ಪಾಲಿಕೆ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ವಿತರಣೆ
ಬೆಂಗಳೂರು, ಜು. 20: ಪಾಲಿಕೆಯ 89-ನರ್ಸರಿ, 15-ಪ್ರಾಥಮಿಕ, 32-ಪ್ರೌಢಶಾಲೆ, 13-ಪದವಿ ಪೂರ್ವ ಮತ್ತು 4-ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಪಾಲಿಕೆಯಿಂದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಗುರುವಾರ ಇಲ್ಲಿನ ಚಾಮರಾಜಪೇಟೆ ಕ್ಷೇತ್ರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಝಿಮಾ ಖಾನಂ, ಕ್ಷೇತ್ರದ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಪಠ್ಯ-ಪುಸಕ್ತಗಳನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ನಾಝಿಮಾ ಖಾನಂ, ಪಾಲಿಕೆ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಎಲ್ಲರೂ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆದು ಪಾಲಿಕೆಯ ಶಾಲಾ/ಕಾಲೇಜುಗಳ ಘನತೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಅವಿರತವಾಗಿ ಶ್ರಮಿಸಿ ವಿದ್ಯಾರ್ಥಿಗಳ ಯಶಸ್ಸಿಗೆ ಪಣತೊಡಬೇಕೆಂದು ಉತ್ತೇಜಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಬಿಎಂಪಿ ಸದಸ್ಯ ಕೋಕಿಲಾ ಚಂದ್ರಶೇಖರ್, ಸಹಾಯಕ ಆಯುಕ್ತರು(ಶಿಕ್ಷಣ), ವಿದ್ಯಾಧಿಕಾರಿ ಹಾಗೂ ಸಮಿತಿಯ ವಿಶೇಷಾಧಿಕಾರಿ ಉಪಸ್ಥಿತರಿದ್ದರು.