×
Ad

​ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿಕೊಳ್ಳುತ್ತೇನೆ: ಝಮೀರ್‌ ಅಹ್ಮದ್

Update: 2017-07-22 19:38 IST

ಬೆಂಗಳೂರು, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ ನನ್ನ ರುಂಡವನ್ನೇ ಕತ್ತರಿಸಿ ಮಾಧ್ಯಮದವರ ಕೈಗೆ ಇಡುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಬಿ.ಝೆಡ್.ಝಮೀರ್‌ ಅಹ್ಮದ್‌ಖಾನ್ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿರಲಿ, ಕನಿಷ್ಠ ಠೇವಣಿಯನ್ನು ಉಳಿಸಿಕೊಳ್ಳಲಿ ಸಾಕು. ಒಂದು ವೇಳೆ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿಕೊಂಡು ಮಾಧ್ಯಮದವರ ಕೈಗೆ ಇಡುತ್ತೇನೆ ಎಂದರು.

"2005ರಲ್ಲಿ ಚಾಮರಾಜಪೇಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ದೇವೇಗೌಡರು ನನಗಾಗಿ 20 ದಿನಗಳ ಕಾಲ ಇಲ್ಲೇ ಇದ್ದು, ದರಿದ್ರ ನಾರಾಯಣ ರ್ಯಾಲಿ ಆಯೋಜಿಸಿ, ಮನೆ, ಮನೆ, ಬೀದಿ ಬೀದಿಗೆ ತೆರಳಿ ಪ್ರಚಾರ ಮಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಝಮೀರ್‌ ಅಹ್ಮದ್ ತಿಳಿಸಿದರು.

"ನಾನು ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅವರ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲ. ನಾವು ಕುಮಾರಸ್ವಾಮಿಗೆ ಏನು ಅನ್ಯಾಯ ಮಾಡಿದ್ದೇವೆ ಎಂಬುದರ ಬಗ್ಗೆ ನೇರವಾಗಿ ಕುಮಾರಸ್ವಾಮಿ ಜೊತೆಯೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಈ ಹಿಂದೆಯೇ ಹೇಳಿದ್ದೇನೆ" ಎಂದು ಅವರು ಹೇಳಿದರು.

"ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರು ಹೊರಟಿದ್ದಾರೆ. ಅವರ ವಿಜಯಯಾತ್ರೆಯನ್ನು ಚಾಮರಾಜಪೇಟೆಯಿಂದಲೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ 224 ಕ್ಷೇತ್ರಗಳಿವೆ. ಅವುಗಳನ್ನೆಲ್ಲ ಬಿಟ್ಟು ಕೇವಲ ಈ ಕ್ಷೇತ್ರವೊಂದರಲ್ಲಿ ಮಾತ್ರ ಗೆಲ್ಲಿಸಿ ಮುಖ್ಯಮಂತ್ರಿ ಮಾಡುವುದಾದರೆ ಸಂತೋಷ" ಎಂದು ಝಮೀರ್‌ಅಹ್ಮದ್ ತಿಳಿಸಿದರು.

"ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಎರಡು ಬಾರಿಯೂ ಒಕ್ಕಲಿಗರನ್ನೆ ಆಯ್ಕೆ ಮಾಡಿದ್ದಾರೆ. ಆಗ ಯಾಕೆ ಅವರಿಗೆ ಮುಸ್ಲಿಮರು ನೆನಪಾಗಲಿಲ್ಲ. ಈಗ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವ ಮಾತುಗಳನ್ನಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಗೌರವವಿದೆ. ಅವರ ಬಾಯಿಯಲ್ಲಿ ಈ ರೀತಿಯ ಮಾತುಗಳು ಬರಬಾರದಿತ್ತು ಎಂದು ಅವರು ಹೇಳಿದರು. ದೇವೇಗೌಡರು ಈ ರೀತಿಯ ರಾಜಕೀಯ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲು ಒಂದು ತಿಂಗಳಿನಿಂದ ಅವರು ಶ್ರಮಿಸಿದ್ದಾರೆ. ಆ ಸಮಾವೇಶಕ್ಕೆ ನಾನೇಕೆ ಅಡ್ಡಿಪಡಿಸಲಿ. ಅಲ್ಲಿ ಎಷ್ಟು ಜನ ಸೇರುತ್ತಾರೆ, ಯಾರು ಹೋಗುತ್ತಾರೆ ಎಂಬ ಮಾಹಿತಿ ನನಗೂ ಬೇಕಲ್ಲವೆ, ಮುಂದಿನ ಚುನಾವಣೆಯ ಸಿದ್ಧತೆಗಾಗಿ ಎಂದು ಅವರು ತಿಳಿಸಿದರು.
2005ರ ಚುನಾವಣೆ ನಂತರ ನನ್ನ ಕ್ಷೇತ್ರಕ್ಕೆ ಪಕ್ಷದ ಯಾವೊಬ್ಬ ನಾಯಕನನ್ನು ಪ್ರಚಾರಕ್ಕೆ ನಾನು ಕರೆ ತಂದಿಲ್ಲ. ಸ್ವಂತ ಶಕ್ತಿಯ ಆಧಾರದಲ್ಲಿ ಚುನಾವಣೆಗಳನ್ನು ಗೆದ್ದು ಬರುತ್ತಿದ್ದೇನೆ. 2004ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದಿದ್ದರು ಎಂಬುದನ್ನು ಒಮ್ಮೆ ಆಲೋಚನೆ ಮಾಡಲಿ" ಎಂದು ಅವರು ಹೇಳಿದರು.

"ಅದೇ ನಂತರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಕೇವಲ ಇಬ್ಬರು ಜಯಗಳಿಸಿದ್ದರೂ, ಪಡೆದದ್ದು 57 ಸಾವಿರ ಮತಗಳು. ಚಾಮರಾಜಪೇಟೆಯ ಜನ ನನ್ನ ಮುಖ ನೋಡಿಕೊಂಡು ಜೆಡಿಎಸ್‌ಗೆ ಮತ ನೀಡುತ್ತಾರೆ. ಈ ಕ್ಷೇತ್ರದ ಜನ ನನ್ನನ್ನು ರಾಜಕಾರಣಿ, ಶಾಸಕ ಎಂದು ಪರಿಗಣಿಸಿಲ್ಲ. ಎಲ್ಲರೂ ನನ್ನನ್ನು ಅವರ ಮನೆಯ ಮಗನನ್ನಾಗಿ ಭಾವಿಸಿದ್ದಾರೆ" ಎಂದು ಝಮೀರ್‌ ಅಹ್ಮದ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News