್ಕೆ ಪದ ಬಳಕೆ ಗೊತ್ತಿಲ್ಲ. ಇವರು ಬಳಿಸಿರುವ ‘ಡರ್ಟಿ’ ಪದ ಗೌರವ ತರುವಂತದ್ದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿ ಪದಗಳನ್ನು ಬಳಕೆ ಮಾಡುವ ಮುನ್ನ ಎಚ್ಚರ ಇರಬೇಕು ಎಂದು ಗೋವಾಕ್ಕೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News