ಮೆರವಣಿಗೆಯ ಮೂರ್ತಿಗಳಾದ ಬುದ್ಧ, ಬಸವ, ಅಂಬೇಡ್ಕರ್: ನಿಡುಮಾಮಿಡಿ ಬೇಸರ
ಬೆಂಗಳೂರು,ಜು. 22: ಸಮಾಜ ಸುಧಾರಕರಾದ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಮೆರವಣಿಗೆ ಮೂರ್ತಿಗಳನ್ನಾಗಿ ಮಾಡುವ ಬದಲು, ಅವರ ತತ್ವ ಸಿದ್ಧಾಂತಗಳನ್ನು ಪುನರ್ ಅವಲೋಕಿಸುವುದು ಅಗತ್ಯವಿದೆ ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಡಾ.ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ನಿಡುಮಾಮಿಡಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ವೆಂಕಟಯ್ಯ ಅಪ್ಪಗೆರೆ ಬರೆದಿರುವ ‘ಬೌದ್ಧ ಮಹಾ ಮಹಿಳೆಯರು’ ಹಾಗೂ ಡಾ.ಎಚ್.ಎಸ್.ಎಂ ಪ್ರಕಾಶ್ ಅನುವಾದಿಸಿದ ‘ರ್ಯಾಷನಲಿಸ್ಟ್ ಮ್ಯೂಸಿಂಗ್ಸ್’ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಪ್ರತಿಮೆಗಳು ಅಳತೆಯಲ್ಲಿ ಮಾತ್ರ ಎತ್ತರದಲ್ಲಿವೆಯೇ ಹೊರತು, ಅವರ ತತ್ವ ಆದರ್ಶಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಸ್ತಿಕರೆಂದು ತೋರಿಸಿಕೊಳ್ಳುವುದು ಇಂದು ದೊಡ್ಡ ಪ್ರತಿಷ್ಠೆಯಾಗಿದೆ. ಇದರಿಂದ ನಾಗರಿಕ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಅತ್ಯುತ್ತಮವಾದ ನಾಸ್ತಿಕತೆ ಬಸವಣ್ಣ, ಅಂಬೇಡ್ಕರ್ ಅವರ ಮಾರ್ಗದಲ್ಲಿದೆ ಎಂದ ಅವರು, ಮನುಷ್ಯನ ಅಂತರಂಗದ ಶಕ್ತಿಯನ್ನು ಚಲನಶೀಲಗೊಳಿಸಲು ಶರಣರ ವಿಚಾರಧಾರೆಗಳನ್ನು ಅನುಸರಿಸಬೇಕಿದೆ ಎಂದರು.
ಲೇಖಕ ಡಾ.ವೆಂಕಟಯ್ಯ ಅಪ್ಪಗೆರೆ ಮಾತನಾಡಿ, ವೈಚಾರಿಕ ಚಿಂತನೆಗಳ ಮಹತ್ವದ ಅಂಶಗಳನ್ನು ಒಳಗೊಂಡ ಪುಸ್ತಕಗಳು ಹುಡುಕಿದರೂ ಸಿಗುತ್ತಿಲ್ಲ. ಸಾಮನ್ಯ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಂತೆ ಬೋಧಿದತ್ತ, ಚಿಂತಕ ಡಾ.ಜಿ.ರಾಮಕೃಷ್ಣ, ಸಾಹಿತಿ ಎನ್.ಡಿ.ವೆಂಕಮ್ಮ ಸೇರಿದಂತೆ ಇತರರು ಇದ್ದರು.