ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮಗಳು ಪರಿಣಾಮಕಾರಿ: ಮಾರ್ಟಿನ್ ಲೂಥರ್ ಕಿಂಗ್-3
ಬೆಂಗಳೂರು, ಜು. 22: ಸಮಾಜದಲ್ಲಿ ಸಾಮಾಜಿಕ ಬದಲಾವಣೆ ಅಹಿಂಸಾ ಮಾರ್ಗದಿಂದಲೇ ಆಗಬೇಕಿದೆ. ಅಹಿಂಸಾ ಮಾರ್ಗದಿಂದ ಕ್ಷಣ ಮಾತ್ರದಲ್ಲಿ ಸಾಮಾಜಿಕ ಪರಿವರ್ತನೆ ನಿರೀಕ್ಷಿಸುವುದು ಅಸಾಧ್ಯ. ಇದು ಬಹಳ ಸಮಯವನ್ನು ನಿರೀಕ್ಷಿಸುತ್ತದೆ ಎಂದು ಸಾಮಾಜಿಕ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್-3 ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಣೆಯ ವಿರುದ್ಧ ಪ್ರತಿಭಟಣೆ ಅತ್ಯಗತ್ಯ. ಯಾರಾದರೂ ನಮ್ಮ ಮೇಲೆ ದಾಳಿ ಮಾಡಿದರೆ ಅದನ್ನು ವಿರೋಧಿಸಬೇಕು. ಆದರೆ, ವಿರೋಧ ಅಹಿಂಸಾತ್ಮಕವಾಗಿರಬೇಕು. ಈ ವಿಷಯದಲ್ಲಿ ಗಾಂಧಿ ಮಾರ್ಗ ಸೂಕ್ತ ಎಂದು ನುಡಿದರು. ಸಾಮಾಜಿಕ ಮಾಧ್ಯಮಗಳು ಇಂದಿನ ಆಧುನಿಕ ಪ್ರಪಂಚದಲ್ಲಿ ಬಹಳ ಪರಿಣಾಮಕಾರಿ. ಸಮಾಜದ ಶೋಷಿತ ವರ್ಗದವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬಹುದಾಗಿದೆ ಎಂದು ಅವರು ಹೇಳಿದರು.
ಆಧುನಿಕ ಸಮಾಜದಲ್ಲಿ ಶೋಷಿತರ, ದಮನಿತರ ಪರ ಹೊರಾಡುವ ಅನೇಕ ಯುವಕ-ಯುವತಿಯರು ನಮ್ಮ-ನಿಮ್ಮ ನಡುವೆ ಇದ್ದು, ಇವರ ಹೋರಾಟದ ಫಲ ನಿಜವಾಗಿಯೂ ಅನೇಕ ಶೋಷಿತರಿಗೆ ಒಳಿತಾಗಬಲ್ಲದು ಎಂದು ಮಾರ್ಟಿನ್ ಲೂಥರ್ ಕಿಂಗ್-3 ಹೇಳಿದರು. ಅಂತೆಯೇ ಸಮಾಜದ ಶೋಷಿತರು ಮತ್ತು ದಲಿತ ವರ್ಗದವರು, ಶಿಕ್ಷಣ, ಆರೋಗ್ಯ, ಸಾಮಾಜಿಕ ಹೀಗೆ ಯಾವುದೇ ಕ್ಷೇತ್ರದಲ್ಲಾಗಲಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದಾಗ ಮಾತ್ರ ಆಳುವ ಸರಕಾರಗಳಿಗೆ ಸಮಸ್ಯೆಗಳ ಆರ್ಥವಾಗುತ್ತದೆ ಎಂದು ತಿಳಿಸಿದರು.
ಯಾವುದೇ ಸಾಮಾಜಿಕ ಬದಲಾವಣೆ ತರಬೇಕಾದರೆ ಕೆಳ, ಶೊಷೀತ ವರ್ಗಗಳ ಜನರನ್ನು ಗಣನೆಗೆ ತೆಗೆದುಕೊಂಡು ಗುರಿಮುಟ್ಟುವತನಕ ಹೋರಾಟ ನಡೆಸಬೇಕು. ಇತ್ತೀಚಿಗೆ ಹೆಚ್ಚು ಆಕರ್ಷಿಸುತ್ತಿರುವ ಸಾಮಾಜಿಕ ಮಾಧ್ಯಮಗಳ ಮೂಲಕವೂ ಹೋರಾಟ ಮುಂದುವರೆಯಬೇಕು. ಸಮಾನ ಮನಸ್ಕರನ್ನು ಒಗ್ಗೂಡಿಸಿ ಮುನ್ನಡೆದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದರು. ತಮ್ಮ ತಂದೆ ಡಾ.ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರನ್ನು ಸ್ಮರಿಸಿದ ಕಿಂಗ್-3, ಅನ್ಯಾಯ ಇದ್ದ ಕಡೆ ನ್ಯಾಯವೂ ಇದ್ದೇ ಇರುತ್ತದೆ. ಶೋಷಿತರು ಒಂದಾದಾಗ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ತಮ್ಮ ತಂದೆಯ ನುಡಿಗಳನ್ನು ನೆನಪಿಸಿಕೊಂಡರು.
ಅಮೆರಿಕಾದಲ್ಲೂ ಈ ಶೋಷಣೆ ಇದ್ದೇ ಇದೆ. ಬಿಳಿಯರು-ಕರಿಯರ ನಡುವೆ ವರ್ಣಭೇದವಿತ್ತು. ಅಲ್ಲಿ ಒಗ್ಗಟ್ಟಿನ ಹೋರಾಟದ ಮೂಲಕ ಶೋಷಣೆ ಮುಕ್ತರಾಗುತ್ತಿದ್ದೇವೆ. ಭಾರತದ ಪರಿಸ್ಥಿತಿ ಹಾಗಲ್ಲ. ಕೆಳವರ್ಗದವರ ಸಂಖ್ಯೆ ಹೆಚ್ಚಿದೆ. ಸರಕಾರವು ಕೆಳವರ್ಗದವರ ಪರವಾಗಿಯೇ ಇದೆ. ಸರಕಾರ ಸೂಕ್ತ ಕಾನೂನು ರೂಪಿಸಿ ಕೆಳವರ್ಗದವರಿಗೆ ನ್ಯಾಯ ಕೊಡಿಸಬಹುದು ಎಂದು ಅಭಿಪ್ರಾಯಪಟ್ಟರು.
ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಇಂತಹ ಸಮಸ್ಯೆ ಪರಿಹಾರಕ್ಕೆ ಗಂಭೀರ ಪ್ರಯತ್ನ ನಡೆಸಬೇಕು ಎಂದು ಮಾರ್ಟಿನ್ ಲೂಥರ್ ಕಿಂಗ್-3 ಹೇಳಿದರು.