ಮೃತದೇಹದ ಜೊತೆ ರಾತ್ರಿ ಕಳೆದ ರೋಗಿಗಳು?
ಬೆಂಗಳೂರು, ಜು.20: ಪೊಲೀಸರು ಮತ್ತು ವೈದ್ಯರ ನಿರ್ಲಕ್ಷ ಹಿನ್ನೆಲೆಯಲ್ಲಿ ಇಲ್ಲಿನ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಮೃತದೇಹದ ಜೊತೆ ರಾತ್ರಿ ಕಳೆದಿರುವ ಆರೋಪ ಕೇಳಿಬಂದಿದೆ.
ನಗರದ ಯಲಹಂಕದ ಬಸ್ ನಿಲ್ದಾಣದ ಬಳಿ ದೇವರಾಜ್ ಎಂಬ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ನರಳಾಡುತ್ತಾ ಬಿದ್ದಿರುವುದನ್ನು ಕಂಡ ಸಾರ್ವಜನಿಕರು ಯಲಹಂಕ ಆಸ್ಪತ್ರೆಗೆ ಕರೆ ತಂದಿದ್ದರು. ದೇವರಾಜ್ ಸ್ಥಿತಿ ಗಂಭೀರವಾಗಿದ್ದು, ವಾರಸುದಾರರಿಲ್ಲ ಎಂಬ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡದೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು ಎನ್ನಲಾಗಿದೆ.
ಆದರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಕೂಡ ವಾರಸುದಾರರಿಲ್ಲ ಎಂದು ದಾಖಲಿಸಿಕೊಳ್ಳದೇ ಪುನಃ ಯಲಹಂಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ದೇವರಾಜ್ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ರೋಗಿಗಳ ಪರದಾಟ: ದೇವರಾಜ್ ಮೃತಪಟ್ಟ ನಂತರ ಪೊಲೀಸರ ಸಹಿ ಇಲ್ಲದೆ ಜನರಲ್ ವಾರ್ಡ್‌ನಿಂದ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ವೈದ್ಯರು ಒಪ್ಪಲಿಲ್ಲ ಎನ್ನಲಾಗಿದೆ. ಮೃತದೇಹವನ್ನು ರೋಗಿಗಳ ಮಧ್ಯೆ ಇರಿಸಲಾಗಿತ್ತು. ಆದರೆ, ರಾತ್ರಿಯಿಡೀ ಕಾಯುತ್ತಾ ಕುಳಿತರೂ ಪೊಲೀಸರು ಬರದ ಹಿನ್ನಲೆಯಲ್ಲಿ ಮೃತದೇಹ ದುರ್ವಾಸನೆ ಬರುತಿತ್ತು. ಶವದ ವಾಸನೆಯಿಂದ ಬೇಸತ್ತ ರೋಗಿಗಳು ಮತ್ತು ಸಾರ್ವಜನಿಕರು ಯಲಹಂಕ ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ನಡೆಯನ್ನು ಖಂಡಿಸಿದ್ದಾರೆ.