×
Ad

ನವೀಕೃತ ಕಂಠೀರವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

Update: 2017-07-20 19:53 IST

ಬೆಂಗಳೂರು, ಜು.20: ಎರಡು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು 9.7 ಕೋಟಿ ರೂ.ವೆಚ್ಚದಲ್ಲಿ ರಾಜ್ಯ ಸರಕಾರ ನವೀಕೃತಗೊಳಿಸಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನವೀಕೃತಗೊಳಿಸಲಾಗಿರುವ ಈ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ಮೂರು ಬಾರಿ ಚೆಂಡನ್ನು ಎಸೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಕ್ರೀಡಾಂಗಣದಲ್ಲಿದ್ದ ಮಹಿಳಾ ಕ್ರೀಡಾಪಟುಗಳಿಂದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿದರು.

ನವೀಕೃತ ಕ್ರೀಡಾಂಗಣದ ಬಗ್ಗೆ ಮಾಹಿತಿ ನೀಡಿದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕ್ರೀಡಾಂಗಣದ ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಲಾಗುವುದು. ದುಸ್ಥಿತಿಯಲ್ಲಿದ್ದ ಕ್ರೀಡಾಂಗಣವನ್ನು ಇಲಾಖೆ ಮತ್ತು ಬಿಬಿಎಂಪಿ ಸೇರಿ 8.5 ಕೋಟಿ ರೂ. ವೆಚ್ಚ ಮಾಡಿದ್ದು, ಬಿಡಿಎಯಿಂದ ಮರದ ನೆಲಹಾಸಿಗಾಗಿ 1.2 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹೊರಾಂಗಣ ಕ್ರೀಡಾಂಗಣವನ್ನು 6 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಹೊದಿಕೆಗಳನ್ನು ಬದಲಿಸುವ ಮೂಲಕ ಇತರ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಇಲಾಖೆಯಲ್ಲಿ ಹಣ ಲಭ್ಯವಿದೆ ಎಂದು ತಿಳಿಸಿದರು. ಕ್ರೀಡಾಪಟುಗಳಿಗೆ ಬೇಕಾದ ವ್ಯವಸ್ಥೆಗಳು, ತಾಂತ್ರಿಕ ಸೌಲಭ್ಯಗಳು, ಕೋಚ್‌ಗಳಿಗೆ ಬೇಕಾದ ವ್ಯವಸ್ಥೆಗಳು, ಮಾಧ್ಯಮದವರಿಗೆ ಬೇಕಾಗುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಮರದ ನೆಲಹಾಸು, ಆಸನಗಳ ವ್ಯವಸ್ಥೆ, ಕೊಠಡಿಗಳ ನವೀಕರಣ, ಶೌಚಾಲಯ ಸುವ್ಯವಸ್ಥೆ ಹೀಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನವೀಕರಿಸಲಾಗಿದೆ ಎಂದು ವಿವರಿಸಿದರು.

ಆರ್ಥಿಕ ನೆರವು: ಕ್ರೀಡಾಂಗಣಗಳನ್ನು ಇತರ ಕಾರ್ಯಕ್ರಮಗಳಿಗೆ ನೀಡಿದಾಗ ಕ್ರೀಡಾಂಗಣದ ನಿರ್ವಹಣೆಗೆ ಆರ್ಥಿಕವಾಗಿ ನೆರವು ದೊರೆಯಲಿದೆ ಎಂದ ಅವರು, ನಾನು ಜವಾಬ್ದಾರಿ ವಹಿಸಿಕೊಂಡ ಮೇಲೆ ಖರ್ಚು ಕಡಿಮೆಯಾಗಿ ಆದಾಯದ ಪ್ರಮಾಣ ಹೆಚ್ಚಾಗಿದೆ ಎಂದು ನುಡಿದರು.

ಸಿಸಿಟಿವಿ ಕಳವು: ಈ ಮೊದಲು ಅಳವಡಿಸಲಾಗಿದ್ದ 20 ಸಿಸಿಟಿವಿಗಳಲ್ಲಿ 10ನ್ನು ಕಳವು ಮಾಡಲಾಗಿದೆ. ಕ್ರೀಡಾಂಗಣಕ್ಕೆ ಭದ್ರತೆ ನೀಡುವ ಗುತ್ತಿಗೆ ಪಡೆದಿರುವವರು ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿಲಾಗಿದೆ ಎಂದು ಪ್ರಮೋದ್ ಮಧ್ವರಾಜ್ ಮಾಹಿತಿ ನೀಡಿದರು.
ಸಚಿವರಾದ ರೋಶನ್‌ಬೇಗ್, ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News