ಮೇಕೆದಾಟು ಯೋಜನೆ: ಜಲಸಂಪನ್ಮೂಲ ಸಚಿವರ ಸ್ಪಷ್ಟೀಕರಣ

Update: 2017-07-22 15:11 GMT

ಬೆಂಗಳೂರು, ಜು.22: ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಯ ಪಟ್ಟಣಗಳು, ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು, ವಿದ್ಯುತ್ ಉತ್ಪಾದಿಸಲು ಹಾಗೂ ಕಾವೇರಿ ನ್ಯಾಯಾಧೀಕರಣದ ಆದೇಶದನ್ವಯ ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ ಹರಿಯಬೇಕಾಗಿರುವ ನೀರಿನ ಪ್ರಮಾಣವನ್ನು ನಿಯಂತ್ರಿಸಲು ರೂಪಿಸಲಾಗಿರುವ 5912 ಕೋಟಿ ರೂ.ಅಂದಾಜು ವೆಚ್ಚದ ಮೇಕೆದಾಟು ಯೋಜನಾ ವರದಿಗೆ ಪ್ರಸಕ್ತ ಸಾಲಿನ ಮಾ.13ರಂದು ತಾತ್ವಿಕ ಅನುಮೋದನೆಯನ್ನು ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಈ ಯೋಜನಾ ವರದಿಯನ್ನು ಪರಿಗಣನೆ ಹಾಗೂ ತೀರುವಳಿಗಾಗಿ ಜೂ.6ರ ಪತ್ರದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಜಲ ಆಯೋಗದ ಮಾನಿಟರಿಂಗ್ ಸೌತ್ ಮುಖ್ಯ ಇಂಜಿನಿಯರ್‌ಗೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಜಲ ಆಯೋಗವು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಜು.7ರ ಪತ್ರದಲ್ಲಿ ಸಲ್ಲಿಸಲಾಗಿದ್ದ ಯೋಜನಾ ವರದಿಯನ್ನು ಪರಿಶೀಲಿಸಿ, ಅಂತರ ರಾಜ್ಯ ವಿಷಯಗಳು, ಸಕ್ಷಮ ಪ್ರಾಧಿಕಾರಿಗಳ ತೀರುವಳಿ ಹಾಗೂ ಇನ್ನಿತರೆ ಕೆಲವು ತಾಂತ್ರಿಕ ಅಂಶಗಳ ಕುರಿತು ಸ್ಪಷ್ಟೀಕರಣಗಳನ್ನು ಕೋರಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ರಾಜ್ಯದ ಮೇಕೆದಾಟು ಯೋಜನೆಯನ್ನು ಕೇಂದ್ರ ಜಲ ಆಯೋಗವು ಕೆಲವು ತಾಂತ್ರಿಕ ವಿಷಯಗಳಿಗೆ ಸ್ಪಷ್ಟೀಕರಣ ಕೋರಿದೆ. ಇತ್ತೀಚಿನ ಕೇಂದ್ರ ಜಲ ಆಯೋಗದ ಮಾರ್ಗದರ್ಶಿಗಳನ್ವಯ ವರದಿಯನ್ನು ಸ್ಪಷ್ಟೀಕರಣ ಹಾಗೂ ವಿವರಣೆಗಳೊಂದಿಗೆ ಸಿದ್ಧಪಡಿಸಿ, ಸರಕಾರದಿಂದ ಸಲ್ಲಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಜಾಗ್ರತೆ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗದ ಅನುಮೋದನೆಗಾಗಿ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News