ಶಾಟ್‌ಪುಟ್‌ ಅಥ್ಲೀಟ್‌ ಮನ್‌ಪ್ರೀತ್‌ ಕೌರ್ ತಾತ್ಕಾಲಿಕ ಅಮಾನತು

Update: 2017-07-20 18:39 GMT

ಹೊಸದಿಲ್ಲಿ, ಜು.20: ಭಾರತದ ಶಾಟ್‌ಪುಟ್ ಅಥ್ಲೀಟ್ ಮನ್‌ಪ್ರೀತ್ ಕೌರ್ ಎರಡನೆ ಬಾರಿ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ(ಎಎಫ್‌ಐ) ತಾತ್ಕಾಲಿಕವಾಗಿ ಅಮಾನತು ಮಾಡಿದೆ.

ಮನ್‌ಪ್ರೀತ್ ಕೌರ್ ಎರಡನೆ ಬಾರಿ ನಡೆದ ಪರೀಕ್ಷೆಯಲ್ಲಿ ನಿಷೇಧಿತ ಡಿಮೆಥೈಲ್‌ಬುಟೈಲ್‌ಮೈನ್ ಸೇವಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಎಎಫ್‌ಐ ಅಮಾನತು ಮಾಡಿದೆ.

ಪಟಿಯಾಲದಲ್ಲಿ ಜೂನ್ 1ರಿಂದ 4ರ ತನಕ ನಡೆದ ಫೆಡರೇಶನ್ ಕಪ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಸಂದರ್ಭದಲ್ಲಿ ಮನ್‌ಪೀತ್ ಅವರಿಂದ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ಮೂತ್ರದ ಮಾದರಿ ಸಂಗ್ರಹಿಸಿತ್ತು. ನಾಡಾ ನಡೆಸಿದ ಪರೀಕ್ಷೆಯಲ್ಲಿ ಅವರು ನಿಷೇಧಿತ ಡಿಮೆಥೈಲ್‌ಬುಟೈಲ್‌ಮೈನ್ ಸೇವಿಸಿರುವುದು ಬೆಳಕಿಗೆ ಬಂದಿದೆ. ಈ ಮೊದಲು ಎಪ್ರಿಲ್ 24ರಂದು ಚೀನಾದಲ್ಲಿ ನಡೆದ ಏಷ್ಯನ್ ಗ್ರಾನ್ ಪ್ರಿ ಕ್ರೀಡಾಕೂಟದ ಸಂದರ್ಭದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮನ್‌ಪ್ರೀತ್ ಕೌರ್ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಗೊತ್ತಾ ಗಿತ್ತ್ತು.

ಪಂಜಾಬ್‌ನ 27ರ ಹರೆಯದ ಮಹಿಳಾ ಅಥ್ಲೀಟ್ ಚೀನಾದಲ್ಲಿ ನಡೆದ ಕೂಟದಲ್ಲಿ 18.86 ಮೀಟರ್ ಸಾಧನೆಯೊಂದಿಗೆ ಚಿನ್ನ ಜಯಿಸಿ ಲಂಡನ್‌ನಲ್ಲಿ ಆಗಸ್ಟ್ 4ರಿಂದ 13ರ ತನಕ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವಕಾಶ ದೃಢಪಡಿಸಿದ್ದರು. ಆದರೆ ಇದೀಗ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಅವರು ಅವಕಾಶ ವಂಚಿತಗೊಂಡಿದ್ದಾರೆ.

ಮನ್‌ಪ್ರೀತ್ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರು ಚಿನ್ನ ಕಳೆದುಕೊಳ್ಳಲಿದ್ದಾರೆ.
ಜುಲೈ 18ರಂದು ಗುಂಟೂರಿನಲ್ಲಿ ನಡೆದ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿಯೂ ಅವರು ಚಿನ್ನ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News