ಕಾನೂನು ಕೈಗೆತ್ತಿಕೊಳ್ಳಬೇಡಿ: ಕೆ.ಜೆ.ಜಾರ್ಜ್
Update: 2017-07-20 18:04 IST
ಬೆಂಗಳೂರು, ಜು.20: ಯಾರೂ ಕನ್ನಡದ ವಿಷಯವಾಗಿ ಕಾನೂನು ಕೈಗೆತ್ತಿಕೊಳ್ಳಬೇಡಿ. ರಾಜ್ಯ ಸರಕಾರ ಕನ್ನಡ ಹಿತ ಕಾಪಾಡಲು ಬದ್ಧವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದ್ದಾರೆ.
ಗುರುವಾರ ನಗರದ ನವೀಕೃತ ಕಂಠೀರವ ಕ್ರೀಡಾಂಗಣ ಉದ್ಘಾಟನೆ ಬಳಿಕ ಕರವೇ ಕಾರ್ಯಕರ್ತರು ಮೆಟ್ರೋ ನಿಲ್ದಾಣದಲ್ಲಿನ ಹಿಂದಿ ನಾಮಫಲಕಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕನ್ನಡ ಭಾಷೆ ವಿಚಾರದಲ್ಲಿ ರಾಜ್ಯ ಸರಕಾರ ಎಂದೂ ಹಿಂದೇಟು ಹಾಕುವುದಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ದಯವಿಟ್ಟು ಯಾರೂ ಕಾನೂನು ಕೈಗೆತ್ತಿಕೊಳ್ಳಬೇಡಿ. ರಾಜ್ಯ ಸರಕಾರ ಕನ್ನಡ ಭಾಷೆ ಪರವಾಗಿದೆ. ಕನ್ನಡ ಹೋರಾಟಗಾರರ ಆಶಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್‌ತಿಳಿಸಿದರು.