ಮುಟ್ಟಿನ ಹುಟ್ಟೊಡೆವ ‘ಚರ್ಮಾಯಿ’

Update: 2017-07-23 01:50 GMT

ಸಾಮಾಜಿಕ ನ್ಯಾಯ ಮತ್ತು ಪರಿವರ್ತನೆಯ ಜ್ಞಾನವು ಕೇವಲ ನಗರಕೇಂದ್ರಿತ ತಲೆಮಾರುಗಳಿಂದಲೇ ದತ್ತವಾಗುತ್ತದೆ ಎಂಬ ಗ್ರಹಿಕೆಗಳನ್ನು ನಾವು ಮರುಪರಿಶೀಲಿಸುವ ಅಗತ್ಯವಿದೆ. ಕನ್ನಡ ಕಾದಂಬರಿ ಜಗತ್ತು ಈ ಬಗೆಯ ಗ್ರಹಿಕೆಗಳ ಪಲ್ಲಟಗಳ ಸಂಕ್ರಮಣ ಕಾಲದಲ್ಲಿದೆ. ಚರ್ಮಾಯಿಯನ್ನು ಓದುವ ಕ್ರಮದಲ್ಲಿಯೇ ಈ ಬಗೆಯ ಒತ್ತಡ ಹಾಗೂ ವರ್ತಮಾನದ ತುರ್ತುಗಳು ಈ ಕಾದಂಬರಿಯನ್ನು ಹೀಗೆ ಓದುವಂತೆ ಪ್ರೇರಣೆ ಆಗುತ್ತದೆ.

ಚರ್ಮಾಯಿ ಇತ್ತೀಚಿನ ಹೊಸ ತಲೆಮಾರಿನ ಕಾದಂಬರಿ. ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸರದ ಏಳುಬೀಳುಗಳನ್ನು ಚಿತ್ರಿಸುವ ಈ ಕಾದಂಬರಿ ಮುಟ್ಟು ಎಂಬ ಸ್ತ್ರಿ ವಿರೋಧಿ ಸಂಪ್ರದಾಯಗಳ ಕಥನವಾಗಿದೆ. ನಮ್ಮ ಹೊಸ ತಲೆಮಾರಿನವರು ದೂರದ ಜಾಗತೀಕರಣದ ಥಿಯರಿ ಹಾಗೂ ಸಾಂಸ್ಕೃತಿಕ ರಾಜಕಾರಣದ ವಿಚಾರಗಳಲ್ಲಿ ಮುಳುಗಿರುವಾಗ ಅಡ್ಲೂರು ರಾಜು ಅಷ್ಟೆರವರು ಕರಾವಳಿಯ ಮೂಲೆಯಲ್ಲಿ ಈ ಸಮಾಜದ ಗೊಡ್ಡು ನೆಲೆಗಳ ವಿರುದ್ಧ ಹೊಸ ಸಂಪ್ರದಾಯ ವಿರೋಧಿ ಸೃಜನಾತ್ಮಕವಾದ ಕಥನ ಜಗತ್ತನ್ನು ಕಟ್ಟಿದ್ದಾರೆ.

ಚರ್ಮದ ಮೇಲೆ ಹೇರಿರುವ ತಾರತಮ್ಯದ ಅಸ್ಪಶ್ಯ ನೆಲೆಗಳ ವಿರುದ್ಧ ಕುಂಕುಮ ಗ್ರಾಮದಲ್ಲಿ ನಡೆವ ಬಂಡಾಯ ಮತ್ತದರ ಬಿಕ್ಕಟ್ಟುಗಳನ್ನು ಸೃಜನಶೀಲವಾಗಿ ಚರ್ಮಾಯಿಯ ಮೂಲಕ ನಿರೂಪಿಸಿದ್ದಾರೆ. ಮುಟ್ಟಿನ ದಾರುಣ ಹಾಗೂ ಜಾತಿ ಅಮಾನುಷ ನೆಲೆಗಳನ್ನು ಅನಾವರಣಗೊಳಿಸುವ ಈ ಕಾದಂಬರಿಯು ಸಮಾಜವು ತಾನು ಮೂಲಭೂತವಾಗಿ ದಾಟಲೇ ಬೇಕಿರುವ ಸಾಮಾಜಿಕ ವ್ಯವಸ್ಥೆಗಳನ್ನು ಕುರಿತು ಮಾತಾಡುತ್ತದೆ. ಈ ಸೂಕ್ಷ್ಮತೆಗಳನ್ನು ರಾಜು ಅನುದ್ವೇಗದಿಂದ ನಿರೂಪಿಸಿರುವ ಬಗೆ ಕಾದಂಬರಿಗೆ ಸಾಂಸ್ಕೃತಿಕ ಮಹತ್ವವನ್ನು ತಂದುಕೊಟ್ಟಿದೆ.

ಪ್ರತಿರೋಧ ಹಾಗೂ ಪ್ರತಿಭಟನೆಗಳು ಜನಜೀವನದ ಒಳಗಿಂದಲೇ ಹೆಕ್ಕಿ ತೆಗೆವ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಜಿಜ್ಞಾಸೆಗಳು ಇಂದು ಹೊಮ್ಮುವಂತಾಗಬೇಕು. ಕನ್ನಡ ಕಾದಂಬರಿಯ ಅಸ್ಮಿತೆ ಇಂತಹ ಹೊಸ ಸಾಧ್ಯತೆಗಳು ಬಹು ಭಿನ್ನ ಸೃಜನಶೀಲತೆಯ ಅಯಾಮಗಳನ್ನು ಅನಾವರಣಗೊಳಿಸುತ್ತವೆ.

ಇಂದಿಗೂ ಕೂಡ ಹುಟ್ಟಿನ ಸಾಮಾಜಿಕ ಸೂತಕಗಳು ಹಾಗೂ ಮುಟ್ಟು ಎಂಬ ಹೆಣ್ಣಿನ ಅಸ್ಪಶ್ಯತೆಯ ನರಕ ಕೂಪದ ವಿರುದ್ಧ ಚರ್ಮಾಯಿ ಸೃಜನಶೀಲವಾದ ಪ್ರತಿಭಟನೆಯ ಸಾಹಿತ್ಯ ಕಥನವಾಗಿ ನಮ್ಮೆಲ್ಲರನ್ನು ಆಕರ್ಷಿಸುತ್ತದೆ. ಕರಾವಳಿ ದೂರಕ್ಕೆ ಕಾಣುವ ಬಗೆ ಒಂದಾದರೆ, ಇನ್ನೊಂದು ಅದರ ಆಳದಲ್ಲಿರುವ ಸಾಮಾಜಿಕ ಅಮಾನುಷ ನೆಲೆಗಳ ಸೂಕ್ಷ್ಮತೆಗಳನ್ನು ಕಾದಂಬರೀಕರಿಸುವಲ್ಲಿ ರಾಜುರವರು ಕಸುವಿನ ಬರಹಗಾರರಂತೆ ಕಾಣಿಸಿಕೊಳ್ಳುತ್ತಾರೆ.

ಮುಕ್ತವಾಗಿ ತನಗಾಗುವ ನೋವು ಮತ್ತು ಅವಮಾನಗಳನ್ನು ಹೇಳಿಕೊಳ್ಳಲಾರದ ಮಟ್ಟಿಗೆ ಹೆಣ್ಣನ್ನು ನೂಕಿರುವ ಈ ಸಮಾಜಕ್ಕೆ ಚರ್ಮಾಯಿ ಇಂತಹ ನಿರ್ದಯಿ ಸಂಪ್ರದಾಯಗಳ ಕ್ರೌರ್ಯವನ್ನು ಬಯಲು ಮಾಡುತ್ತಾ ಹೋಗುತ್ತದೆ. ಮುಟ್ಟಿನ ಭೀಕರತೆಯನ್ನು ಮುಕ್ತವಾಗಿ ಬಿಚ್ಚಿಡುವ ಸುಮಕೇತು ನಮಗೆ ಅರ್ಥವಾಗದ ಸಂಕಟಗಳ ಲೋಕವನ್ನು ಮಾನವೀಯವಾಗಿ ಅರ್ಥಮಾಡಿಸುವ ಪ್ರಯತ್ನ ಮಾಡುವುದು ಕಾದಂಬರಿಯುದ್ದಕ್ಕೂ ಪ್ರಕಟವಾಗುತ್ತಾ ಹೋಗುತ್ತದೆೆ.

ಸಾಮಾಜಿಕ ನ್ಯಾಯ ಮತ್ತು ಪರಿವರ್ತನೆಯ ಜ್ಞಾನವು ಕೇವಲ ನಗರಕೇಂದ್ರಿತ ತಲೆಮಾರುಗಳಿಂದಲೇ ದತ್ತವಾಗುತ್ತದೆ ಎಂಬ ಗ್ರಹಿಕೆಗಳನ್ನು ನಾವು ಮರುಪರಿಶೀಲಿಸುವ ಅಗತ್ಯವಿದೆ. ಕನ್ನಡ ಕಾದಂಬರಿ ಜಗತ್ತು ಈ ಬಗೆಯ ಗ್ರಹಿಕೆಗಳ ಪಲ್ಲಟಗಳ ಸಂಕ್ರಮಣ ಕಾಲದಲ್ಲಿದೆ. ಚರ್ಮಾಯಿಯನ್ನು ಓದುವ ಕ್ರಮದಲ್ಲಿಯೇ ಈ ಬಗೆಯ ಒತ್ತಡ ಹಾಗೂ ವರ್ತಮಾನದ ತುರ್ತುಗಳು ಈ ಕಾದಂಬರಿಯನ್ನು ಹೀಗೆ ಓದುವಂತೆ ಪ್ರೇರಣೆ ಆಗುತ್ತದೆ.

ಸಾಮಾಜಿಕ ಬದಲಾವಣೆಯು ಈಗ ಸಾರ್ವತ್ರಿಕವಾದ ಸರಳ ಮಾದರಿಗಳ ಆಚೆಗೆ ಇಂದು ಸಾಂಸ್ಕೃತಿಕ ವಿವೇಕದ ಹೆಜ್ಜೆಗಳೊಂದಿಗೆ ಮುನ್ನಡೆವ ಹೊಸ ಅನುಸಂಧಾನದ ಫಸಲನ್ನು ಸೃಷ್ಟಿಸಬೇಕಿದೆ. ಚರ್ಮಾಯಿ ಇಂತಹ ಮರುಪರಿಶೀಲನೆಯ ಒತ್ತಡಗಳನ್ನು ಉಂಟುಮಾಡುತ್ತದೆ.

 ‘ಬ್ರಾಹ್ಮಣರ ಬಗ್ಗೆ ಪ್ರಶ್ನೆ ಹಾಕಿಕೊಳ್ಳಿ. ದಲಿತರ ಕಷ್ಟ ನೆನಸಿಕೊಳ್ಳಿ. ದೊಡ್ಡ ಅಧಿಕಾರಿಯಾಗಬೇಕೆಂಬ ನಿಮ್ಮ ಕನಸಿಗೆ ಚೂರು ತಣ್ಣೀರು ಬಿಟ್ಟು ಮನುಷ್ಯರಾಗುವ ಹಂತಕ್ಕೆ ಬನ್ನಿ. ಕುಣಿಯಿರಿ, ಹಾಡಿ ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡಿ’ ಎಂಬ ಹೊಸಕಾಲದ ಮಾನವತೆಯ ಪ್ರವಾದಿಯಂತೆ ಮಾತಾಡುವ ಕಥಾನಾಯಕ ಸುಮಕೇತು ಸಮಾನತೆಯ ಹೊಸ ಧಾರೆಗಳನ್ನು ತಾನು ನಿಂತ ನೆಲದಡಿಯಲ್ಲಿಯೇ ಸ್ಥಾಪಿಸಬಯಸುವ ಉತ್ಸಾಹಿ ಹಾಗೂ ಸಾಹಸಿ. ತೀರಾ ಒಮ್ಮಾಮ್ಮೆ ಅರಾಜಕನಂತೆ ಕಂಡುಬಂದರೂ ಸುಮಕೇತು ಸಾಮಾಜಿಕವಾಗಿ ತನ್ನ ಜೀವನದ ಬದ್ಧತೆಗಳನ್ನು ಬಿಟ್ಟುಕೊಡಲಾರದೆ ಕೊನೆಗೆ ತನ್ನ ಆದರ್ಶಗಳಿಗೆ ಬಲಿಯಾಗಿ ಹೋಗುವ ದುರಂತವಿದೆ. ಪ್ರಪಂಚದ ಗತಿ ಹೇಗೆ ಹೋಗುತ್ತಿದೆ ಹಾಗೆ ಹೋಗಬೇಕು ಎಂದು ಸಿದ್ಧರಿರುವ ಹಿರೀಕರು ಕೂಡ ಸಾಮಾಜಿಕ ಚಲನೆಗೆ ಮುಂದಾಳುಗಳೇ ಆಗಿರುತ್ತಾರೆ. ಕಾದಂಬರಿಯ ಊನೇಗೌಡ ಪಾತ್ರ ಇಂತಹ ಸಾಧ್ಯತೆಗಳನ್ನು ಒಪ್ಪಿಕೊಳ್ಳುತ್ತಲೇ ಸಂಪ್ರದಾಯವು ಗೊಡ್ಡಾಗಿದೆ ಎಂದೇ ಸಾತ್ವಿಕವಾಗಿ ಪ್ರತಿಪಾದಿಸುತ್ತಾರೆ. ಇಡೀ ಕುಂಕುಮ ಗ್ರಾಮದ ಕಥಾನಕದಲ್ಲಿ ಸುಮಕೇತು,ಕೈವಲ್ಯಳ ಪ್ರೇಮ, ಸುಮಕೇತು ಮತ್ತು ಪರಿಧಿ, ದಲಿತ ಲೋಕದ ಜನರ ಅಸಹಾಯಕತೆ ನಡುವೆ ಹಿಂದುಳಿದ ಜಾತಿಗಳ ಅರೆಬರೆಯ ಎಚ್ಚರ ಇವೆಲ್ಲಕ್ಕೂ ಎದುರಾಗಿ ಶಂಕರ ಕೊಡಬಾಳೆಯ ಪುಂಡಾಟಿಕೆ ಜಗತ್ತು ಹಾಗೂ ಬ್ರಾಹಣರ ಶಾಸ್ತ್ರ ಸಂಪ್ರದಾಯಗಳ ಲೋಕವಿದೆ. ಬಹುಶಃ ಭಾರತೀಯ ಸಮಾಜದ ಹೀಗೆ ರೂಪುಗೊಂಡಿದೆ. ಶ್ರೇಣೀಕರಣದ ಈ ವಿಪರೀತಗಳನ್ನು ಅಲುಗಾಡಿಸಬಹುದೇ ಹೊರತು ಇದನ್ನು ಬುಡಮೇಲು ಮಾಡುವ ಮಟ್ಟಿಗೆ ಈ ಸಮಾಜ ಇನ್ನೂ ಸಿದ್ಧಗೊಂಡಿಲ್ಲ. ಇಂತಹ ಸಿದ್ಧತೆಗಳ ಪ್ರತೀಕವಾಗಿಯೇ ಚರ್ಮಾಯಿ ಕಾದಂಬರಿ ಕಂಡುಬರುತ್ತದೆ.

ಮುಟ್ಟದವರ ಮುಟ್ಟು ಬಿಟ್ಟಿತು

ಹಸಿವಿಂದ ಬೆಂಕಿಯ ಕೆನ್ನಾಲಿಗೆ..

ಬಿಸಿ ಉರಿಯಲಿ ಅಳುತ್ತಾ

ಒಳಗೊಳಗೇ... ಈ ಚರ್ಮಾಯಿಯ ಕೇಂದ್ರ ಮುಟ್ಟದವರ ಮುಟ್ಟು ಬಿಡಿಸುವುದೇ ಕಾದಂಬರಿ ಉದ್ದೇಶ.

ಲೇಖಕರ ಆಶಯದಂತೆಯೇ ಈ ಚರ್ಮಾಯಿಯು ಬಾಹ್ಯ ಸಮಾಜದ ಮೇಲಿನ ಚರ್ಮದ ಹೊದಿಕೆ, ಅದರೊಳಗೊಂಡಿರುವ ಮಾನವೀಯ ಒಳ ಅಂತಃಕರಣದ ಜೊತೆ ಜೊತೆಗೆ ಪ್ರವಹಿಸುತ್ತಿರುವ ಸಮಾನತೆಯ ನೆತ್ತರು ಒಂದೇ ಎನ್ನುವುದು ಜಾಗತಿಕ ಸತ್ಯವಾದರೂ ಅದನ್ನು ಮರೆಮಾಚಿ ಅದರ ಚರ್ಮಕ್ಕೆ ಗೊಡ್ಡು ಸಂಪ್ರದಾಯಗಳ ಗಾಳಿ ಮತ್ತು ಕ್ರೌರ್ಯದ ಆಚರಣೆಗಳನ್ನು ಸವರಿ ಚರ್ಮದ ನೈಜ ಸತ್ಯವನ್ನು ಮರೆ ಮಾಚುತ್ತಲೇ ಇರುತ್ತವೆ. ಇದು ಚರಿತ್ರೆಯ ಉದ್ದಕ್ಕೂ ಹರಿದು ಬಂದಿರುವ ಮನಃಸ್ಥಿತಿಗಳ ಘರ್ಷಣೆಯಾಗಿದೆ. ಸಿಗದ ಗಾಳಿಯ ರೂಪ ಮತ್ತು ಕಾಣದ ಮುಖವಾಡಗಳ ಅನಾವರಣವೇ ಚರ್ಮಾಯಿ. ಈ ಗ್ರಹಿಕೆಗಳ ಆಳ ಅಗಲಗಳು ಚರ್ಮಾಯಿ ಕಾದಂಬರಿಯ ಮೂರ್ತತ್ವಕ್ಕೆ ಕಾರಣವಾಗಿವೆ.

 ಕನ್ನಡ ಕಾದಂಬರಿ ಜಗತ್ತು ಸಂಪ್ರದಾಯದ ಲೋಕದೃಷ್ಟಿಯನ್ನು ಎದುರಾಗುವ ಜಾಯಮಾನವನ್ನು ಕುವೆಂಪು, ಕಾರಂತರು, ಅನಂತಮೂರ್ತಿ, ಕಂಬಾರರು, ಲಂಕೇಶರು ಎಂಬ ನಮ್ಮ ಪೂರ್ವಿಕರು ತಮ್ಮ ಕಾದಂಬರಿಗಳ ಮೂಲಕ ಶ್ರುತಪಡಿಸಿ ಹೋಗಿದ್ದಾರೆ. ಸಂಪ್ರದಾಯಗಳನ್ನು ಏಕಮುಖಿಯಾಗಿ ನೋಡುವಾಗಲೂ ಸಹ ಈ ನೆಲದ ಬಹುಮುಖಿ ಅಯಾಮಗಳನ್ನು ವ್ಯವಧಾನಿಸಿ ನೋಡುವ ಅಗತ್ಯವಿದೆ. ಹಾಗೆಯೇ ಸಂಪ್ರದಾಯಕ್ಕೆ ವಿರುದ್ಧವೆಂದು ಭಾವಿಸುವ ವೈಚಾರಿಕ ಜಗತ್ತು ಪ್ರತಿಪಾದಿಸುವ ಮಾನವೀಯತೆ, ವ್ಯಕ್ತಿಗತವಾದ ನೈತಿಕತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ವಿಚಾರಗಳನ್ನು ಸಾಂಪ್ರದಾಯಿಕರು ತಾಳ್ಮೆಯಿಂದ ನೋಡಿ, ತಾವೂ ಒಳಗಾಗುವ ಔದಾರ್ಯಗಳನ್ನು ಬೆಳೆಸಿಕೊಳ್ಳಬೇಕಿದೆ. ಸುಮಕೇತು ಮತ್ತು ಪರಿಧಿ ಇಂತಹ ಹೊಸ ಕಾಲದ ಜಿಜ್ಞಾಸೆಯ ಆವರಣದೊಳಗೆ ಅರಳಿದ ಪಾತ್ರಗಳಾದರೂ ಬಂಡಾಯವನ್ನು ಒರಟಾಗಿ ನೋಡುವ ಕ್ರಮದಲ್ಲಿಯೇ ಅದನ್ನು ನ್ಯಾಯಬದ್ಧಗೊಳಿಸುವ ಜವಾಬ್ದಾರಿಗಳ ವಿಚಾರದಲ್ಲಿ ಅಸೂಕ್ಷ್ಮರಾಗುವ ಅಪಾಯಗಳ ಬಗ್ಗೆಯೂ ಎಚ್ಚರವಿರಬೇಕಾಗಿರುತ್ತದೆ.

ಭಾರತದ ವೈವಿಧ್ಯ ವಿರೋಧಾಭಾಸಗಳ ಸೂಕ್ಷ್ಮಗಳನ್ನು ಅರಿತೇ ಸಾಹಿತಿ ಅಥವಾ ಬರಹಗಾರರು ಸಾಮಾಜಿಕವಾಗಿ ಕಾರ್ಯಪ್ರವೃತ್ತರಾಗಬೇಕಾಗಿರುತ್ತದೆ. ಮರಳಿಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಚೋಮನದುಡಿ, ಸಂಸ್ಕಾರ, ಗ್ರಾಮಾಯಣ, ಮುಸ್ಸಂಜೆ ಕಥಾಪ್ರಸಂಗ, ಕರ್ವಾಲೋ ಕುಸುಮಬಾಲೆ ಹಾಗೂ ಗಾಂಧೀ ಬಂದ ಈ ಕಾದಂಬರಿಗಳು ಈ ವಿಚಾರದಲ್ಲಿ ಒಂದು ತಾತ್ವಿಕ ಹಂದರವನ್ನೇ ಕಟ್ಟಿವೆ. ಅಲ್ಲದೆ ಪರಂಪರೆ ಹಾಗೂ ಸಂಪ್ರದಾಯವನ್ನು ಎದುರಾಗುವ ಬಗೆ ಮತ್ತು ವಿಮರ್ಶೆ ಪಾತಳಿಗಳು ಕನ್ನಡ ವೈಚಾರಿಕತೆ ಮತ್ತು ಸಂಸ್ಕೃತಿ ಜಿಜ್ಞಾಸೆಗೆ ಹೊಸ ಅಯಾಮವನ್ನು ಈ ಕಾದಂಬರಿಗಳು ತೆರೆದಿಟ್ಟಿವೆ.

ಚರ್ಮಾಯಿ ಕಾದಂಬರಿ ಈ ಜಾಯಮಾನದ ಮುಂದುವರಿಕೆಯ ಹೊಸ ಕಾಲದ ಕೊಂಡಿಯಾಗಿ ಬಹಳ ಮುಖ್ಯವಾಗುತ್ತದೆ. ಜಾತಿ, ಮುಟ್ಟು ಹಾಗೂ ಬಡತನ ಇವುಗಳು ಮನುಷ್ಯರ ಅಸ್ತಿತ್ವವನ್ನೇ ಅಲುಗಾಡಿಸುತ್ತವೆ. ಇವುಗಳನ್ನು ಪೋಷಿಸುವ ಸಂಪ್ರದಾಯ ಜಗತ್ತು ಒಂದೆಡೆ ಇದ್ದರೆ ಇದಕ್ಕೆ ವಿರುದ್ಧವಾಗಿ ಹೊಸಕಾಲದ ಬದುಕಿನ ಧ್ಯಾನದ ಕನವರಿಕೆಗಳ ಲೋಕವು ಸಹ ಈ ಕಾದಂಬರಿಯೊಳಗೆ ಹರಳುಗಟ್ಟಿದೆ.

ಇಂತಹ ಹೊಸ ಕಾಲದ ಕಾದಂಬರಿಕಾರರನ್ನು ಗುರುತಿಸಿರುವ ಸಿರಿವರ ಪ್ರಕಾಶನ ಬೆಂಗಳೂರು ಹಾಗೂ ಪ್ರಥಮ ಕೃತಿಯಲ್ಲಿ ಹೊಸ ಛಾಪನ್ನು ಮೂಡಿಸಿರುವ ಅಡ್ಲೂರು ರಾಜುರವರನ್ನು ಅಭಿನಂದಿಸಬೇಕಾಗುತ್ತದೆ.

Writer - ಪ್ರಕಾಶ್ ಮಂಟೇದ

contributor

Editor - ಪ್ರಕಾಶ್ ಮಂಟೇದ

contributor

Similar News