‘ಮನುವಾದ ಅರಿತರೆ ಮಾತ್ರ ಅಂಬೇಡ್ಕರ್ ವಾದ ಕಾರ್ಯರೂಪಕ್ಕೆ ತರಲು ಸಾಧ್ಯ’
ಬೆಂಗಳೂರು, ಜು. 22: ದಲಿತ ಚಳವಳಿ ಮತ್ತು ಅಂಬೇಡ್ಕರ್ ವಾದವನ್ನು ಮುನ್ನಡೆಸುವವರು ‘ಮನುವಾದ’ವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿರುವುದೇ ಚಳವಳಿ ವೈಫಲ್ಯಕ್ಕೆ ಮೂಲ ಕಾರಣ ಎಂದು ದಲಿತ ಮುಖಂಡ ಎನ್.ಮುನಿಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಗಾಂಧಿ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ‘ಅಂಬೇಡ್ಕರ್ ವಾದ ಮತ್ತು ಕರ್ನಾಟಕದ ದಲಿತ ಚಳವಳಿಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುವಾದ ಅರ್ಥವಾಗದಿದ್ದರೆ ಅಂಬೇಡ್ಕರ್ ವಾದವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದರು.
ದಲಿತ ಚಳವಳಿಯಲ್ಲಿ ಸುದೀರ್ಘ ಅವಧಿ ಕೆಲಸ ಮಾಡುತ್ತಿರುವ ನಾಯಕರು ಮನುವಾದ ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದೇವೆ ಎಂದು ಒಪ್ಪಿಕೊಂಡ ಅವರು, ಅಂಬೇಡ್ಕರ್ ವಾದವನ್ನು ಕಾರ್ಯರೂಪಕ್ಕೆ ತರಲು ಮನುವಾದ ದೊಡ್ಡ ಶತ್ರುವಾಗಿದೆ ಎಂದು ಹೇಳಿದರು. ಜಾತಿ, ಅಸ್ಪಶ್ಯತೆ ನಿವಾರಣೆ, ಸಮಾನತೆಗಾಗಿನ ದಲಿತ ಚಳವಳಿ ಬುದ್ಧ, ಬಸವ, ಅಂಬೇಡ್ಕರ್ ದಾರಿಯಲ್ಲಿ ಸಾಗಬೇಕಿದೆ ಎಂದ ಅವರು, ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಮತ್ತು ಮೀಸಲಾತಿ ಸಂರಕ್ಷಣೆಗಾಗಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ಸ್ವಾರ್ಥ ಬಿಟ್ಟು ಒಗ್ಗೂಡಿ: ದಲಿತ ಚಳವಳಿ ಒಡೆದದ್ದು, ಸಿದ್ಧಾಂತಕ್ಕಾಗಿ ಅಲ್ಲ. ಬದಲಿಗೆ ವೈಯಕ್ತಿಕ ಹಿತಾಸಕ್ತಿಗಾಗಿ. ಹೀಗಾಗಿ ಎಲ್ಲ ಮುಖಂಡರು ತಮ್ಮ ಸ್ವಾರ್ಥ ಬದಿಗಿಟ್ಟು ದಲಿತರ ಸಮಸ್ಯೆಗಳಿಗಾಗಿ ಒಗ್ಗೂಡಬೇಕೆಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಳವಣಿಗೆಗೆ ದಲಿತ ಚಳವಳಿ ಪಾತ್ರ ಮಹತ್ವದ್ದು. ಅವರು ‘ಅಹಿಂದ’ ಚಳವಳಿಯನ್ನು ಬೆಳೆಸಿದರು ಎಂದ ಅವರು, ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಅಗತ್ಯ ಎಂದರು.
ಗುರುಪ್ರಸಾದ್ ಕೆರಗೋಡು, ಡಿ.ಜಿ.ಸಾಗರ್, ಮಾವಳ್ಳಿ ಶಂಕರ್, ಮೋಹನ್ ರಾಜ್, ಎಂ.ಮಹದೇವಸ್ವಾಮಿ, ವಿ.ನಾಗರಾಜ್, ಸಿ.ಎಂ.ಮುನಿಯಪ್ಪ, ಎನ್.ಮೂರ್ತಿ ಸೇರಿದಂತೆ ಇನ್ನಿತರ ಮುಖಂಡರು ಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.