ಬ್ಯಾಂಕ್‌ಗಳಲ್ಲಿ ಕನ್ನಡ ಬಳಸಲು ಆಮ್‌ಆದ್ಮಿ ಆಗ್ರಹ
ಬೆಂಗಳೂರು, ಜು.20: ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಬೇಕು ಹಾಗೂ ಎಲ್ಲ ಸೇವೆಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಆಮ್‌ಆದ್ಮಿ ಪಕ್ಷ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಸಹ ಸಂಚಾಲಕ ಮೋಹನ್ ದಾಸರಿ, ಕರ್ನಾಟಕ ದೇಶದ ಬ್ಯಾಂಕಿಂಗ್ ವಲಯದ ತವರೂರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳಿಗೆ ಕರ್ನಾಟಕ ನೆಲೆ ನೀಡಿದೆ ಎಂದು ಹೇಳಿದರು.
ರಾಜ್ಯದ ಬಹುತೇಕ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದವರೇ ತುಂಬಿಕೊಂಡಿದ್ದಾರೆ. ಹೀಗಾಗಿ ಚಲನ್‌ಗಳು, ಚೆಕ್ ಪುಸ್ತಕ, ರಸೀದಿಗಳನ್ನು ಆಂಗ್ಲ ಮತ್ತು ಹಿಂದಿಯಲ್ಲಿ ಮುದ್ರಣ ಮಾಡಿದ್ದಾರೆ. ಅಲ್ಲದೆ, ಬ್ಯಾಂಕ್ ಸಿಬ್ಬಂದಿಗಳು ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದವರಿಗೆ, ಅನಕ್ಷರಸ್ಥರಿಗೆ ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದು ಕಷ್ಟವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಬಹುತೇಕ ರಾಜ್ಯಗಳು ತಮ್ಮದೇ ಆದ ಪ್ರಾದೇಶಿಕ ಭಾಷೆಗಳನ್ನು ಹೊಂದಿದ್ದು, ಹಿಂದಿಯೇತರ ರಾಜ್ಯಗಳ ಮೇಲೆ ಬಹುಮತ ಆಧಾರಿತ ಭಾಷೆ ಹೇರಿಕೆ ಮಾಡಲು ಹೊರಟಿರುವುದು ಸರಿಯಲ್ಲ. ಈ ಮೂಲಕ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡುವ ಹುನ್ನಾರ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಭಾಷೆಯಲ್ಲಿಯೇ ಸರಕಾರಿ ಸೇವೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಸ್ವಾತಂತ್ರ ನಂತರದಿಂದಲೂ ಭಾಷಾಂತರ ರಾಜ್ಯಗಳ ವೆುೀಲೆ ಅನವಶ್ಯಕವಾಗಿ ಹಿಂದಿ ಹೇರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.