ಕನ್ನಡ ಬಾವುಟವೂ ಮ.ರಾಮ ಮೂರ್ತಿಯವರೂ.....

Update: 2017-07-23 08:11 GMT

ಕೇಂದ್ರ ಸರಕಾರ ಕನ್ನಡಿಗರು ನಿದ್ರಾಶೂರರೆಂದು ಭಾವಿಸಿದ್ದಲ್ಲಿ ಅದು ತಪ್ಪುಕಲ್ಪನೆ. ಸಹಿಷ್ಣುತೆ-ಸೌಜನ್ಯಗಳು ದೌರ್ಬಲ್ಯವಲ್ಲ. ಮೋದಿ ಸರಕಾರ ಇದನ್ನು ಮನಗಾಣಬೇಕು. ಕನ್ನಡದ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಬಾರದು. ಹಾಗಾದಲ್ಲಿ ಕನ್ನಡದ ರಣ ಸೇನಾನಿ ಮ. ರಾಮ ಮೂರ್ತಿಯವರು ಹಾಕಿ ಕೊಟ್ಟ ಹೋರಾಟದ ಮೇಲ್ಪಂಕ್ತಿ ಕನ್ನಡಿಗರ ಮುಂದಿದೆ.


ಕರ್ನಾಟಕಕ್ಕೊಂದು ಧ್ವಜ ಬೇಕೇ?

-ಇಂಥದೊಂದು ದಡ್ಡ ಪ್ರಶ್ನೆ ಮೊನ್ನೆ 18ರಂದು ರಾತ್ರಿ ದೂರದರ್ಶನದ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕೇಳಿ ಬಂತು. ಕರ್ನಾಟಕದ ಅಸ್ಮಿತೆ ಕನ್ನಡ ಬಾವುಟ. ಕನ್ನಡದ ಅಸ್ಮಿತೆ, ಕನ್ನಡಿಗರ ಅಸ್ಮಿತೆ ಕನ್ನಡ ಬಾವುಟ. ತ್ರಿವರ್ಣ ಧ್ವಜ ಭಾರತದ ಅಸ್ಮಿತೆಯಾಗಿರುವಂತೆ, ಭಾರತ ಜನನಿಯ ತನುಜಾತೆಯಾದ ಕರ್ನಾಟಕದ ಅಸ್ಮಿತೆ ಕೆಂಪು-ಹಳದಿ ದ್ವಿವರ್ಣದ ಕನ್ನಡ ಬಾವುಟ. ಕರ್ನಾಟಕಕ್ಕೊಂದು ಬಾವುಟ ಬೇಕೆ ಎನ್ನುವುದು ದಡ್ಡ ಪ್ರಶ್ನೆಯಷ್ಟೇ ಅಲ್ಲ ಅದು ಮೂರ್ಖತನದ ಪರಮಾವಧಿ.

‘ಹಾರಿಸಿ ಏರಿಸಿ ಕನ್ನಡದ ಬಾವುಟ’ಎಂದು ಆಚಾರ್ಯ ಬಿ.ಎಂ.ಶ್ರೀಯವರು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲೇ ಕನ್ನಡಿಗರಿಗೆ ಕರೆ ನೀಡಿದ್ದರು. ಅದು ಇಂದಿಗೂ ಪ್ರಸ್ತುತ, ಎಂದೆಂದಿಗೂ ಪ್ರಸ್ತುತ. ಅದು ಕನ್ನಡದ ಕೋಗಿಲೆ ಕಾಳಿಂಗ ರಾಯರ ಸಿರಿಕಂಠದಲ್ಲಿ ನಮ್ಮ ಹೃದಯವನ್ನು ಸದಾಕಾಲ ಆಪ್ಯಾಯಮಾನವಾಗಿ ತಟ್ಟುತ್ತಿರುತ್ತದೆ. ಕನ್ನಡಕ್ಕೊಂದು ಬಾವುಟ ಬೇಕು ಎಂದಾಗ ಅದು ಯಾವುದು? ಕನ್ನಡದ ಆ ಬಾವುಟ ಹೇಗಿರಬೇಕು?

ಕನ್ನಡ ಬಾವುಟಕ್ಕೊಂದು ಇತಿಹಾಸವಿದೆ. ಅದು ಕನ್ನಡ ಚಳವಳಿಯ ಇತಿಹಾಸದೊಂದಿಗೆ ಅವಿನಾಭಾವವಾಗಿ ಹೆಣೆದುಕೊಂಡಿದೆ. ಕನ್ನಡ ಚಳವಳಿ ಎಂದಾಗ ಮೊದಲು ನೆನಪಾಗುವ ಎರಡು ಹೆಸರುಗಳು ಅನಕೃ ಮತ್ತು ಮ. ರಾಮ ಮೂರ್ತಿ. ಅನಕೃ ಮತ್ತು ರಾಮ ಮೂರ್ತಿ ಕನ್ನಡ ಚಳವಳಿಯ ನಾಂದಿ ದೇವತೆಗಳಿದ್ದ ಹಾಗೆ.

ಮ. ರಾಮ ಮೂರ್ತಿ ಎಂದರೆ ‘ಯಾರವರು?’ ಎಂದು ಇಂದಿನ ತಲೆಮಾರಿನ ಕನ್ನಡದ ಅಣುಗರು ಹುಬ್ಬೇರಿಸಬಹುದು. ಸಹಜವೇ. ನಾವು ಕನ್ನಡಿಗರು ಮರೆಯುವುದರಲ್ಲಿ ನಿಸ್ಸೀಮರು. ಕನ್ನಡಿಗರು ತಮ್ಮ ಮಾತೃಭಾಷೆ ಬಗ್ಗೆ ದಿವ್ಯ ನಿರ್ಲಕ್ಷ್ಯ, ಮರೆವುಗಳನ್ನು ಮೆರೆೆಸುತ್ತಿದ್ದ ಕಳೆದ ಶತಮಾನದ ಅರುವತ್ತರ ದಶಕದ ಕಾಲಘಟ್ಟ. ರಾಜಧಾನಿ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸಿನೆಮಾ ಮಂದಿರಗಳಲ್ಲಿ ಕನ್ನಡೇತರ ಚಿತ್ರಗಳಿಗೆ ಪ್ರಥಮ ಆದ್ಯತೆ. ರಾಮೋತ್ಸವ ಸಂಗೀತ ಕಚೇರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡೇತರ ಕಲಾವಿದರಿಗೆ ಅಗ್ರ ತಾಂಬೂಲ.

ಕೇಂದ್ರ ಸರಕಾರದ ಉದ್ಯಮಗಳಲ್ಲಿ ಕನ್ನಡಿಗರ ಬಗ್ಗೆ ಅನಾದರ, ಕನ್ನಡ ಅಭಿಮಾನ ವ್ಯಕ್ತಪಡಿಸುವ ಕನ್ನಡಿಗರ ಬಗ್ಗೆ ಹೀನಾಯ ದೃಷ್ಟಿ. ಕನ್ನಡ ತನ್ನ ಮನೆಯಲ್ಲೇ ಅನಾಥವಾಗಿದ್ದ ಇಂಥ ಪರಿಸ್ಥಿತಿಯಲ್ಲಿ ಕನ್ನಡದ ಉಳಿವಿಗಾಗಿ ಚಳವಳಿ ಮೂಲಕ ಮುಂದಾದರು ಕನ್ನಡ ಸಾಹಿತಿಗಳು. ಹೀಗೆ ಅಸ್ತಿತ್ವಕ್ಕೆ ಬಂತು ಕನ್ನಡ ಚಳವಳಿ. ಇದರ ನೇತೃತ್ವ ವಹಿಸಿದ್ದ ಕನ್ನಡ ಸಂಯುಕ್ತ ರಂಗ 1962ರಲ್ಲಿ ಅಸ್ತಿತ್ವಕ್ಕೆ ಬಂತು. ಅನಕೃ ಅಧ್ಯಕ್ಷರು. ಮ. ರಾಮಮೂರ್ತಿ ಕಾರ್ಯದಶಿಗಳು. ಯುವಜನರಲ್ಲಿ ಕನ್ನಡ ಜಾಗೃತಿ ಬಡಿದೆಬ್ಬಿಸಲು ಮ.ರಾಮ ಮೂರ್ತಿ ಸಂಪಾದಕತ್ವದಲ್ಲಿ ‘ಕನ್ನಡ ಯುವಜನ’ ಪತ್ರಿಕೆ ಆರಂಭಿಸಲಾಯಿತು. ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ, ಕನ್ನಡ ಕಲಾವಿದರಿಗೆ ಮಾನ್ಯತೆ, ಕನ್ನಡಿಗರಿಗೆ ಉದ್ಯೋಗ ಇತ್ಯಾದಿಯಾಗಿ ಕನ್ನಡದ ಹಿತರಕ್ಷಣೆಗೆ ಹೋರಾಟ ಶುರುವಾಯಿತು.

ಹೋರಾಟ ಎಷ್ಟು ಪ್ರಬಲವಾಗಿತ್ತೆನ್ನುವುದಕ್ಕೆ ಒಂದು ನಿದರ್ಶನ, ಬೆಂಗಳೂರಿನ ಕೋಟೆ ರಾಮೋತ್ಸವದಲ್ಲಿ ಕಂಡುಬಂದ ಕನ್ನಡ ಕಲಾವಿದರನ್ನು ಅಲಕ್ಷಿಸಿ ಅನ್ಯಭಾಷಿಕರಿಗೆ ಮಣೆಹಾಕುವ ಪ್ರವೃತ್ತಿ ವಿರುದ್ಧ ಕನ್ನಡ ಸಂಯುಕ್ತ ರಂಗ ಸಿಡಿದು ನಿಂತಿತು. ಆಗ ಅನಕೃ ಅವರ ಅಣ್ಣ ಅ.ನ.ರಾಮ ರಾಯರೇ ಈ ರಾಮೋತ್ಸವ ಸಮಿತಿಯ ಅಧ್ಯಕ್ಷರು. ಕರುಳ ಬಳ್ಳಿಯ ಸಂಬಂಧಕ್ಕಿಂತ ಮಾತೃಭಾಷೆಯ ಸಂಬಂಧ ಅನಕೃ ಅವರಿಗೆ ದೊಡ್ಡದೆನಿಸಿತು. ಅಣ್ಣನ ವಿರುದ್ಧವೇ ಚಳವಳಿ ಸಂಘಟಿಸಿದರು. ಅನಕೃ-ರಾಮ ಮೂರ್ತಿ ನಾಯಕತ್ವದಲ್ಲಿ ಕನ್ನಡಿಗರು ಸಂಗೀತ ಕಚೇರಿ ಏರ್ಪಾಟಾಗಿದ್ದ ಕೋಟೆ ಹೈಸ್ಕೂಲ್ ಆವರಣದ ಎದುರು ಪ್ರದರ್ಶನ ನಡೆಸಿದರು. ಅಂದು ಕಚೇರಿ ಮಾಡುತ್ತಿದ್ದ ಎಂ.ಎಸ್.ಸುಬ್ಬುಲಕ್ಷ್ಮೀಯವರು ಅರ್ಧದಲ್ಲೇ ಕಚೇರಿ ನಿಲ್ಲಿಸ ಬೇಕಾಯಿತು.

ಕನ್ನಡಿಗರಲ್ಲಿ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ, ಕನ್ನಡಿಗರಲ್ಲಿ ಆತ್ಮವಿಶ್ವಾಸ ಮತ್ತು ಕನ್ನಡಾಭಿಮಾನ ಬೆಳೆಸುವುದರಲ್ಲಿ ಸಂಯುಕ್ತರ ರಂಗ ವಿವಿಧ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಯಿತು. ಇದೇ ಅವಧಿಯಲ್ಲಿ ರಾಜ್ಯದಲ್ಲಿನ ತಮಿಳು ಭಾಷಿಕರ ಸಭೆ ಸಮಾರಂಭಗಳಲ್ಲಿ ದ್ರಾವಿಡ ಅಸ್ಮಿತೆಯ ಝಂಡಾ ಹಾರಿಸುವುದು, ಕನ್ನಡವನ್ನು, ಕನ್ನಡಿಗರನ್ನು ಹೀಯಾಳಿಸುವುದು ಮೊದಲಾದ ಉಪಟಳಗಳು ಜಾಗೃತ ಕನ್ನಡಿಗರನ್ನು ಕೆರಳಿಸಿತು. ರಾಮ ಮೂರ್ತಿ ಸಿಡಿದು ನಿಂತರು. ಅನ್ಯ ಭಾಷೆಗಳಂತೆ ಕನ್ನಡಕ್ಕೂ ಒಂದು ಬಾವುಟ ಬೇಕು, ಕನ್ನಡದ ಅಸ್ಮಿತೆ ಸಾರುವ ಬಾವುಟ ಬೇಕು ಎನ್ನಿಸಿತು ರಾಮ ಮೂರ್ತಿಯವರಿಗೆ. ಹಳದಿ-ಕೆಂಪು ಎರಡು ಬಣ್ಣಗಳನ್ನುಳ್ಳ ಕನ್ನಡ ಬಾವುಟವನ್ನು ವಿನ್ಯಾಸಗೊಳಿಸಿದರು. ಹಳದಿ ಅರಿಷಿಣದ ಸಂಕೇತವಾದರೆ, ಕೆಂಪು ಕುಂಕುಮದ ಸಂಕೇತ. ದೇವಮಾನವರಿಬ್ಬರನ್ನೂ ಪೂಜಿಸಲು, ಆರಾಧಿಸಲು, ಹರಸಲು ಜನಸಾಮಾನ್ಯರು ಬಳಸುವ ಮಂಗಳದ್ರವ್ಯಗಳು.

ಹೀಗೊಂದು ಮುಹೂರ್ತದಲ್ಲಿ, ಶ್ರೀಯವರು ಅಕ್ಷರ ರೂಪದಲ್ಲಿ ಮೂಡಿಸಿದ ‘ಏರಿಸಿ ಹಾರಿಸಿ ಕನ್ನಡದ ಬಾವುಟ’ ರಾಮ ಮೂರ್ತಿಯವರ ವಿನ್ಯಾಸದಲ್ಲಿ ಭೌತಿಕ ರೂಪ ಪಡೆಯಿತು. ಸರಕಾರದ, ಸಂಘ ಸಂಸ್ಥೆಗಳ ಸಮಾರಂಭಗಳಲ್ಲಿ ಕನ್ನಡದ ಅಸ್ಮಿತೆಯಾಗಿ ಮಾನ್ಯತೆ ಪಡೆದುಕೊಂಡಿತು. ಕನ್ನಡ ಬಾವುಟ ಸೃಷ್ಟಿ ಕುರಿತ ಇತಿಹಾಸದ ಒಂದು ಮುಖ ಇದು. ಇನ್ನೊಂದು ಮುಖವೂ ಇದೆ. ‘ಕಂಚಿ ತಲೈವನ್’ 1963ರಲ್ಲಿ ತಯಾರಾದ ಒಂದು ತಮಿಳು ಚಿತ್ರ. ಎಂ.ಜಿ.ರಾಮಚಂದ್ರನ್ ಈ ಚಿತ್ರದ ನಾಯಕರು. ಈ ಚಿತ್ರದಲ್ಲಿ ಪಲ್ಲವರ ರಾಜಧಾನಿ ಕಂಚಿಯಲ್ಲಿ ರಾಜ ದರ್ಬಾರಿನ ಒಂದು ದೃಶ್ಯ.ವಿತ್ತುಕಂಚಿಯ ರಾಜ ಕನ್ನಡಿಗ ಕದಂಬ ದೊರೆ ಮಯೂರವರ್ಮನನ್ನು ಹೀಯಾಳಿಸುತ್ತಾನೆ ಹಾಗೂ ಕನ್ನಡದ ಧ್ವಜವನ್ನು ಕಾಲಲ್ಲಿ ತುಳಿದು ಹೊಸಕಿಹಾಕಿ ಹೂಂಕರಿಸುತ್ತಾನೆ. ಈ ದೃಶ್ಯ ಕನ್ನಡಿಗರನ್ನು ಕೆರಳಿಸಿತು. ಪ್ರತಿಭಟನೆಗಳಾದವು. ಕೊನೆಗೆ ಎಂಜಿಆರ್ ಆ ದೃಶ್ಯವನ್ನು ಚಿತ್ರದಿಂದ ತೆಗೆದು ಹಾಕಿದರು, ಕನ್ನಡಿಗರ ಕ್ಷಮೆ ಕೇಳಿದರು. ಇದು ಕನ್ನಡ ಬಾವುಟದ ವಿನ್ಯಾಸಕ್ಕೆ ಪ್ರೇರಣೆಯೊದಗಿಸಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಈಗ, ಹೊಸ ವಿವಾದದ ಮೂಲಕ ‘ಕನ್ನಡ ಬಾವುಟ’ ಮತ್ತೊಂದು ಇತಿಹಾಸವನ್ನು ಬರೆಯುವಂತಿದೆ. ಇರಲಿ.

***

ಇದು, ಕನ್ನಡ ಚಳವಳಿಯ ರಣ ಸೇನಾನಿ ಮ. ರಾಮ ಮೂರ್ತಿಯವರ ಜನ್ಮಶತಾಬ್ದಿ ವರ್ಷ. ಮ. ರಾಮ ಮೂರ್ತಿ ಹುಟ್ಟಿದ್ದು 1918ರ ಮಾರ್ಚ್ 11ರಂದು, ನಂಜನಗೂಡಿನಲ್ಲಿ. ತಂದೆ ಖ್ಯಾತ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ‘ವೀರ ಕೇಸರಿ’ ಸೀತಾರಾಮ ಶಾಸ್ತ್ರಿಗಳು.ವೀರಕೇಸರಿ ಸೀತಾರಾಮ ಶಾಸ್ತ್ರಿಯವರು ಕನ್ನಡದ ಮಾರ್ಗಪ್ರವರ್ತಕ ಪತ್ರಕರ್ತರಲ್ಲೊಬ್ಬರು. ಕಾದಂಬರಿಕಾರರು. ಬಾಲ ಗಂಗಾಧರ ತಿಲಕರಿಂದ ಪ್ರಭಾವಿತರಾದ ಶಾಸ್ತ್ರಿಗಳು ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ‘ವೀರಕೇಸರಿ’ ಪತ್ರಿಕೆ ಶುರು ಮಾಡಿ ಬ್ರಿಟಿಷರಿಗೆ ಸಡ್ಡುಹೊಡೆದು ನಿಂತವರು.

ಕನ್ನಡದ ಈ ಕೇಸರಿಯ ಪುತ್ರ ರಾಮ ಮೂರ್ತಿಯವರ ವಿದ್ಯಾಭ್ಯಾಸ ನಂಜನಗೂಡು ಮತ್ತು ಬೆಂಗಳೂರುಗಳಲ್ಲಿ. ತಾರುಣ್ಯದಲ್ಲಿ ತಂದೆಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ‘ಸಿರಿ ಭೂ ವಲಯ’ಖ್ಯಾತಿಯ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರ ಪ್ರಭಾವದಿಂದ ಕನ್ನಡ ಶಾಸ್ತ್ರ ಸಾಹಿತ್ಯ ಅಧ್ಯಯನ ಕೈಗೊಂಡರು. ಪತ್ರಿಕಾ ವ್ಯವಸಾಯವನ್ನೂ ಕೈಗೊಂಡರು. ತಂದೆಯ ‘ವೀರ ಕೇಸರಿ’ಗೆ ಲೇಖನಗಳನ್ನು ಬರೆಯುವುದರೊಂದಿಗೆ ಶುರುವಾದ ಪತ್ರಿಕಾ ಲೇಖನ ವ್ಯವಸಾಯ ‘ವಿನೋದಿನಿ’, ‘ಕಥಾವಳಿ’ ನಿಯತಕಾಲಿಕಗಳನ್ನು ಪ್ರಾರಂಭಿಸಲು ಪ್ರಚೋದನಕಾರಿಯಾಗಿರಬೇಕು.

ಕನ್ನಡ ಭಾಷೆಯಲ್ಲಿ ಪ್ರೀತಿ ಹುಟ್ಟಿಸುವ ಮತ್ತೊಂದು ಮಾಧ್ಯಮ ಸಾಹಿತ್ಯ ಎಂಬುದು ಮ.ರಾಮ ಮೂರ್ತಿಯವರಿಗೆ ಚೆನ್ನಾಗಿ ತಿಳಿದಂತಿತ್ತು. ಎಂದೇ ಕನ್ನಡಿಗರಲ್ಲಿ ಪುಸ್ತಕ ಓದುವ ಅಭಿರುಚಿ ಹುಟ್ಟಿಸಲು ಸ್ವತಃ ರೋಚಕ ಕಥೆ, ಕಾದಂಬರಿಗಳನ್ನು ಬರೆಯಲಾರಂಭಿಸಿದರು. ಹೀಗೆ ರಾಮ ಮೂರ್ತಿಯವರೊಳಗಿನ ಪತ್ತೇದಾರಿ ಕಾದಂಬರಿಕಾರ ಜನ್ಮವೆತ್ತಿದ. ಕನ್ನಡದ ಪತ್ತೇದಾರಿ ಸಾಹಿತ್ಯದಲ್ಲಿ ರಾಮ ಮೂರ್ತಿಯವರ ಹೆಸರು ಮೊದಲು ನಿಲ್ಲುತ್ತದೆ. ‘ರಾಜ ದಂಡ’, ‘ರಜಕಾರ್ ಗುಪ್ತಾಚಾರ’, ‘ವೈಯ್ಯಾಲೀ ಕಾವಲ್ ರಹಸ್ಯ’, ‘ಅಪರಾಧಿಯ ಆತ್ಮ ಕಥೆ’, ‘ಮರೆಯಾಗಿದ್ದ ವಜ್ರಗಳು’, ‘ಯಾರವನು?’, ‘ವಿಷ ಕನ್ಯೆ’-ರಾಮ ಮೂರ್ತಿಯವರ ಜನಪ್ರಿಯ ಪತ್ತೇದಾರಿ ಕಾದಂಬರಿಗಳು.

 ಕನ್ನಡ ನಾಡು-ನುಡಿಯ ಸತತ ರಕ್ಷಣೆಗಾಗಿ ರಾಜಕೀಯಬದ್ಧತೆ ಮತ್ತು ಸಂಕಲ್ಪಗಳಿರಬೇಕು ಎಂಬುದನ್ನು ಮನಗಂಡ ರಾಮ ಮೂರ್ತಿ ‘ಕನ್ನಡ ಪಕ್ಷ’ ಎಂಬ ಹೊಸ ರಾಜಕೀಯ ಸಂಘಟನೆಯೊದನ್ನು ಕರ್ನಾಟಕದಲ್ಲಿ ಕಟ್ಟಿದರು. ಆದರೆ ಕನ್ನಡ ಪಕ್ಷವನ್ನು ಕನ್ನಡಿಗರು ಮತಗಟ್ಟೆಯಲ್ಲಿ ಆದರಿಸಲಿಲ್ಲ. ಚುನಾವಣೆಗಳಲ್ಲಿ ಕನ್ನಡ ಪಕ್ಷ ಪರಾಜಯಗೊಂಡಿತು. ಏತನ್ಮಧ್ಯೆ ರಾಮ ಮೂರ್ತಿ ಕನ್ನಡ ಚಳವಳಿಯಿಂದಾಗಿ ಹಲವಾರು ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಪೊಲೀಸರ ಕಿರುಕುಳ ಅನುಭವಿಸಬೇಕಾಯಿತು. ಕನ್ನಡ ಚಳವಳಿಯ ಕಾವೂ ಜನರಲ್ಲಿ ಕ್ರಮೇಣ ಕುಗ್ಗತೊಡಗಿತು. ಕನ್ನಡ ಚಳವಳಿಗಾರರು ಮತ್ತು ಕನ್ನಡ ಸಂಘಟನೆಗಳಲ್ಲೂ ಭಿನ್ನಾಭಿಪ್ರಾಯಗಳು ತಲೆದೋರಿದವು. ಒಡಕು ಮೂಡಿತು. ಕನ್ನಡ ಚಳವಳಿಯ ಅಖಂಡ ಶಿಲಾಶಕ್ತಿಯ ಹ್ರಾಸವಾಯಿತು.

ರಾಮ ಮೂರ್ತಿಯವರನ್ನು ಭ್ರಮನಿರಸನ ಕಾಡಲಾರಂಭಿಸಿತು. ಸಂಸಾರದ ಆರ್ಥಿಕ ಮುಗ್ಗಟ್ಟೂ ಹೆಚ್ಚಾಗಿ ಬಾಧಿಸುತ್ತಿತ್ತು. ಗೃಹಕೃತ್ಯದ ಕಡೆ ಹೆಚ್ಚು ಗಮನ ಕೊಡುವುದು ಅನಿವಾರ್ಯವಾಯಿತು. ಬೆಂಗಳೂರಿನ ಸಮೀಪದ ಕಗ್ಗಲೀಪುರದ ಜಮೀನಿನಲ್ಲಿ ಕೃಷಿ ಮಾಡುವತ್ತ ಮನಸ್ಸು ವಾಲಿತು. ನೀರಾವರಿಗಾಗಿ ಜಮೀನಿನಲ್ಲಿ ಬಾವಿ ತೋಡಿಸಲುದ್ಯುಕ್ತರಾದರು. ಕನ್ನಡ ಕೈಂಕರ್ಯದ ಈ ಭಗೀರಥನಿಗೆ ಗಂಗೆ ಪ್ರತ್ಯಕ್ಷಳಾದಳು. ರಾಮಮೂರ್ತಿಯವರ ಹಿಗ್ಗು ಮೇರೆ ಮೀರಿ ಹರಿಯಿತು. ಅದು ಕ್ಷಣಭಂಗುರವಾಯಿತು. ಮರುಕ್ಷಣದಲ್ಲೇ ಬಾವಿಯ ದಂಡೆ ಕುಸಿದು ರಾಮ ಮೂರ್ತಿ ಇಬ್ಬರು ಪುತ್ರರ ಸಮೇತ ಭೂಗತರಾದರು. 25-12-1967 ಆ ದಿನ ಕನ್ನಡಿಗರ ದುರ್ದಿನ. ಕನ್ನಡಿಗರು ಕನ್ನಡ ಸೇನಾನಿಯನ್ನು ಕಳೆದುಕೊಂಡರು. ಕನ್ನಡ ಚಳವಳಿ ಅನಾಥವಾಗಿ ಹರಿದುಹಂಚಿಹೋಯಿತು.

    ***

 ಇವತ್ತಿನ ತಲೆಮಾರಿನ ಕನ್ನಡಿಗರಿಗೆ ರಾಮ ಮೂರ್ತಿ ಅಪರಿಚಿತರಿರ ಬಹುದು. ಆದರೆ ರಾಮ ಮೂರ್ತಿಯವರನ್ನು ಬಲ್ಲವರು, ಅವರ ಜೊತೆ ಕೆಲಸ ಮಾಡಿದವರನ್ನು ನಮ್ಮ ನಡುವೆ ಕಾಣಬಹುದು.ಅಂಥ ಕೆಲವರ ಪ್ರಯತ್ನದಿಂದಾಗಿ ಮ. ರಾಮ ಮೂರ್ತಿಯವರ ಜನ್ಮ ಶತಾಬ್ದಿಯ ಆಚರಣೆಗೆ ಸಿದ್ಧತೆಗಳಾಗುತ್ತಿವೆ. ಕನ್ನಡ ಗೆಳೆಯರ ಬಳಗ ರಾಮ ಮೂರ್ತಿಯವರ ನೂರನೆ ಹುಟ್ಟುಹಬ್ಬದ ನೆನಪಿನ ಕಾಣಿಕೆಯಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಮ ಮೂರ್ತಿಯವರ ಜನ್ಮ ಶತಾಬ್ದಿಯ ಈ ಸಂದರ್ಭದಲ್ಲೇ ಅವರು ವಿನ್ಯಾಸಗೊಳಿಸಿದ ಕನ್ನಡ ಬಾವುಟವನ್ನು, ಕನ್ನಡಿಗರ ಅಸ್ಮಿತೆಯನ್ನು ಅಳಿಸಿಹಾಕುವಂಥ ಕೂಗೆದ್ದಿರುವುದು, ಪ್ರತ್ಯೇಕತೆಯ ಆರೋಪ ಹಚ್ಚುತ್ತಿರುವುದು ದುರದೃಷ್ಟಕರ.

ರಾಷ್ಟ್ರ ಧ್ವಜ ಮತ್ತು ಪ್ರಜೆಗಳ ಕರ್ತವ್ಯದ ಬಗ್ಗೆ ಸಂವಿಧಾನ ಸ್ಪಷ್ಟವಾಗಿ ವಿವರಿಸಿದೆ. ಸಂವಿಧಾನದನ್ವಯ ರಚಿಸಲಾದ ರಾಷ್ಟ್ರ ಧ್ವಜ ಸಂಬಂಧಿತ ಕಾನೂನಿನಲ್ಲಿ ಎಲ್ಲಿಯೂ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಿರಲು ಅವಕಾಶವಿಲ್ಲ ಎಂದು ಹೇಳಿಲ್ಲ. ಈಗಾಗಲೇ ಜಮ್ಮು ಕಾಶ್ಮೀರ ಪ್ರತ್ಯೇಕ ಧ್ವಜ ಹೊಂದಿದೆ. ರಕ್ಷಣಾ ಪಡೆಗಳು ಪ್ರತ್ಯೇಕ ಧ್ವಜಗಳನ್ನು ಹೊಂದಿವೆ. ಶಿವಸೇನೆ, ಆರೆಸ್ಸೆಸ್‌ನಂಥ ಸಂಘಟನೆಗಳು ಮತ್ತು ಪಕ್ಷಗಳು ಪ್ರತ್ಯೇಕ ಧ್ವಜಗಳನ್ನು ಹೊಂದಿವೆ. ಇವುಗಳಿಂದ ರಾಷ್ಟ್ರದ ಏಕತೆಗೆ ಮತ್ತು ಒಕ್ಕೂಟ ವ್ಯವಸ್ಥೆಗೆ ಭಂಗ ಉಂಟಾಗಿದೆಯೇ? ಇವೆಲ್ಲ ತಮ್ಮ ಅಸ್ಮಿತೆಯ ಪ್ರತೀಕವಾಗಿ ಪ್ರತ್ಯೇಕ ಬಾವುಟಗಳನ್ನು ಹೊಂದಿರುವಾಗ ಅದು ಕನ್ನಡಕ್ಕೆ ಏಕೆ ಕೂಡದು? ನಾಡ ಬಾವುಟ ಕನ್ನಡ ಮತ್ತು ಕರ್ನಾಟಕದ ಅಸ್ಮಿತೆಯ ಸಂಕೇತವಷ್ಟೆ. ಇದನ್ನು ಹೊಂದುವ ಉದ್ದೇಶ ಕನ್ನಡ ಮತ್ತು ಕರ್ನಾಟಕದ ಆತ್ಮಾಭಿವ್ಯಕ್ತಿಯೇ ಹೊರತು ಭಾರತ ಗಣ ರಾಜ್ಯ ವಿರುದ್ಧ ದಂಗೆ ಏಳುವುದಲ್ಲ.

ಒಕ್ಕೂಟ ವ್ಯವಸ್ಥೆಯಲ್ಲಿದ್ದುಕೊಂಡೇ ಕನ್ನಡದ ಅಸ್ಮಿತಯನ್ನು ದೃಢಪಡಿಸಿವುದು, ಸಮರ್ಥಿಸಿಕೊಳ್ಳುವುದಷ್ಟೆ ನಾಡ ಬಾವುಟ ಹೊಂದುವುದರ ಉದ್ದೇಶ. ತಮ್ಮ ವೃತ್ತಿ ನೀತಿನಿಯಮಗಳನ್ನು ಪರಭಾರೆ ಮಾಡಿಕೊಂಡಿರುವ ದೂರದರ್ಶನದ ವಾಹಿನಿಗಳ ಪತ್ರಕರ್ತರೆಂದು ಹೇಳಿ ಕೊಳ್ಳುವ ಮಾತಿನ ಮಲ್ಲರಿಂದಾಗಲೀ ಅಥವಾ ಕನ್ನಡಿಗರು, ಬಿಹಾರಿಗಳು ಮತ್ತಿತರ ಭಾರತೀಯರನ್ನು ಮಹಾರಾಷ್ಟ್ರದಿಂದ ಓಡಿಸುವ ಸಂಕುಚಿತ ಮನೋಭಾವ ಪ್ರದರ್ಶಿಸಿದ ಶಿವಸೇನೆಯಿಂದಾಗಲೀ ಕನ್ನಡಿಗರು ರಾಷ್ಟ್ರೀಯತೆಯ ಪಾಠ ಕಲಿಯ ಬೇಕಾಗಿಲ್ಲ.

ತಜ್ಞರ ಅಭಿಪ್ರಾಯದಂತೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮದೇ ಆದ ಧ್ವಜ ಹೊಂದಿರಲು ಸಂವಿಧಾನಾತ್ಮಕ ತೊಡಕುಗಳು ಏನೂ ಇಲ್ಲ. 2002ರಲ್ಲಿ ಜಾರಿಗೆ ಬಂದ ಭಾರತ ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರ ಧ್ವಜಕ್ಕೆ ಅವಮಾನಗೊಳಿಸಬಾರದು, ಬೇರೆ ಧ್ವಜಗಳನ್ನು ಅದರ ಮೇಲೆ ಹಾರಿಸ ಬಾರದು. ಆದರೆ ಅದರ ಅಡಿ ಹಾರಿಸಬಹುದು. ಈ ಸಂಹಿತೆಯಲ್ಲಿ ರಾಷ್ಟ್ರ ಧ್ವಜಕ್ಕೆ ಕೊಡಬೇಕಾದ ಗೌರವ ಮತ್ತು ಪ್ರಾಧಾನ್ಯತೆ ಬಗ್ಗೆ ಹೇಳಲಾಗಿದೆಯೇ ಹೊರತು ಬೇರೆ ಧ್ವಜಗಳನ್ನು ನಿಷೇಧಿಸುವ ಮಾತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ‘‘ಕರ್ನಾಟಕದ ನಾಡ ಬಾವುಟ ಒಕ್ಕೂಟ ವ್ಯವಸ್ಥೆ ವಿರುದ್ಧವಲ್ಲ, ಅದು ರಾಷ್ಟ್ರಧ್ವಜದ ಅಡಿಯಲ್ಲೇ ಹಾರಾಡುವುದು’’ ಎಂದು ಲೇಶಮಾತ್ರವೂ ಸಂಶಯಕ್ಕಡೆ ಕೊಡದ ರೀತಿಯಲ್ಲಿ ಹೇಳಿದ್ದಾರೆ.

ರಾಜ್ಯದ ಮುಖ್ಯ ಮಂತ್ರಿಯವರ ಭರವಸೆಗಿಂತ ಬೇರೇನು ಬೇಕು? ಆದಾಗ್ಯೂ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಮತ್ತು ಕರ್ನಾಟಕದ ವಿರುದ್ಧ ಈ ಹುಯಿಲೇಕೋ ಅರ್ಥವಾಗದು. ಇದು, ಒಂದು ರಾಷ್ಟ್ರ, ಒಂದೇ ಧ್ವಜ, ಒಂದೇ ಭಾಷೆ ಎಂಬ ಗೋಳ್ವಾಲ್ಕರ್ ಪ್ರಣೀತ ಆರೆಸ್ಸೆಸ್ ಕಾರ್ಯಸೂಚಿ ಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಇಟ್ಟಿರುವ ಮೊದಲ ಹೆಜ್ಜೆ ಇರಬಹುದೇ? ಬಹುತ್ವವನ್ನೂ ರಾಜ್ಯಗಳ ಸಾಂಸ್ಕೃತಿಕ ಅಸ್ಮಿತೆ-ವೈವಿಧ್ಯತೆಗಳನ್ನು ಅಳಿಸಿಹಾಕಿ ‘ಏಕಾತ್ಮತೆ’ಯನ್ನು ಸಾಧಿಸುವ ಈ ಕಾರ್ಯಸೂಚಿ ತನಗೇ ತಿರುಗು ಬಾಣವಾಗಬಹುದು ಎಂಬುದನ್ನು ಮೋದಿ ಸರಕಾರ ಬೇಗ ಅರಿತುಕೊಳ್ಳುವುದು ಕ್ಷೇಮ. ಕಾವೇರಿ, ಮಹಾದಾಯಿ, ಗಡಿ ವಿವಾದ, ಹಿಂದಿ ಹೇರಿಕೆ ಹೀಗೆ ಹಲವಾರು ವಿಷಯಗಳಲ್ಲಿ ತುಳಿತ ಕ್ಕೊಳಗಾಗಿರುವ ಕನ್ನಡಿಗರು ಘಾಸಿಗೊಂಡಿದ್ದಾರೆ, ನೊಂದಿದ್ದಾರೆ. ಅವರ ಸಹನೆಗೂ ಒಂದು ಮಿತಿ ಇದೆ.

ಈಗ ಕನ್ನಡದ ಅಸ್ಮಿತೆಯಾದ ಬಾವುಟದ ವಿಷಯದಲ್ಲಿ ಎಬ್ಬಿಸಲಾಗಿರುವ ವಿರೋಧ-ರಾಷ್ಟ್ರ ದ್ರೋಹದ ಆರೋಪಗಳು ಸಹಜವಾಗಿಯೇ ಕನ್ನಡಿಗರನ್ನು ಕೆರಳಿಸುವ ರೀತಿಯದು. ಕೇಂದ್ರ ಸರಕಾರ ಕನ್ನಡಿಗರು ನಿದ್ರಾಶೂರರೆಂದು ಭಾವಿಸಿದ್ದಲ್ಲಿ ಅದು ತಪ್ಪುಕಲ್ಪನೆ. ಸಹಿಷ್ಣುತೆ-ಸೌಜನ್ಯಗಳು ದೌರ್ಬಲ್ಯವಲ್ಲ. ಮೋದಿ ಸರಕಾರ ಇದನ್ನು ಮನಗಾಣಬೇಕು. ಕನ್ನಡದ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಬಾರದು. ಹಾಗಾದಲ್ಲಿ ಕನ್ನಡದ ರಣ ಸೇನಾನಿ ಮ. ರಾಮ ಮೂರ್ತಿಯವರು ಹಾಕಿ ಕೊಟ್ಟ ಹೋರಾಟದ ಮೇಲ್ಪಂಕ್ತಿ ಕನ್ನಡಿಗರ ಮುಂದಿದೆ. ಕನ್ನಡ ಬಾವುಟದ ವಿನ್ಯಾಸಕಾರ ಮ. ರಾಮ ಮೂರ್ತಿಯವರ ಜನ್ಮ ಶತಾಬ್ದಿಯ ಸಂದರ್ಭದಲ್ಲೇ ಕನ್ನಡ ಬಾವುಟ ವಿವಾದದ ವಿಷಯವಾಗಿರುವುದು ಎಂಥ ವಿಪರ್ಯಾಸ! ಈ ಅನಗತ್ಯ ವಿವಾದಿಂದ ರಾಮ ಮೂರ್ತಿಯವರ ಆತ್ಮ ವಿಲವಿಲ ಒದ್ದಾಡುತ್ತಿರಬಹುದು.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News