ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ

Update: 2017-07-20 15:19 GMT

ಬೆಂಗಳೂರು, ಜು.20: ರಾಷ್ಟ್ರೀಯಾ ಬಾಸ್ಕೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾಗೆ ಮಾನ್ಯತೆ ನೀಡುವ ಕುರಿತು ಕ್ರೀಡಾ ಇಲಾಖೆಯ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ. ಹೈಕೋರ್ಟ್ ಆದೇಶವಿದ್ದರೂ ಮಾನ್ಯತೆ ನೀಡದ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಬಾಸ್ಕೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾ ಸಲ್ಲಿಸಿರುವ ನ್ಯಾಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಾಟೀಲ್ ಹಾಗೂ ನ್ಯಾಯಮೂರ್ತಿ ಸುಜಾತ ಅವರಿದ್ದ ವಿಭಾಗೀಯ ಪೀಠ ಗುರುವಾರ ಈ ನಿರ್ದೇಶನ ನೀಡಿದೆ.

ಜತೆಗೆ, ಮಾನ್ಯತೆ ನಡುವ ಸಂಬಂಧ ಶುಕ್ರವಾರ ಕೇಂದ್ರ ಸರಕಾರದ ನಿಲುವು ತಿಳಿಸುವಂತೆ ಸೂಚಿಸಿರುವ ಪೀಠ. ಒಂದು ವೇಳೆ ಮಾನ್ಯತೆ ನೀಡದಿದ್ದರೆ ಜು. 23ರಿಂದ ನಗರದಲ್ಲಿ ನಡೆಯಲಿರುವ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಗೇಮ್ಸ್‌ಗೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಮೌಖಿಕವಾಗಿ ತಾಕೀತು ಮಾಡಿದೆ.

ಅರ್ಜಿದಾರರ ಪರ ವಕೀಲರಾದ ಹೇಮಂತ್ ರಾಜ್ ವಾದ ಮಂಡಿಸಿ, 2014ರ ಕೇಂದ್ರ ಸರಕಾರ ರಚಿಸಿರುವ ನಿಯಮಗಳಂತೆ ನಮ್ಮ ಫೆಡರೇಷನ್ ನೋಂದಣಿ ಮಾಡಿಸಲು 2015ರಲ್ಲಿ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರ ಕ್ರೀಡಾ ಇಲಾಖೆಯು ಮಾನ್ಯತೆ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಮಾನ್ಯತೆ ನೀಡಿಲು ಆದೇಶಿಸಿತ್ತು. ಹೀಗಿದ್ದರೂ ಯುವಜನ ಮತ್ತು ಕ್ರೀಡಾ ಇಲಾಖೆ ರಾಜಕೀಯ ಒತ್ತಡದಿಂದ ಮಾನ್ಯತೆ ನೀಡಿಲ್ಲ ಎಂದು ಆರೋಪಿಸಿದರು.

ಅಲ್ಲದೆ, ಜು. 23 ರಿಂದ ಬಾಸ್ಕೆಟ್‌ಬಾಲ್ ಫೆಡರೇಷನ್ ಸಂಸ್ಥೆೆಯು ಏಷ್ಯನ್ ಚಾಂಪಿಯನ್ ಶಿಪ್ ಆಯೋಜಿಸಿದೆ, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾನ್ಯತೆ ಇಲ್ಲದಿರುವುದರಿಂದ ಸರಕಾರದಿಂದ ನೀಡುವ ಎಲ್ಲ ಸೌಲಭ್ಯಗಳೂ ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರಕ್ಕೆ ಮಾನ್ಯತೆ ನೀಡವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ ಶುಕ್ರವಾರ ಇದಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವು ತಿಳಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News