ಜಿಎಸ್‌ಎಸ್ ಪತ್ನಿ ರುದ್ರಾಣಿ ವಿಧಿವಶ
Update: 2017-07-20 20:05 IST
ಬೆಂಗಳೂರು, ಜು.20: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪತ್ನಿ ರುದ್ರಾಣಿ ಶಿವರುದ್ರಪ್ಪ(83) ಅವರು ಹೃದಯಾಘಾತದಿಂದ ನಿಧಾನರಾದರು.
ಬುಧವಾರ ತಡರಾತ್ರಿ ನಗರದ ಬನಶಂಕರಿ 2ನೆ ಹಂತದಲ್ಲಿರುವ ತಮ್ಮ ಮನೆಯಲ್ಲಿ ರುದ್ರಾಣಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತಡರಾತ್ರಿ ಉಸಿರಾಟದಲ್ಲಿ ತೀವ್ರ ತೊಂದರೆ ಉಂಟಾಗಿದೆ. ಕೂಡಲೇ ಜೊತೆಗಿದ್ದ ಸಹಾಯಕರು ಅವರ ಪುತ್ರಿಗೆ ಮೊಬೈಲ್ ಮೂಲಕ ಕರೆ ಮಾಡಿದರು. ಸಮೀಪದ ಬಡಾವಣೆಯಲ್ಲಿ ವಾಸವಿರುವ ಮಗಳು ಜಯಂತಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ವೈದ್ಯರನ್ನೂ ಕರೆದುಕೊಂಡು ಬರುವ ಹೊತ್ತಿಗೆ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ರುದ್ರಾಣಿ ಅವರು ಸಂಧ್ಯಾದೀಪ ಎಂಬ ವೃದ್ಧಾಶ್ರಮ ನಡೆಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಪತಿ, ರಾಷ್ಟ್ರಕವಿ ಶಿವರುದ್ರಪ್ಪ ಅವರು ವಿಧಿವಶರಾಗಿದ್ದರು.