×
Ad

ಸಾಲ ಮನ್ನಾ: ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

Update: 2017-07-22 19:32 IST

ಬೆಂಗಳೂರು, ಜು.22: ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ತೀವ್ರ ಬರಗಾಲದಿಂದ ಬಳಲುತ್ತಿರುವ ರೈತರಿಗೆ ರಾಜ್ಯ ಸರಕಾರ 50ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡುವ ಮೂಲಕ ನೆರವಾಗಿದೆ. ಅದೇ ಮಾದರಿಯಲ್ಲಿ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಹಲವಾರು ಬಾರಿ ಒತ್ತಾಯಿಸಲಾಗಿದೆ. ಆದರೂ ರೈತರ ಕುರಿತು ಕೇಂದ್ರ ಸರಕಾರ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಕಿಡಿಕಾರಿದರು.

ಈ ವೇಳೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ರಕ್ಷರಾಮಯ್ಯ ಮಾತನಾಡಿ, ಬರಗಾಲಕ್ಕೆ ತುತ್ತಾಗಿರುವ ರೈತರು ಸಾಕಷ್ಟು ಧಣಿದಿದ್ದಾರೆ. ಅವರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನ್ನ ಪಾಲಿಗೆ ಸೇರಿದ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಉಳಿದ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಸಾಲವನ್ನು ಮನ್ನಾ ಮಾಡುವುದಿಲ್ಲ ಎಂದು ಕೇಂದ್ರ ಸರಕಾರದ ಹೇಳಿಕೆ ಸರಿಯಲ್ಲ. ಈ ರೀತಿಯಲ್ಲಿ ದೇಶದ ಬೆನ್ನೆಲುಬಾಗಿರುವ ರೈತರನ್ನು ನಿರ್ಲಕ್ಷಿಸುವುದು ಸರಿಯಲ್ಲ. ದೇಶದಲ್ಲಿ ಅನ್ನ ಕೊಡುವ ರೈತರ ಬದುಕು ಹಸನಾಗದೆ, ದೇಶದ ಅಭಿವೃದ್ಧಿ ಗೆ ಯಾವ ಅರ್ಥವು ಇರುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಂಭೀರವಾಗಿ ಚಿಂತಿಸಿ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News