​ಐಸಿಸಿ ಮಹಿಳಾ ವಿಶ್ವಕಪ್: ಭಾರತ ಫೈನಲ್‌ಗೆ

Update: 2017-07-21 03:46 GMT

ಲಂಡನ್, ಜು.21: ಮಹಿಳೆಯ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಗುರುವಾರ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಭಾರತ 36 ರನ್‌ಗಳ ರೋಚಕ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದೆ .

282 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ 40.1 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟಾ ಯಿತು. ಇದರೊಂದಿಗೆ ಭಾರತ 2ನೇ ಬಾರಿ ಫೈನಲ್ ಪ್ರವೇಶಿಸಿದಂತಾಗಿದೆ.

ಭಾರತದ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ(35ಕ್ಕೆ 2), ಶಿಖಾ ಪಾಂಡೆ (17ಕ್ಕೆ 2), ದೀಪ್ತಿ ಶರ್ಮ(59ಕ್ಕೆ 3), ರಾಜೇಶ್ವರಿ ಗಾಯಕ್ ವಾಡ್(62ಕ್ಕೆ 1) ಮತ್ತು ಪೂನಮ್ ಯಾದವ್(60ಕ್ಕೆ 1) ದಾಳಿಗೆ ಸಿಲುಕಿ ಗೆಲುವಿನ ದಡ ಸೇರುವಲ್ಲಿ ಎಡವಿತು. ಆಸ್ಟ್ರೇಲಿಯದ ಬ್ಲಾಕ್‌ವೆಲ್ 90 ರನ್ (58 ಎ, 10 ಬೌ, 3ಸಿ) ಮತ್ತು ಎಲಿಸ್ ವಿಲಾನಿ 75 ರನ್ (58ಎ, 13ಬೌ) ಗಳಿಸಿ ಹೋರಾಟ ನೀಡಿದರೂ ಫಲ ನೀಡಲಿಲ್ಲ

ಭಾರತ 281/4: ಆಸ್ಟ್ರೇಲಿಯ ವಿರುದ್ಧದ ಮಧ್ಯಮ ಸರದಿಯ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಔಟಾಗದೆ ದಾಖಲಿಸಿದ ಭರ್ಜರಿ ಶತಕದ ನೆರವಿನಿಂದ ಭಾರತ ನಿಗದಿತ 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 281ರನ್ ಗಳಿಸಿತ್ತು. ಹರ್ಮನ್ ಪ್ರೀತ್ ಕೌರ್ ಔಟಾಗದೆ 171 ರನ್(115ಎ, 20ಬೌ, 7ಸಿ) ಕಾಣಿಕೆ ನೀಡುವ ಮೂಲಕ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ನೀಡಲು ನೆರವಾದರು.

 ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆಟಗಾರ್ತಿಯರು ಆರಂಭದಲ್ಲಿ ಆಸ್ಟ್ರೇಲಿಯದ ಬೌಲರ್‌ಗಳ ದಾಳಿಯನ್ನು ಎದುರಿಸಲಾರದೆ ಒದ್ದಾಡಿದರು. ಸ್ಮತಿ ಮಂಧಾನ 6 ರನ್ ಮತ್ತು ಪೂನಮ್ ರಾವತ್ 14 ರನ್ ಗಳಿಸಿ ಪೆವಿಲಿಯನ್‌ಗೆ ವಾಪಸಾದಾಗ ನಾಯಕಿ ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ಕೌರ್ ತಂಡವನ್ನು ಆಧರಿಸಿದರು.

ಮಿಥಾಲಿ ರಾಜ್ ಮತ್ತು ಕೌರ್ ಮೂರನೆ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದರು. ಮಿಥಾಲಿ ರಾಜ್ 36 ರನ್(61ಎ, 2ಬೌ) ಗಳಿಸಿ ಔಟಾದರು. ನಾಲ್ಕನೆ ವಿಕೆಟ್‌ಗೆ ಕೌರ್‌ಗೆ ದೀಪ್ತಿ ಶರ್ಮ ಜೊತೆಯಾದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 137 ರನ್ ಜಮೆ ಆಗಿತ್ತು. 77ನೆ ಏಕದಿನ ಪಂದ್ಯವ ನ್ನಾಡುತ್ತಿರುವ ಕೌರ್ 90 ಎಸೆತ ಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಲ್ಲಿ 3ನೆ ಏಕದಿನ ಶತಕ ಪೂರ್ಣಗೊಳಿಸಿದರು. ನ್ಯೂಝಿಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಅರ್ಧಶತಕ (60) ದಾಖಲಿಸಿದ್ದ ಭಾರತದ ತಂಡದ ಉಪ ನಾಯಕಿ ಕೌರ್ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ದಾಖಲಿಸಿದರು.

ಆರಂಭದ ಎರಡು ವಿಕೆಟ್‌ಗಳನ್ನು ಬೇಗನೆ ಉಡಾಯಿಸಿದ್ದ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಬೌಲರ್‌ಗಳು ಕೌರ್ ಬ್ಯಾಟಿಂಗನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈ ಸುಟ್ಟುಕೊಂಡರು.

ದೀಪ್ತಿ ಶರ್ಮಾ 25 ರನ್, ವೇದಾ ಕೃಷ್ಣಮೂರ್ತಿ 16 ರನ್ ಗಳಿಸಿದರು. ಆಸ್ಟ್ರೇಲಿಯದ ಬೌಲರ್‌ಗಳಾದ ಮೆಗಾನ್ ಶ್ರುಟ್ 64ಕ್ಕೆ 1, ಅಶ್ಲೇಗ್ ಗಾರ್ಡೆನರ್ ಮತ್ತು ಕ್ರಿಸ್ಟನ್ ಬೀಮ್ಸ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News