ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಿದ್ಧ: ಮುಖ್ಯಮಂತ್ರಿ

Update: 2017-07-20 16:50 GMT

ಧಾರವಾಡ, ಜು.20: ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸುವುದು ಕೇಂದ್ರ ಸರಕಾರದ ಕೈಯಲ್ಲಿದೆ. ಎಲ್ಲರೂ ಒಗ್ಗಟ್ಟಿನಿಂದ ಹೇಳಿದರೆ ಈ ಸಂಬಂಧ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದ ಮುರುಘಾಮಠದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಬಸವ ತತ್ವದ ನಿಜ ಅನುಯಾಯಿ. ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ. ಆದರೆ, ಅವಕಾಶ ವಂಚಿತ ತಳಸಮುದಾಯಗಳ ಏಳಿಗೆಗೆ ಬದ್ಧನಾಗಿದ್ದೇನೆ ಎಂದರು. ಬಸವಣ್ಣನವರು ಇದೇ ಆಶಯದಿಂದ ಲಿಂಗಾಯತ ಧರ್ಮ, ಅನುಭವ ಮಂಟಪವನ್ನು ಸ್ಥಾಪಿಸಿದ್ದರು. ಶ್ರೇಣಿಕೃತ ಸಮಾಜ ವ್ಯವಸ್ಥೆಯನ್ನು ಕಿತ್ತೊಗೆದು ಸಮಾನತೆಯ ಸಮಾಜ ತಂದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವುದನ್ನು ಕಡ್ಡಾಯ ಮಾಡಲು ಇದೇ ಪ್ರೇರಣೆಯಾಗಿದೆ. ಇದರ ಹಿಂದೆ ಮತ ರಾಜಕಾರಣವಿಲ್ಲ. ಕೇವಲ ಬದ್ಧತೆಯಿದೆ ಎಂದು ಮುಖ್ಯಮಂತ್ರಿ ಹೇಳಿದರು.
 
ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಹಾಶರಣೆ ಅಕ್ಕಮಹಾದೇವಿ ಹೆಸರು ಇಡಲು ನಮ್ಮ ಸರಕಾರದ ಅನೇಕ ಸಚಿವರು ಸೂಚಿಸಿದರು. ಈ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ತಂದು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಸಮಸ್ತ ಕನ್ನಡಿಗರ ಏಕೈಕ ಮಹಿಳಾ ವಿವಿಗೆ ಈ ಹೆಸರನ್ನು ನಾಮಕರಣ ಮಾಡಿರುವುದು ನಮ್ಮ ಸರಕಾರದ ಹೆಮ್ಮೆಯ ಕಾರ್ಯವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಧರ್ಮ ಎಂದರೆ ಜನರಿಗಾಗಿ ಇರುವುದು. ಅದು ಜೀವನ ಮಾರ್ಗ, ಅದು ಮನುಷ್ಯತ್ವದಿಂದ ಕೂಡಿರುತ್ತದೆ. ಯಾವುದು ಮನುಷ್ಯರನ್ನು ವಿಭಜಿಸುತ್ತದೆಯೋ ಅದು ಧರ್ಮವೆನಿಸಿಕೊಳ್ಳಲು ಸಾಧ್ಯವಿಲ್ಲ. ಪಂಪ, ಬಸವಣ್ಣ, ಕುವೆಂಪು ಇದನ್ನೇ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಯಾರೂ ಕೂಡ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ಮಾನವೀಯ ಮೌಲ್ಯಗಳಿಗೆ ಅಂಟಿಕೊಂಡಿರಬೇಕು. ಮೌಢ್ಯಗಳಿಗೆ ಜೋತು ಬೀಳಬಾರದು. ಸಮಾಜ ಚಲನಶೀಲವಾಗಿರಬೇಕು. ಎಲ್ಲಿ ಚಲನೆ ಇರುವುದಿಲ್ಲವೋ ಅಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂದು ಎಂಟು ನೂರು ವರ್ಷಗಳಿಂದ ಸಮಾನತೆಯನ್ನು ಸಾರುವ ಬಸವಣ್ಣನ ಈ ವಚನವನ್ನು ಹೇಳುತ್ತಲೆ ಇದ್ದೇವೆ. ಜೊತೆಗೆ ಮರೆಯಲ್ಲಿ ವ್ಯಕ್ತಿಯ ಜಾತಿಯನ್ನು ಪತ್ತೆ ಹಚ್ಚುತ್ತಿರುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯಗಳು ಪ್ರತ್ಯೇಕ ಧ್ವಜವನ್ನು ಇಟ್ಟುಕೊಳ್ಳಬಾರದೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ರಾಷ್ಟ್ರಗೀತೆಯೊಂದಿಗೆ ನಾಡಗೀತೆ ಇದೆ. ಅದೇ ರೀತಿಯಲ್ಲೆ ನಾಡಧ್ವಜ ಇದ್ದರೆ ಏನು ಸಮಸ್ಯೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ನೀಡಿದರೆ ರಾಷ್ಟ್ರದ ಏಕತೆಗೆ ಧಕ್ಕೆಯಾಗುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News