ಪರಪ್ಪನ ಅಗ್ರಹಾರ ಅಧೀಕ್ಷಕಿ ಅನಿತಾ ಎತ್ತಂಗಡಿ
ಬೆಂಗಳೂರು, ಜು.20: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅವ್ಯವಹಾರ ಆರೋಪ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು, ಜೈಲಿನ ಅಧೀಕ್ಷಕಿಯಾಗಿದ್ದ ಆರ್.ಅನಿತಾ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಧಾರವಾಡ ಕೇಂದ್ರ ಕಾರಾಗೃಹಕ್ಕೆ ಆರ್.ಅನಿತಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ತೆರವಾಗುವ ಸ್ಥಾನಕ್ಕೆ ಪಿ.ಎಸ್.ರಮೇಶ್ ಅಧೀಕ್ಷಕರಾಗಿ ನೇಮಕಗೊಂಡಿದ್ದಾರೆ ಎಂದು ರಾಜ್ಯ ಸರಕಾರದ ಪ್ರಕಟನೆ ತಿಳಿಸಿದೆ.
ಮುಖ್ಯ ಅಧೀಕ್ಷಕ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರನ್ನು ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನಿತಾ ಮೇಲೆ ಆರೋಪ: ಜೈಲಿನ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಅನಿತಾ ಮಹಿಳಾ ಬ್ಯಾರಕ್‌ನ ಸಂಪೂರ್ಣ ಜವಾಬ್ದಾರಿ ಹೊಂದಿದ್ದರು ಎನ್ನಲಾಗಿದ್ದು, ಟಿ.ಟಿ.ದಿನಕರನ್ ಅವರು ಶಶಿಕಲಾ ಅವರನ್ನು ಕಾಣಲು ಪ್ರತಿ ವಾರ ಪರಪ್ಪನ ಅಗ್ರಹಾರಕ್ಕೆ ಬರುತ್ತಿದ್ದರು. ಈ ವೇಳೆ ಶಶಿಕಲಾಗೆ ರಾಜಾತಿಥ್ಯ ನೀಡಲು ಅವಕಾಶ ಕಲ್ಪಿಸಿರುವುದಕ್ಕೆ ಅನಿತಾಗೆ ತಿಂಗಳಿಗೆ 3 ಲಕ್ಷ ರೂ. ನೀಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ಅದೇ ರೀತಿ, ಶಶಿಕಲಾ ಅವರಿಗೆ ಯಾವುದೇ ರೀತಿಯ ತೊಡಕಾಗದಂತೆ ಎಲ್ಲ ವ್ಯವಸ್ಥೆಗಳನ್ನೂ ಅನಿತಾ ಮಾಡುತ್ತಿದ್ದರು. ಕೆಲ ಮಹಿಳಾ ಕೈದಿಗಳಿಂದ ಶಶಿಕಲಾ ವಾಸ್ತವ್ಯವಿದ್ದ ಕೊಠಡಿಗಳನ್ನು ಶುಚಿಗೊಳಿಸುವುದು ಸೇರಿ ಹಲವಾರು ಕೆಲಸಗಳನ್ನು ಮಾಡಿಸುತ್ತಿದ್ದರು. ಹಣ ನೀಡಿದ ಮಹಿಳಾ ಕೈದಿಗಳೊಂದಿಗೆ ಮಾತ್ರ ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತಿತ್ತು. ಇದೀಗ ಸರಕಾರ ಅವರನ್ನು ವರ್ಗಾವಣೆ ಮಾಡಿದೆ.
ವರ್ಗಾವಣೆ: ಅಕ್ರಮಗಳ ಬಗ್ಗೆ ವರದಿ ನೀಡಿದ್ದ ಬಂದಿಖಾನೆ ಡಿಐಜಿ ಡಿ.ರೂಪಾ ಮತ್ತು ಡಿಜಿಪಿ ಸತ್ಯನಾರಾಯಣರಾವ್ ಅವರು ಸೇರಿ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ ಬೆನ್ನಲ್ಲೇ ಕೃಷ್ಣಕುಮಾರ್ ಅವರನ್ನು ಯಾವುದೇ ಸ್ಥಳ ನಿಯುಕ್ತಿಗೊಳಿಸಿದೆ ರಾಜ್ಯ ಸರಕಾರ ವರ್ಗಾವಣೆ ಮಾಡಿತ್ತು. ಇಂದು ಕೃಷ್ಣ ಕುಮಾರ್ ಅವರನ್ನು ಕಲಬುರ್ಗಿ ಕಾರಾಗೃಹ ಮುಖ್ಯ ಅಧೀಕ್ಷಕರಾಗಿ ವರ್ಗಾವಣೆ ಮಾಡಿದ್ದು, ಕಲಬುರ್ಗಿ ಕಾರಾಗೃಹ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ.
ಕಾರಾಗೃಹದಲ್ಲಿ ಕಟ್ಟುನಿಟ್ಟು ಕ್ರಮ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮ ಆರೋಪ ಬೆಳಕಿಗೆ ಬರುತ್ತಿದ್ದಂತೆ ಕಾರಾಗೃಹದಲ್ಲಿ ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಜೈಲಿನ ಅಧಿಕಾರಿಗಳು ಬದಲಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದಿಷ್ಟು ಬದಲಾವಣೆ, ಸುಧಾರಣೆಗಳಾಗಿವೆ. ಸಂದರ್ಶನದ ಕಾಲಾವಧಿ, ಹೊರಗಿನಿಂದ ಬರುವ ಆಹಾರ, ಕೈದಿಗಳ ನಿಕಟ ಸಂಪರ್ಕ ಹೊಂದಿರುವ ಜೈಲು ಸಿಬ್ಬಂದಿ ಮೇಲೆ ನಿಗಾವಹಿಸುವುದು, ಕೈದಿಗಳ ಆಗು-ಹೋಗುಗಳ ಪರಿಶೀಲನೆ ಸೇರಿದಂತೆ ಹಲವಾರು ವಿಚಾರದಲ್ಲಿ ಬದಲಾವಣೆಗಳು ಕಂಡು ಬಂದಿವೆ.
ಕೈದಿಗಳು ಕುಟುಂಬ ಸದಸ್ಯರ ಜತೆ ಭೇಟಿಯಾಗುವ ಕಾಲಾವಕಾಶ ಕಡಿತಗೊಳಿಸಲಾಗಿದ್ದು, ಹಿಂದೆ ಹೆಚ್ಚು ಸಮಯ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ 10 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಕುಟುಂಬ ಸದಸ್ಯರ ಜತೆ ಮಾತನಾಡುವ ನೆಪದಲ್ಲಿ ಸಾಕಷ್ಟು ಮಂದಿ ಕೈದಿಗಳು ಜೈಲಿನ ಒಳಗಿನಿಂದಲೇ ತಮ್ಮ ಬೆಂಬಲಿಗರಿಗೆ ಮಾಹಿತಿ ರವಾನಿಸುತ್ತಿದ್ದರು. ಜೈಲಿನ ಒಳಗಿದ್ದೇ ಸಾಕಷ್ಟು ಅವ್ಯವಹಾರ ನಡೆಸುತ್ತಿದ್ದರು ಎಂಬ ಬಗ್ಗೆ ಆರೋಪ ಕೇಳಿ ಬರುತ್ತಿತ್ತು. ಸದ್ಯ ಇದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಂಜಾ, ಮೊಬೈಲ್‌ಗೆ ಕಡಿವಾಣ: ಕೈದಿಗಳಿಗೆ ಹೊರಗಿನಿಂದ ಆಹಾರ ನೀಡುವ ನೆಪದಲ್ಲಿ ಗಾಂಜಾ, ಹಣ, ಮಾರಕಾಸ್ತ್ರ, ಮೊಬೈಲ್, ಮದ್ಯ, ಡ್ರಗ್ಸ್ ಸೇರಿ ಅನೇಕ ವಸ್ತುಗಳು ಕೈದಿಗಳಿಗೆ ದೊರೆಯುತ್ತಿದ್ದವು. ಇದೀಗ ಕಾರಾಗೃಹ ಎಡಿಜಿಪಿ ಎನ್.ಎಸ್.ಮೇಘರಿಕ್ ಅವರು ಕೈದಿಗಳಿಗೆ ಆಹಾರ ಪೂರೈಸುವುದನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ. ಜೊತೆಗೆ ಜೈಲಿನಲ್ಲಿರುವ ಪ್ರತಿ ಬ್ಯಾರಕ್‌ಗಳನ್ನೂ ಕೂಲಂಕಶವಾಗಿ ಪರಿಶೀಲಿಸುವಂತೆ ಜೈಲು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮರ್ಮಾಂಗಕ್ಕೆ ಒದ್ದು, ಮಾರಣಾಂತಿಕ ಹಲ್ಲೆ: ಆರೋಪ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮ ಆರೋಪ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಡಿಐಜಿ ಡಿ.ರೂಪಾ ಅವರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದ್ದ ಕೈದಿಗಳ ಪೈಕಿ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆಯಾಗಿದ್ದ ಅನಂತಮೂರ್ತಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರ ಮರ್ಮಾಂಗಕ್ಕೆ ಒದ್ದಿದ್ದಾರೆ ಎಂದು ಅನಂತಮೂರ್ತಿ ತಂದೆ ರಾಮಚಂದ್ರ ಆರೋಪಿಸಿದ್ದಾರೆ.