ಸೈಬರ್ ಅಪರಾಧ ಕಡಿವಾಣಕ್ಕೆ ಪ್ರಯತ್ನಿಸಿ: ಪ್ರವೀಣ್‌ಸೂದ್
ಬೆಂಗಳೂರು, ಜು.20: ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಸೈಬರ್ ವಿಭಾಗದ ಪೊಲೀಸರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೂಚಿಸಿದ್ದಾರೆ. ಗುರುವಾರ ನಗರದ ಪೊಲೀಸ್ ಕಚೇರಿಯಲ್ಲಿ ಸೈಬರ್ ಅಪರಾಧಗಳ ಕುರಿತು ನಡೆಸಿದ ಒಂದು ದಿನದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳ ವಂಚನೆ ಪ್ರಕರಣಗಳ ಪತ್ತೆ ಮತ್ತು ಸಾಕ್ಷಿಗಳ ಸಂಗ್ರಹಣೆಗಳನ್ನು ಮಾಡಬೇಕು. ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಸೈಬರ್ ಅಪರಾಧಗಳು ಹೆಚ್ಚುತ್ತಿರುವುದನ್ನು ನಿಯಂತ್ರಿಸಬೇಕು. ಸೈಬರ್ ಅಪರಾಧಗಳ ಬಗ್ಗೆ ಬಲವಾದ ಸಾಕ್ಷಿಗಳನ್ನು ಸಂಗ್ರಹಿಸಿದರೆ ಮಾತ್ರ ಆರೋಪಿಗೆ ಶಿಕ್ಷೆಯಾಗುತ್ತದೆ. ಜನರೊಂದಿಗೆ ಉತ್ತಮ ಭಾಂದವ್ಯ ಹೊಂದುವುದು ಮುಖ್ಯ. ಪ್ರಕರಣದ ತನಿಖೆ ನಡೆಸುವ ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳ ಭದ್ರತೆ, ಹಣ ವರ್ಗಾವಣೆಯ ವಿಧಾನ ಮತ್ತು ತಾಂತ್ರಿಕ ಭದ್ರತಾ ವ್ಯವಸ್ಥೆಯ ನೂತನ ಆವಿಷ್ಕಾರಗಳು ಸೇರಿದಂತೆ ಇಂದಿನ ಕೆಲ ತಂತ್ರಜ್ಞಾನಗಳ ಬಗ್ಗೆ ಸೂಕ್ತ ಮಾಹಿತಿ ಪಡೆದರೆ ಸೈಬರ್ ಅಪರಾಧಗಳನ್ನು ನಿಯಂತ್ರಿಸಬಹುದು ಎಂದ ಅವರು, ಪೊಲೀಸರೊಂದಿಗೆ ಸಾರ್ವಜನಿಕರೂ ಸಂಪರ್ಕದಲ್ಲಿದ್ದರೆ ಉತ್ತಮ ಎಂದರು.
ಕಾರ್ಯಾಗಾರದಲ್ಲಿ ಅಪರಾಧ ವಿಭಾಗದ ಮುಖ್ಯಸ್ಥ ಎಸ್.ರವಿ, ಅಪರಾಧ-2 ವಿಭಾಗದ ಡಿಸಿಪಿ ರಾಮ್‌ನಿವಾಸ್ ಸೆಪಟ್, ಸಿಸಿಬಿ ವಿಭಾಗದ ಜಿನೇಂದ್ರ ಖನಗಾವಿ ಸೇರಿ ಪ್ರಮುಖರು ಹಾಜರಿದ್ದರು.