ಗಾಯಾಳು ಲಿಷಾಗೆ ಹತ್ತು ದಿನದಲ್ಲಿ ಉದ್ಯೋಗದ ಆದೇಶ ಪತ್ರ ನೀಡಲು ಹೈಕೋರ್ಟ್ ಆದೇಶ
Update: 2017-07-20 20:42 IST
ಬೆಂಗಳೂರು, ಜು.20: ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ಲಿಷಾ ಅವರಿಗೆ ಸರಕಾರ ಹತ್ತು ದಿನದಲ್ಲಿ ಉದ್ಯೋಗದ ಆದೇಶ ಪತ್ರವನ್ನು ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಲಿಷಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಲಿಷಾ ಅವರಿಗೆ ಉದ್ಯೋಗದ ಆದೇಶ ಪತ್ರವನ್ನು ಸರಕಾರ ಯಾವಾಗ ಕೊಡುತ್ತದೆ ಎಂಬುದನ್ನು ತಿಳಿಸಲು ಸೂಚಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಸರಕಾರದ ಪರ ವಾದಿಸಿದ ವಕೀಲರು, ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಲಿಷಾ ಅವರಿಗೆ ಉದ್ಯೋಗದ ಆದೇಶ ಪತ್ರವನ್ನು ನೀಡಲು ಹತ್ತು ದಿನವಾದರೂ ಬೇಕಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಲಿಷಾ ಅವರಿಗೆ ಹತ್ತು ದಿನದಲ್ಲಿ ಉದ್ಯೋಗದ ಆದೇಶ ಪತ್ರವನ್ನು ನೀಡಲು ಆದೇಶಿಸಿತು.