ಬೌದ್ಧ ಧರ್ಮ ರಾಷ್ಟ್ರೀಯ ಧರ್ಮವಾಗಲಿ: ಭಗವಾನ್

Update: 2017-07-22 15:01 GMT

ಬೆಂಗಳೂರು, ಜು.22: ಬೌದ್ಧ ಧರ್ಮಕ್ಕೂ ಮತ್ತು ಲಿಂಗಾಯತ ಧರ್ಮಕ್ಕೂ ಸಾಮ್ಯತೆ ಇದ್ದು, ಒಂದರ್ಥದಲ್ಲಿ ಎರಡು ಒಂದೇ. ಬಸವಣ್ಣನ ವಚನಗಳಲ್ಲಿ ಬುದ್ಧನ ಪಂಚಶೀಲ ತತ್ವಗಳಿವೆ. ಬಸವಣ್ಣ, ಬುದ್ಧನ ತತ್ವಗಳಿಂದ ಪ್ರಭಾವಿತನಾಗಿದ್ದ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ಪ್ರತ್ಯೇಕ ಧರ್ಮ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಪಾದಿಸಿದರು.

ಬೌದ್ಧ ಧರ್ಮ ರಾಷ್ಟ್ರೀಯ ದಮ್ಮ: ಬೌದ್ಧ ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ ಒಪ್ಪಿಕೊಳ್ಳಬೇಕು. ಬೌದ್ಧ ಧರ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ದಮ್ಮ. ಜತೆಗೆ ಸಾಮ್ರಾಟ್ ಅಶೋಕನಿಂದ ಪ್ರಾರಂಭಿಸಿ ರಾಷ್ಟ್ರಾದ್ಯಂತ ಹರಡಿಕೊಂಡಿರುವುದು ಬೌದ್ಧ ಧರ್ಮ ಎಂದು ಹೇಳಿದರು.

ರಾಷ್ಟ್ರದಲ್ಲಿ ಅರಳಿ ಮರಕ್ಕೆ ಎಲ್ಲರೂ ಮಾನ್ಯತೆ ನೀಡುತ್ತಾರೆ. ಬುದ್ಧನ ತಂದೆ ಚಿನ್ನದ ನೇಗಿಲಲ್ಲಿ ಹೊಲ ಉಳುತ್ತಿದ್ದರು. ಅದಕ್ಕೆ ಈಗಲೂ ನಮ್ಮ ಗ್ರಾಮೀಣ ಪ್ರದೇಶದ ಜನರು ಯುಗಾದಿ ಹಬ್ಬದ ಸಂದರ್ಭದಲ್ಲಿ 'ಹೊನ್ನಾರು' ಉಳುಮೆ ಆರಂಭಿಸುತ್ತಾರೆ ಎಂದು ಭಗವಾನ್ ವಿಶ್ಲೇಷಿಸಿದರು.

'ಕಳಬೇಡ ಕೊಲ ಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ' ಎಂಬ ಬಸವಣ್ಣನ ವಚನ ಬುದ್ಧನ ಪಂಚಶೀಲ ತತ್ವದ ಕನ್ನಡ ರೂಪ. ಹೀಗಾಗಿ ಬೌದ್ಧ ಧರ್ಮಕ್ಕೆ ಲಿಂಗಾಯತ ಧರ್ಮ ಅತ್ಯಂತ ಸಮೀಪದಲ್ಲಿದೆ. ಹೀಗಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದರು.

ಕನ್ನಡ ಧ್ವಜ ಬೇಕು: ಭುವನೇಶ್ವರಿ ಭಾವಚಿತ್ರ ಸಹಿತ ಇರುವ ಕನ್ನಡ ಧ್ವಜಕ್ಕೆ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕು. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸರಕಾರ ಸಮಿತಿ ರಚನೆ ಮಾಡಿರುವುದು ಸ್ವಾಗತಾರ್ಹ ಎಂದು ಭಗವಾನ್ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News