ನೂತನ ರಾಷ್ಟ್ರಪತಿ ಸಂವಿಧಾನದ ಆಶಯ ಎತ್ತಿಹಿಡಿಯಲಿ: ಡಾ.ಜಿ.ಪರಮೇಶ್ವರ್
Update: 2017-07-20 20:14 IST
ಬೆಂಗಳೂರು, ಜು.20: ದೇಶದ 14ನೆ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ತಮ್ಮ ಆಡಳಿತಾವಧಿಯಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ರಾಷ್ಟ್ರಪತಿಗೆ ಶುಭಾಶಯಗಳನ್ನು ಕೋರುತ್ತೇನೆ. ಹಾಗೆಯೆ ತಮ್ಮ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಿ ಎಂದು ಆಶಿಸಿದರು.
ರಾಷ್ಟ್ರಪತಿ ಆಯ್ಕೆಯಲ್ಲಿ ಪರಾಭವಗೊಂಡಿರುವ ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾಕುಮಾರ್ ಶೇ.40ರಷ್ಟು ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮೀರಾಕುಮಾರ್‌ರವರು ಎಲ್ಲ ಪಕ್ಷದ ಶಾಸಕ ಹಾಗೂ ಸಂಸದರ ಬಳಿಯೂ ಆತ್ಮಸಾಕ್ಷಿಯಾಗಿ ಮತಗಳನ್ನು ಯಾಚಿಸಿದ್ದರು. ಇದಕ್ಕೆ ಕೆಲವು ಶಾಸಕರು, ಸಂಸದರು ಸ್ಪಂದಿಸಿ ಮತಹಾಕಿದ್ದಾರೆ ಎಂದು ಅವರು ತಿಳಿಸಿದರು.