ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು, ಜು.21: ಭಾಷಣದ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸಿದ ಆರೋಪದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೆಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಅಭಿಯೋಜನೆಗೆ(ಪ್ರಾಸಿಕ್ಯೂಷನ್) ಪೂರ್ವಾನುಮತಿ ನೀಡಿದ ಸರಕಾರದ ಆದೇಶ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಬಂಟ್ವಾಳ ತಾಲೂಕಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಿಟ್ಲ ಮತ್ತು ಬಂಟ್ವಾಳ ಟೌನ್ ಪೊಲೀಸರು ದಾಖಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಪ್ರಭಾಕರ ಭಟ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಅರ್ಜಿಯ ಮುುಂದಿನ ಆದೇಶದವರೆಗೆ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ(ಅಪರಾಧ), ವಿಟ್ಲ ಮತ್ತು ಬಂಟ್ವಾಳ ಟೌನ್ ಠಾಣಾ ಪೊಲೀಸರು ಮತ್ತು ದೂರುದಾರರಾದ ಎನ್.ಅಬ್ದುಲ್ಲಾ ನಡಜೆ ಮತ್ತು ಅಬೂಬಕ್ಕರ್ ಸಿದ್ದೀಖ್ ಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣವೇನು: ಹಿಂದು ಹಿತರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರ ಡಿ.2ರಂದು ಆಯೋಜಿಸಿದ್ದ ಹಿಂದೂ ಶಕ್ತಿ ಸಂಗಮ ಮತ್ತು ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು, ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಎನ್.ಅಬ್ದುಲ್ಲಾ ನಡಜೆ ವಿಟ್ಲ ಪೊಲೀಸ್ ಠಾಣೆ ಮತ್ತು ಅಬೂಬಕರ್ ಸಿದ್ದೀಖ್ ಬಂಟ್ವಾಳ ಟೌನ್ ಪೊಲೀಸರಿಗೆ ದೂರು ನೀಡಿದ್ದರು. ಈ ಎರಡು ಪ್ರಕರಣಗಳ ಸಂಬಂಧ ಪ್ರತ್ಯೇಕ ತನಿಖೆ ನಡೆಸಿದ್ದ ವಿಟ್ಲ ಠಾಣಾ ಮತ್ತು ಬಂಟ್ವಾಳ ಟೌನ್ ಠಾಣಾ ಪೊಲೀಸರು ಪ್ರಭಾಕರ ಭಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಗೃಹ ಇಲಾಖೆಯಿಂದ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿದ್ದರು. ಅದರಂತೆ ಗೃಹ ಇಲಾಖೆ ಕಾರ್ಯದರ್ಶಿಗಳು 2017ರ ಮಾರ್ಚ್ 30ರಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.
ಆ ಪೂರ್ವಾನುಮತಿಯೊಂದಿಗೆ ವಿಟ್ಲ ಠಾಣಾ ಪೊಲೀಸರು ಮತ್ತು ಬಂಟ್ವಾಳ ಟೌನ್ ಪೊಲೀಸರು 2016ರ ಜೂನ್ 15ರಂದು ಪ್ರಭಾಕರ ಭಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಎರಡೂ ಪ್ರಕರಣಗಳ ಸಂಬಂಧ ದೂರುದಾರರ ಪ್ರಮಾಣಿಕೃತ ಹೇಳಿಕೆ ದಾಖಲಿಸಿಕೊಂಡಿದ್ದ ಬಂಟ್ವಾಳ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಭಾಕರ ಭಟ್ ಅವರು ತಮ್ಮ ವಿರುದ್ಧದ ಈ ಪ್ರಕರಣ ರದ್ದುಪಡಿಸಲು ಕೋರಿದ್ದರು.