ವೆಂಕಟ್ರಮಣ ಭಟ್

Update: 2017-07-21 18:16 GMT

ಪುತ್ತೂರು, ಜು. 21: ಆಯುರ್ವೇದ ವೈದ್ಯಲೋಕದ ನಡೆದಾಡುವ ವಿಶ್ವಕೋಶ ಎಂದೇ ಹೆಸರುವಾಸಿಯಾಗಿದ್ದ ಗಿಡಮೂಲಿಕಾ ನಾಟಿ ವೈದ್ಯ ಪುತ್ತೂರು ತಾಲ್ಲೂಕಿನ ಪಾಣಾಜೆ ಗ್ರಾಮದ ದೈತೋಟ ನಿವಾಸಿ ವೆಂಕಟ್ರಮಣ ಭಟ್(77) ಅವರು ಶುಕ್ರವಾರ ನಿಧನರಾದರು.

ಎಂಜಿನಿಯರ್ ವೃತ್ತಿಯಲ್ಲಿದ್ದ ವೆಂಕಟ್ರಮಣ ಭಟ್ ಅವರು ತಮ್ಮ ಈ ವೃತ್ತಿಯನ್ನು ತ್ಯಜಿಸಿ ಪರಂಪರಾಗತವಾಗಿ ಬಂದಿದ್ದ ಆಯುರ್ವೇದಿಕ್ ನಾಟಿ ವೈದ್ಯ ವೃತ್ತಿಯನ್ನು ಮುಂದುವರಿಸಿದ್ದರು. ರೋಗಿಗಳನ್ನು ಉಚಿತವಾಗಿ ತಪಾಸಣೆಗೊಳಿಸಿ ಆಯುರ್ವೇದ ಔಷಧಿ ನೀಡುತ್ತಿದ್ದರು. ಸ್ತ್ರೀರೋಗ, ಕ್ಯಾನ್ಸರ್ ಸಹಿತ ಎಲ್ಲಾ ವಿದಧ ರೋಗಗಳಿಗೂ ಚಿಕಿತ್ಸೆ ನೀಡುವ ಮೂಲಕ ಜನಪ್ರಿಯ ಆರ್ಯುವೇದ ಪಂಡಿತರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

ತಮ್ಮ ವೃದ್ದಾಪ್ಯ ವಯಸ್ಸಿನಲ್ಲಿಯೂ ಅತ್ಯಂತ ಚಟುವಟಿಕೆಯುಕ್ತರಾಗಿದ್ದ ವೆಂಕಟ್ರಮಣ ಭಟ್ ಅವರು ಶುಕ್ರವಾರ ಪುತ್ತೂರಿಗೆ ತೆರಳಲೆಂದು ತಮ್ಮ ಮನೆಯಿಂದ ಕರ್ನಾಟಕ ಕೇರಳ ಗಡಿಪ್ರದೇಶದ ಸ್ವರ್ಗ ಎಂಬಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣಕ್ಕೆ ಬಂದು ಪುತ್ತೂರಿಗೆ ಬರುವ ಖಾಸಗಿ ಬಸ್ಸೊಂದನ್ನು ಏರುತ್ತಿದ್ದ ವೇಳೆ ಕುಸಿದುಬಿದ್ದರು. ತಕ್ಷಣ ಅವರನ್ನು ಪುತ್ತೂರಿಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದು ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಖ್ಯಾತ ಪರಿಸರವಾದಿ ದಿವಂಗತ ಶಂಪಾ ದೈತೋಟ, ಪತ್ರಕರ್ತ ಈಶ್ವರ ದೈತೋಟ ಅವರ ಸಹೋದರರಾಗಿದ್ದ ವೆಂಕಟ್ರಮಣ ಭಟ್ ಅವರು ವೃತ್ತಿಗಿಂತ ತಮ್ಮ ನಾಟಿ ಚಿಕಿತ್ಸೆಯ ಪ್ರವೃತ್ತಿಯ ಮೂಲಕ ಮನೆ ಮಾತಾಗಿದ್ದರು. ಉತ್ತರ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ರೋಗಿಗಳು ಬಂದು ಅವರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸಸ್ಯ ಶಾಸ್ತ್ರ ಪರಿಣತರಾಗಿದ್ದ ಭಟ್ ಅವರು ಪ್ರತಿಯೊಂದು ಸಸ್ಯದ ಪರಿಚಯವುಳ್ಳವರಾಗಿದ್ದರು. ಸಸ್ಯ ಶಾಸ್ತ್ರಕ್ಕೆ ಸಂಬಂಧಿಸಿ ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಕೃಷಿಪರ ಮಾಸ ಪತ್ರಿಕೆಯಾದ ‘ಅಡಿಕೆ ಪತ್ರಿಕೆ’ ಜೊತೆ ನಿಕಟ ಒಡನಾಟ ಹೊಂದಿದ್ದರು. ಗಿಡಮೂಲಿಕೆ ಔಷಧಿಗಳಿಗೆ ಸಂಬಂಧಿಸಿದ ಅವರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿದೆಡೆಗಳಲ್ಲಿ ‘ಆಹಾರ ಔಷಧಿ ’ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದ ವೆಂಕಟ್ರಮಣ ಭಟ್ ಅವರು ಸಸ್ಯ ಪ್ರಬೇಧಗಳ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರು. ಮೃತರು ಪತ್ನಿ ಮತ್ತು ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ