ಸಂಸದೆ ಶೋಭಾ ಕರಂದ್ಲಾಜೆ ಮನಸ್ಥಿತಿ ಪ್ರತೀಕ: ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್

Update: 2017-07-20 16:37 GMT

ಬೆಂಗಳೂರು, ಜು. 20: ಬದುಕಿದ್ದ ವ್ಯಕ್ತಿಯನ್ನು ಸತ್ತಿದ್ದಾರೆಂದು ಕೇಂದ್ರ ಗೃಹ ಇಲಾಖೆಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ ಬರೆದಿರುವುದನ್ನು ನೋಡಿದರೆ ಅವರ ಮನಸ್ಥಿತಿ ಯಾವ ರೀತಿ ಅನ್ನೋದು ಗೊತ್ತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಬ್ಬ ಸಂಸದೆಯಾಗಿ ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಪತ್ರ ಬರೆಯಲಿ. ಆದರೆ, ಬದುಕಿದ್ದವರನ್ನು ಪತ್ರದಲ್ಲೆ ಸಾಯಿಸ್ತಾರೆ ಅಂದರೆ, ಇವರಿಗೆ ಏನು ಹೇಳಬೇಕೋ ಗೊತ್ತಿಲ್ಲ. ಎಲ್ಲ ವಿಚಾರವನ್ನು ರಾಜಕಾರಣದ ದೃಷ್ಟಿಯಿಂದ ನೋಡುವುದು ಸಲ್ಲ ಎಂದು ಟೀಕಿಸಿದರು.

ರಾಹುಲ್ ಆಗಮನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಳೆ(ಜು.21) ಸಂಜೆ ನಗರಕ್ಕೆ ಆಗಮಿಸಿದ್ದು, ಬಳಿಕ ಹೊಸದಿಲ್ಲಿಗೆ ಹಿಂದಿರುಗಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಜವಾಬ್ದಾರಿ: ಕಾಂಗ್ರೆಸ್ ಒಂದು ದೊಡ್ಡ ಪಕ್ಷ. ಹೀಗಾಗಿ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಕೆಲವರು ಅಸಮಾಧಾನಗೊಂಡಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎಲ್ಲರನ್ನು ಕರೆದು ಚರ್ಚಿಸಿ ಸಮರ್ಥರಿಗೆ ಹೊಣೆಗಾರಿಕೆ ನೀಡಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.
ರಾಜ್ಯಕ್ಕೆ ಪ್ರತ್ಯೇಕ ಧ್ವಜ ಅಗತ್ಯ ಎಂಬ ವಿಚಾರ ಗೋವಿಂದ ಕಾರಜೋಳ ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಸ್ತಾಪ ಬಂದಿತ್ತು. ಆದರೆ, ಅವರು ಕೈಬಿಟ್ಟಿದ್ದರು. ಇದೀಗ ರಾಜ್ಯ ಸರಕಾರ ‘ಪ್ರತ್ಯೇಕ ಧ್ವಜ’ದ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಿದೆ ಎಂದು ಪರಮೇಶ್ವರ್ ಹೇಳಿದರು.

ದಾಖಲೆ ಕೊಡಿ: ಇಂದಿರಾ ಕ್ಯಾಂಟಿನ್ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ದಾಖಲೆಗಳಿದ್ದರೆ ಕೊಡಲಿ. ದುಡ್ಡು ಹೊಡೆಯುವ ಅಗತ್ಯ ನಮಗಿಲ್ಲ. ಈ ಸಂಬಂಧ ಬಿಜೆಪಿಯ ರಮೇಶ್ ಬೇಜವಾಬ್ದಾರಿ ಆರೋಪಕ್ಕೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

ಸಮಾವೇಶ: ರಾಯಚೂರಿನಲ್ಲಿ ಪಕ್ಷದಿಂದ ಆಗಸ್ಟ್ 4ಕ್ಕೆ ಬೃಹತ್ ಸಮಾವೇಶ ಏರ್ಪಡಿಸಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ಅವರು ಸ್ಪಷ್ಟಣೆ ನೀಡಿದರು.

ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಬರುವವರನ್ನು ಸ್ವಾಗತ ಮಾಡುತ್ತೇವೆ. ಮೇಲ್ಮನೆ ಸದಸ್ಯ ವಿ.ಸೋಮಣ್ಣ ಅವರು ಬಂದರೂ ಕರೆದುಕೊಳ್ಳುತ್ತೇವೆ. ಆದರೆ, ಅವರನ್ನು ಪಕ್ಷಕ್ಕೆ ಕರೆತರುವ ಹೊಣೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ವಹಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದೂ
ಡಾ.ಜಿ.ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News