ಖಾಸಗೀಕರಣದಿಂದ ವಿದ್ಯಾವಂತ ಜೀತಗಾರಿಕೆ: ಕೃಷ್ಣಪ್ಪ
ಬೆಂಗಳೂರು, ಜು.22: ಹೊಸ ಆರ್ಥಿಕ ನೀತಿಯ ದುಷ್ಪರಿಣಾಮಗಳಿಂದ ಬಂದ ಜಾಗತೀಕರಣ ಮತ್ತು ಖಾಸಗೀಕರಣಗಳನ್ನು ನಾವಿಂದು ಎದುರಿಸಲು ಸಾಧ್ಯವಿಲ್ಲ. ಖಾಸಗೀಕರಣದಿಂದ ವಿದ್ಯಾವಂತ ಜೀತಗಾರಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ದಲಿತ ಹೋರಾಟಗಾರ ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ‘ಜಾಗತಿಕರಣ, ಖಾಸಗೀಕರಣ ಮತ್ತು ದಲಿತರು’ ಎಂಬ ವಿಷಯದ ಕುರಿತು ಮಾತನಾಡದ ಅವರು, ಖಾಸಗಿ ವಲಯದಲ್ಲಿಂದು ನಾವು ಮೀಸಲಾತಿಯನ್ನು ಕಾಣುವುದು ಸಾಧ್ಯವಿಲ್ಲ ಎಂದರು.ಖಾಸಗಿ ವಲಯ ಮೀಸಲಾತಿ, ಸಮಾನತೆಗೆ ವಿರುದ್ಧವಿದ್ದು, ಖಾಸಗೀಕರಣ ಆರ್ಥಿಕ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಇದು ಸಲ್ಲದು, ಖಾಸಗೀಕರಣ ಅಭಿವೃದ್ಧಿಗೆ ಪೂರಕವಾಗಿರಬೇಕು. ಖಾಸಗಿ ರಂಗದಲ್ಲಿಯೂ ಮೀಸಲಾತಿ ಕಲ್ಪಿಸಬೇಕು ಎಂದು ಕೃಷ್ಣಪ್ಪ ಪ್ರತಿಪಾದಿಸಿದರು.
ಸರಕಾರಿ ಯೋಜನೆಗಳ ಮೂಲಕ ಸಮಾಜದಲ್ಲಿ ಸಮಾನತೆ, ಶಾಂತಿ ಕಾಪಾಡುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದ ನಿವೃತ್ತ ಅಧಿಕಾರಿ ರುದ್ರಪ್ಪಹನಗವಾಡಿ, ಯೋಜನೆಗಳ ಸದ್ಬಳಕೆ ಗರಿಷ್ಠಮಟ್ಟದಲ್ಲಿ ಆಗಬೇಕೆಂಬುದು ಅಂಬೇಡ್ಕರ್ ಅವರ ವಾದವಾಗಿತ್ತು ಎಂದರು.
ಪ್ರೊ.ಅನಸೂಯ ಕಾಂಬಳೆ ಮಾತನಾಡಿ, ಖಾಸಗೀಕರಣ ಮತ್ತು ಜಾಗತೀಕರಣ ಮನುಷ್ಯನನ್ನು ಇಂದು ಮಾರಾಟದ ಸರಕನ್ನಾಗಿಸಿದೆ. ಇದು ಖಾಸಗೀಕರಣ ಹಾಗೂ ಜಾಗತೀಕರಣದ ಭೀಕರ ದುರಂತ. ಕಾರ್ಪೊರೇಟ್ ಕಾಯಿದೆಯಿಂದಾಗಿ ಖಾಸಗಿ ಆಸ್ತಿ ಕೆಲವೇ ಜನರ ಪಾಲಾಗಿರುವುದನ್ನು ನಾವಿಂದು ಕಾಣಬಹುದು ಎಂದು ಬೇಸರ ವ್ಯಕ್ತಪಡಿಸಿದರು.