ಗಳಗನಾಥರ ಬದುಕು ಬರಹ

Update: 2017-07-23 07:25 GMT

ಬೇಲೂರಿನ ಚೆನ್ನಕೇಶವ ದೇವಾಲಯದಂತಹ ಒಂದು ಕಲಾಕೃತಿಯನ್ನು ಕಂಡಾಗ ನಾವು ಅದರ ಸೌಂದರ್ಯ ಔನ್ನತ್ಯ ಭವ್ಯತೆಯನ್ನೂ ಅನುಭವಿಸಿ, ಆನಂದ, ಆಶ್ಚರ್ಯವನ್ನೂ ಪಡುತ್ತೇವೆ. ಆದರೆ ಅದೇ ಕಾಲಕ್ಕೆ ಅದರ ತಳಪಾಯದ ವಿಚಾರ ನಮಗೆ ಬರುವುದು ತೀರ ಅಪರೂಪ;

ಅದರಂತೆ ಇಂದು ಭವ್ಯವಾಗಿ, ವೈವಿಧ್ಯಮಯವಾಗಿ, ಸರ್ವಾಂಗ ಸುಂದರವಾಗಿ ಬೆಳೆದು ನಿಂತಿರುವ, ಇನ್ನೂ ಬೆಳೆಯುತ್ತಿರುವ ಕನ್ನಡ ಕಾದಂಬರಿ ಸೌಧವನ್ನು ಕಂಡು ಆಶ್ಚರ್ಯವನ್ನೂ ಹೆಮ್ಮೆಯನ್ನೂ ಪಡುವ ನಾವು, ಈ ಸೌಧದ ತಳಪಾಯವನ್ನು ಗಟ್ಟಿ ಮುಟ್ಟಾಗಿ ಹಾಕಿದ ಪುಣ್ಯ ಪುರುಷರನ್ನೂ, ಅವರ ಅನುಪಮ ಸೇವೆಯನ್ನೂ ಸ್ಮರಿಸುವುದು ಮತ್ತು ಅವರ ಮಹತ್ವವನ್ನು ಮನವರಿಕೆ ಮಾಡಿ ಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಇಂಥ ಪುಣ್ಯಪುರುಷರಾದ ಗಳಗನಾಥರನ್ನು ಕುರಿತು ಅಭ್ಯಾಸಪೂರ್ಣವಾದ ಒಂದೂ ಪ್ರೌಢ ಗ್ರಂಥ ಇನ್ನೂವರೆಗೆ ಪ್ರಕಟವಾಗಿಲ್ಲ. ಅವರು (1942ರಲ್ಲಿ) ತೀರಿಕೊಂಡು ನಾಲ್ಕು ವರ್ಷಗಳ ನಂತರ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಗಳಗನಾಥ’ ಎಂಬ ಒಂದು ಚಿಕ್ಕ ಪುಸ್ತಕ ಪ್ರಕಟವಾಯಿತು. ಗಳಗನಾಥರನ್ನು ಕುರಿತು ಪ್ರಕಟವಾದ ಪ್ರಥಮ ಗ್ರಂಥವೆಂಬ ಪ್ರಶಸ್ತಿ ಅದಕ್ಕೆ ದೊರೆತರೂ, ಅದು ಅಪೂರ್ಣವೂ ಆಗಿದೆ; ಕೆಲವೆಡೆ ದೋಷಪೂರ್ಣವೂ ಆಗಿದೆ.

ಕರ್ನಾಟಕ ವಿಶ್ವವಿದ್ಯಾ ನಿಲಯದ ‘ಗಳಗನಾಥರ ಕೃತಿಗಳು- ಸಂಖ್ಯಾ ನಿರ್ಣಯ’ ಮತ್ತು ‘ಗಳಗನಾಥ ಕೃತ ಕನ್ನಡಿಗರ ಕಾದಂಬರಿಗಳು’ ಎಂಬೆರಡು ಪ್ರೌಢ ಲೇಖನಗಳನ್ನು ಪ್ರಕಟಿಸಿತು. ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ತಾನು ಏರ್ಪಡಿಸಿದ ವಿಚಾರಸಂಕಿರಣದ ಭಾಷಣಗಳನ್ನು ‘ಗಳಗನಾಥ’ ಎಂಬ ಹೆಸರಿನಿಂದ 1970 ರಲ್ಲಿ ಪ್ರಕಟಿಸಿತು.

ಮುಂದೆ 1972ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವರು ‘ಗಳಗನಾಥ ಮಾಸ್ತರರು’ ಎಂಬ ಸುಮಾರು 120 ಪುಟಗಳ ಗ್ರಂಥವನ್ನು ಪ್ರಕಟಿಸಿದರು.

ಗಳಗನಾಥರು ಕೇವಲ ಭಾಷಾಂತರಕಾರರು, ಅವರು ಮರಾಠಿಯ ಹರಿ ನಾರಾಯಣ ಆಟೆ ಎಂಬವರ ಕಾದಂಬರಿ ಗಳನ್ನು ಕನ್ನಡದಲ್ಲಿ ಭಾಷಾಂತರಿಸಿದರು-ಎಂಬ ಅಭಿಪ್ರಾಯವೇ ಸಾಮಾನ್ಯವಾಗಿ ರೂಢಿವಾಗಿದೆ. ಅಲ್ಲದೆ ಪಂಡಿತ ವಿಮರ್ಶಕರು ಕೂಡ ಗಳಗನಾಥರ ಸ್ವತಂತ್ರ ಕೃತಿಗಳಲ್ಲಿ ‘ಮಾಧವ ಕರುಣಾವಿಲಾಸ’ ವೊಂದನ್ನೇ ಗಣಿಸಿದ್ದಾರೆ. ಗಳಗನಾಥರು 60 ಕೃತಿಗಳನ್ನು ಬರೆದಿರು ವರೆಂದೂ, ಅವರ ಅಪ್ರಕಟಿತ ಕೃತಿಗಳೇ 20 ಇರುವವೆಂದೂ ಹೇಳಲಾಗಿದೆ. ಇದು ತಪ್ಪು ಕಲ್ಪನೆ. ಅಲ್ಲದೆ ಈಗ ಪ್ರಕಟಿತವಾದ ಲೇಖನ ಮತ್ತು ಗ್ರಂಥಗಳಲ್ಲಿ ಗಳಗನಾಥರನ್ನು ಕೆಲವು ಸಲ ವಿನಾಕಾರಣ ಹೊಗಳಿ ಹೊನ್ನಶೂಲಕ್ಕೆ ಏರಿಸಲಾಗಿದೆ. ‘‘ಶ್ರೀ ಗಳಗನಾಥರ ಬರಹ ಎಂದರೆ ಅದೊಂದು ಮಹಾಸಾಗರವಿದ್ದಂತೆ. ಆ ಸಮುದ್ರದಲ್ಲಿ ಹುಡುಕಿದಷ್ಟು ಹೊಸ ಹೊಸ ಮುತ್ತುಗಳು ಹೊರಡುವವು; ಅದನ್ನು ಕಡೆದಷ್ಟು ತರತರದ ಕೌಸ್ತುಭಗಳು ಅದರೊಳಗೆ ಕಾಣಿಸುವವು’’ ಎಂಬಂಥ ಅತೀಪ್ರಶಂಸೆಯ ಮಾತುಗಳೂ ಬಂದಿವೆ ಅಥವಾ ಕೆಲವು ಲೇಖನಗಳಲ್ಲಿ ಅವರ ಬಗ್ಗೆ ಅತಿ ಉಪೇಕ್ಷೆಯನ್ನೂ ನಿರ್ಲಕ್ಷವನ್ನೂ ತೋರಲಾಗಿದೆ; ಕೃತಿನಿಷ್ಠ ವಿಮರ್ಶೆಯ ಹೆಸರಿನಿಂದ ಬಹಳ ಹಗುರವಾದ, ಬೀಸುನುಡಿಗಳನ್ನು ಹೇಳಲಾಗಿದೆ.

ಗಳಗನಾಥರು 1869ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜನಿಸಿ ದರು. ಅವರ ಮೊದಲ ಸಾಹಿತ್ಯಿಕ ಕೃತಿ, ‘ಪದ್ಮನಯನಾ’ 1898ರಲ್ಲಿ ಪ್ರಕಟವಾಯಿತು. ಅವರು ಕಾಲವಶರಾಗುವವರೆಗೆ ಅಂದರೆ 1942ರವರೆಗೆ ಬರೆಯುತ್ತಲೇ ಇದ್ದರೂ, ಅವರ ಕೊನೆಯ ಕೃತಿ-‘ದುರ್ಗದ ಬಿಚ್ಚು ಗತ್ತಿ’-1938ರಲ್ಲಿ ಪ್ರಕಟವಾ ಯಿತು. ಆ ಕಾಲಕ್ಕೆ ಕನ್ನಡದಲ್ಲಿ ಬೇಕಾದಷ್ಟು ಅನುಕೂಲ ವಾತಾವರಣ ವುಂಟಾಗಿ ಅನೇಕ ಕಾದಂಬರಿಕಾರರು ಜನಿಸಿದ್ದರೂ ಗಳಗನಾಥರು ಸಾಹಿತ್ಯ ನಿರ್ಮಿತಿಗೆ ತೊಡಗಿದಾಗ ಮಾತ್ರ ಕನ್ನಡ ಕಾದಂಬರಿ ಇನ್ನೂ ತೀರ ಶೈಶವಾವಸ್ಥೆಯಲ್ಲಿಯೇ ಇದ್ದಿತು.

ಮೈಸೂರು ಭಾಗದಲ್ಲಿ ಕೆಲವರು ತೆಲುಗಿನಿಂದ ಕೂಡ ಕಾದಂಬರಿಗಳನ್ನು ಭಾಷಾಂತರಿಸಿರುವರು. ತೆಲುಗಿನ ಸುಪ್ರಸಿದ್ಧ ಲೇಖಕರಾದ ವೀರೇಶಲಿಂಗಂ ಅವರ ‘ವಿವೇಕ ಚಂದ್ರಿಕೆ’ (1898), ‘ಸತ್ಯವತೀ ಚರಿತ್ರೆ’(1897), ‘ಸತ್ಯರಾಜಾ ಪೂರ್ವದೇಶಯಾತ್ರೆ’ (1899)ಗಳು ಕನ್ನಡಕ್ಕೆ ಭಾಷಾಂತರಗೊಂಡವು. ಅದರಂತೆ ಮದ್ರಾಸಿನಲ್ಲಿ ಹೈಕೋರ್ಟ್ ವಕೀಲರಾಗಿದ್ದ ರೆಂಟಾಲ ವೆಂಕಟ ಸುಬ್ಬರಾಯ ಎಂಬವರು 1895ರಲ್ಲಿಯೇ ‘ಕೇಸರಿ ವಿಲಾಸ’ ಎಂಬ ಸ್ವತಂತ್ರ ಕಾದಂಬರಿಯನ್ನು ಕನ್ನಡದಲ್ಲಿ ಬರೆದರು. ಅದೇ ಹೆಸರಿನಿಂದ ಅದು ತೆಲುಗಿನಲ್ಲಿಯೂ ಅದೇ ವರ್ಷ ಪ್ರಕಟವಾಯಿತು. ಅವರ ‘ಆನಂದದೀಪಿಕೆ’ ಎಂಬ- ತೆಲುಗಿ ನಿಂದ ಅನುವಾದಿತ ಕಾದಂಬರಿ ಯು 1901ರಲ್ಲಿ ಪ್ರಕಟ ವಾಯಿತು. ಮಲೆಯಾಳಿಯ ‘ಸುಕುಮಾರಿ’ ಎಂಬುದನ್ನು 1899ರಲ್ಲಿ ಬಾಸೆಲ್ ಮಿಶನ್ನಿ ನವರು ಕನ್ನಡಕ್ಕೆ ತಂದರು. ಮುಂಬೈಯಲ್ಲಿ ನೆಲೆಸಿದ್ದ ದಕ್ಷಿಣ ಕನ್ನಡದ ಅನೇಕರು ಹಲವು ವಿಧವಾಗಿ ಕನ್ನಡದ ಕಾರ್ಯವನ್ನು ಕೈಗೊಂಡರು. ಅವರಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಅವರು ತುಂಬ ಗಣ್ಯರು. ವೆಂಕಟರಮಣ ಶಾಸ್ತ್ರಿಗಳು ಅನೇಕ ಗ್ರಂಥಗಳನ್ನು ಬರೆದಿರುವವರು. ಅವುಗಳಲ್ಲಿ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ’ (1887) ಎಂಬ ಪ್ರಹಸನವು ತುಂಬ ಮಹತ್ವದ ಕೃತಿಯಾಗಿದೆ. ಅದೇ ಕಾಲಕ್ಕೆ ಶಿವರಾಮ ನಾರಣಪ್ಪ ಧಾರೇಶ್ವರ ಎಂಬುವರು ‘ಕನ್ಯಾವಿಕ್ರಯ’ವೆಂಬ (1887) ನಾಟಕವನ್ನು ಬರೆದರು. ಹೊಸ ರೀತಿಯ ಪ್ರಹಸನಗಳನ್ನು ಮೊದಲು ಬರೆದವರಲ್ಲಿ ವೆಂಕಟರಮಣ ಶಾಸ್ತ್ರಿ ಮತ್ತು ಧಾರೇಶ್ವರ ಅವರು ಪ್ರಮುಖರಾಗಿರುವರು.

ಇಂಥ ಪರಿಸರದಲ್ಲಿ ಗಳಗನಾಥರು ‘ಶೇಷಾಚಲ ಗ್ರಂಥಮಾಲೆ’ ಯನ್ನೂ ಆನಂತರ ‘ಗಳಗನಾಥ ಸುರಸ ಗ್ರಂಥಮಾಲೆ’ಯನ್ನೂ ಆರಂಭಿಸಿ ಬಹುಕಾಲ ನಡೆಯಿಸಿಕೊಂಡು ಬಂದರು. ತಮ್ಮ ಕಾದಂಬರಿಗಳನ್ನು, ಧಾರ್ಮಿಕ ಗ್ರಂಥಗಳನ್ನೂ ಅಲ್ಲದೆ ಇತರರು ಬರೆದ ಅಂಥ ಗ್ರಂಥಗಳನ್ನೂ ಅವರು ಪ್ರಕಟಿಸಿದರು. ಅದು ಒಂದು ದೊಡ್ಡ ಸಾಹಸವೇ ಸರಿ. ಗಳಗನಾಥರು 1907ರಲ್ಲಿ ‘ಸದ್ಬೋಧ ಚಂದ್ರಿಕೆ’ ಪತ್ರಿಕೆ ಯನ್ನು ಆರಂಭಿಸಿದರು. ಮೊದ ಮೊದಲು ಚಂದ್ರಿಕೆಯಲ್ಲಿ ಧಾರ್ಮಿಕ ಹಾಗೂ ನೈತಿಕ ಚರಿತ್ರೆಗಳೂ, ಲೇಖನ ಗಳೂ ಹೆಚ್ಚಾಗಿ ಪ್ರಕಟ ವಾಗುತ್ತಿದ್ದವು. ಅವುಗಳನ್ನು ಬರೆಯುವಲ್ಲಿ ಕೂಡ ಸಿಂಹಪಾ ಲು ಗಳಗನಾಥರದೇ ಆಗಿತ್ತು. ಮುಂದೆ ಮರು ವರ್ಷ ದಿಂದ ಅವರು ‘ಚಂದ್ರಿಕೆ’ಯಲ್ಲಿ ‘ಕಮಲ ಕುಮಾರಿ’ಯನ್ನು ಧಾರಾ ವಾಹಿಯಾಗಿ ಕೂಡ ತೊಡಗಿ, ಒಂದರ ನಂತರ ಇನ್ನೊಂದರಂತೆ ಕಾದಂಬರಿ ಗಳನ್ನು ಬರೆಯತೊಗಿದರು. ಕಾದಂಬರಿಗಳ ಸತ್ವಯುತವಾದ ವಸ್ತು ಮತ್ತು ಜೀವಂತವಾದ ಭಾಷಾಶೈಲಿಯಿಂದ ಜನರು ಆಕರ್ಷಿತರಾದರು.

ತಮ್ಮ ಬಾಲ್ಯದ ಬಗ್ಗೆ ಗಳಗನಾಥರೇ ‘‘ನಾನು ಕೇವಲ ಗಾವಿಲ ನೆಂತಲೇ ಹೇಳಬಹುದು. ಯಾಕೆಂದರೆ ನಾನು ಹುಟ್ಟಿದ ಹಾವನೂ ರೆಂಬ ನನ್ನ ಮಾತಾಮಹರ ಊರು ಹಳ್ಳಿ; ನಾನು ಬೆಳೆದ ನನ್ನ ಸ್ವಂತದ ಗಳಗನಾಥವೆಂಬ ಕ್ಷೇತ್ರಸ್ಥಾನವೂ ತೀರ ಸಣ್ಣ ಹಳ್ಳಿ’ ಎಂದು ಹೇಳಿಕೊಂಡಿದ್ದಾರೆ.

 ಈ ಹಳ್ಳಿಗಳಲ್ಲೇ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿ ಮುಲ್ಕೀ ಪರೀಕ್ಷೆ ಪಾಸಾಗಬೇಕಾಯಿತು.

‘‘ನನಗೆ ದೊರೆತ ಶ್ರೇಷ್ಠ ಶಿಕ್ಷಣವೆಂದರೆ, ಧಾರವಾಡದ ಕನ್ನಡ ಟ್ರೈನಿಂಗ್ ಕಾಲೇಜ್‌ನ ಮೂರು ವರ್ಷದ ಕೌದಿಯ ಚಂದದ ಹಂಡಬಂಡ ಶಿಕ್ಷಣವು! ನನ್ನ ಕನ್ನಡ ಭಾಷೆಯ ಜ್ಞಾನವು, ಕೇವಲ ಜನ್ಮಭಾಷೆಯೆಂಬ ಪ್ರಧಾನ ಕಾರಣದಿಂದ ವಿಸ್ತೃತವಾಗಬಹು ದಾದಷ್ಟರ ಮಟ್ಟಿಗೆ ಬೆಳವಣಿಗೆ ಹೊಂದಿದ್ದು, ಕೊಂಕಣಸ್ಥರ ಸಹವಾಸದಿಂದ ತಿಳಿಯಬಹುದಾದಷ್ಟು ಮಹಾರಾಷ್ಟ್ರ ಭಾಷೆಯು ನನಗೆ ತಿಳಿಯುತ್ತಿರುವುದು, ನನ್ನ ಸಂಸ್ಕೃತ ಭಾಷೆಯ ಜ್ಞಾನವು, ನಾನು ಟ್ರೈನಿಂಗ್ ಕಾಲೇಜ್‌ನಲ್ಲಿಯ ಪರೀಕ್ಷೆಗಳಿಗಾಗಿ ಮೂರು ವರ್ಷ ಓದಿದ ತೀರ ಸಾಮಾನ್ಯವಾದ ತಾಳು ತಂತು ಇಲ್ಲದ ಪುಸ್ತಕೀಯ ಜ್ಞಾನದಲ್ಲಿ ಹರಿದು ಮುರಿದು ಉಳಿದದ್ದು, ಇಂಗ್ಲಿಷ್ ಭಾಷೆಯ ಮೂಲಾಕ್ಷರಗಳನ್ನೂ ಸಾಲಾಗಿ ಬರೆಯಲಿಕ್ಕೆ ನನಗೆ ಬರುವುದಿಲ್ಲ’’ ಎಂತಲೂ ಅವರು ಹೇಳಿಕೊಂಡಿದ್ದಾರೆ.

ಧಾರವಾಡದಲ್ಲಿರುವಾಗಲೇ ಗಳಗನಾಥರಲ್ಲಿ ಸಾಹಿತ್ಯಿಕ ಅಭಿರುಚಿ ಬೆಳೆಯಿತು. ಅದರ ಫಲವಾಗಿ ಅವರು ಸಣ್ಣಪುಟ್ಟ ಶಾಲೋಪಯೋಗಿ ಪುಸ್ತಕಗಳನ್ನು ಬರೆದೂ ಬರೆದರು. ಅವರ ಲೇಖನ ಕಾರ್ಯ ಬೆಳೆಯಲು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವೂ ಬಹುಮಟ್ಟಿಗೆ ಕಾರಣವಾಯಿತೆನ್ನಬೇಕು.

ಗಳಗನಾಥರ ಶಿಕ್ಷಕ ಜೀವನ ತುಂಬ ಆದರ್ಶಪ್ರಾಯವಾಗಿತ್ತು. ಅವರು ಯಾವ ಶಾಲೆಗೆ ಹೋದರು ಅಲ್ಲಿ ತಮ್ಮ ಆದರ್ಶ ವ್ಯಕ್ತಿತ್ವದ ಪ್ರಭಾವವನ್ನು ಬೀರದೇ ಇರುತ್ತಿರಲಿಲ್ಲ. ಅವರು ತಮ್ಮ ವಿದ್ಯಾರ್ಥಿ ಗಳಿಗೆ ಕಲಿಸಿದರಲ್ಲದೆ, ತಮ್ಮ ಸಹೋದ್ಯೋಗಿಗಳಿಗೂ, ಊರ ಜನರಿ ಗೂ ಆದರ್ಶ ಗುರುಗಳಾಗಿಯೇ ಇದ್ದು ಅವರನ್ನು ತಿದ್ದಿದರು.

ಗಳಗನಾಥರು ಶಿಕ್ಷಕರಾಗಿ ಕೆಲಸ ಮಾಡಿದ ಕೊನೆಯ ಗ್ರಾಮವೆಂದರೆ ಹಾವೇರಿ ತಾಲೂಕಿನ ಗುತ್ತಲ. ಅವರ ಜೀವನದ ರೀತಿ- ನೀತಿಗಳನ್ನು ಸ್ಪಷ್ಟವಾಗಿ ತೋರಿಸುವ ಎರಡು ಪ್ರಮುಖ ಕುರುಹುಗಳು ಇಂದಿಗೂ ಗುತ್ತಲ ಗ್ರಾಮದಲ್ಲಿವೆ. ಮೊದಲನೆ ಯದೆಂದರೆ, ಅವರು ಗುತ್ತಲದಲ್ಲಿ ತೆಗೆಯಿಸಿದ ಸಿಹಿನೀರಿನ ಬಾವಿ. ಗುತ್ತಲದಲ್ಲಿ ನೀರಿನ ತೊಂದರೆ ವಿಶೇಷವಾಗಿತ್ತು. ಅಲ್ಲೊಂದು ಬಾವಿಯನ್ನು ತೆಗೆಯಿಸಬೇಕೆಂದು ವಿಚಾರ ಮಾಡಿ ಗಳಗನಾಥರು ಕಾರ್ಯಪ್ರವೃತ್ತರಾದರು. ಊರವರಲ್ಲಿ ಹಲವರು ಮೊದಲು ಸಹಕರಿಸಲಿಲ್ಲ. ಪುಣ್ಯಕ್ಕೆ ಬಾವಿಯಲ್ಲಿ ಸಿಹಿನೀರಿನ ಸೆಲೆಯು ಹತ್ತಿತ್ತು. ಕೊನೆಗೆ ವಿರೋಧಿಗಳೂ ಸ್ನೇಹಿತರಾದರು. ಆ ಬಾವಿಯು ಇಂದಿಗೂ ಗಳಗನಾಥರ ಕರ್ತೃತ್ವ ಶಕ್ತಿಯ ಕುರುಹಾಗಿ ನಿಂತಿದೆ. ತಮ್ಮ ಚಂದ್ರಿಕೆ ಪತ್ರಿಕೆಯ ಬಗ್ಗೆ ಒಮ್ಮೆ ಗಳಗನಾಥರು ಹೀಗೆ ಬರೆದರು.

‘‘ಪ್ರಿಯ ವಾಚಕರೇ, ಇನ್ನು ನಮ್ಮ ಚಪಲೆಯಾದ ಚಂದ್ರಿಕೆ ಯ ಚಟುವಟಿಕೆ ಯನ್ನು ಕೇಳಿರಿ. ಆಕೆಯು ಮುಂಬೈ ಇಲಾಖೆಯ, ಮದ್ರಾಸ ಇಲಾಖೆಯ, ಮೈಸೂರು ಪ್ರಾಂತದಿಂದ ಜನರ ಚಿತ್ತವನ್ನು ರಂಜಿ ಸುತ್ತ ಪ್ರವೇಶಿಸಿರುವಳು! ಆಕೆಯ ಪ್ರಸಾರವು ಇಪ್ಪತ್ತೇಳು ಜಿಲ್ಲೆಗಳಲ್ಲಿ 160 ಸಬ್‌ಪೋಸ್ಟು ಗಳಲ್ಲಿ, 1,200 ಊರುಗಳಲ್ಲಿ ಆಗಿರುತ್ತದೆ. 4,000 ಜನ ಚಂದಾದಾರರಲ್ಲಿ ಸರಾಸರಿ 3,875ಜನ ಗಂಡಸರೂ 125 ಜನ ಹೆಣ್ಣುಮಕ್ಕಳೂ ಇರುವರು. ಈ ಒಟ್ಟು ಜನರಲ್ಲಿ ಸರಾಸರಿ 2,200 ಜನ ಬ್ರಾಹ್ಮಣರು. 1,200 ಜನ ವೀರಶೈವರು, 525 ಜನ ಇತರ ಹಿಂದೂಗಳು, 50 ಜನ ಮುಸಲ್ಮಾನರು, 25 ಜನ ಕ್ರಿಶ್ಚಿಯನ್ನರು ಇದ್ದಾರೆ. ನೌಕರರು 1,700 ಜನರಿದ್ದರೆ, ಸುಖವಸ್ತುಗಳು 2,300 ಜನರು ಇರುವರು’’.

ಪತ್ರಿಕೆಯ ಸ್ಥಿತಿ ಹೀಗಿದ್ದರೆ ಅವರ ಪುಸ್ತಕ ಪ್ರಕಟನೆೆ ಹಾಗೂ ಮಾರಾಟದ ಕತೆಗಳು ಭಿನ್ನವಾಗಿವೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಹಾ.ಮಾ. ನಾಯಕರು ತಾವು ಏಳೆಂಟು ವರ್ಷದ ಬಾಲಕರಾಗಿರುವಾಗ ತಮ್ಮೂರಿಗೆ ಪುಸ್ತಕ ಮಾರಲು ಬಂದ ಗಳಗನಾಥರನ್ನು ಕಂಡದ್ದನ್ನು ಸ್ಮರಿಸಿಕೊಂಡಿದ್ದಾರೆ.

‘‘ಒಂದು ಸಂಜೆ ಮನೆಯ ಎದುರಿಗೇ ಇದ್ದ ಶಾಲೆಯ ಪಾಗಾರದ ಮೇಲೆ ಕುಳಿತುಕೊಂಡು ಎದುರು ದಿಕ್ಕಿನಿಂದ ಬರಬೇಕಾ ಗಿದ್ದ ಅಂದಿನ ಕೊನೆಯ ಬಸ್ಸಿನ ಪ್ರತೀಕ್ಷೆಯಲ್ಲಿದ್ದೆ. ದಿನಕ್ಕೆ ಮೂರು ಸಾರಿ ಬಂದು ಹೋಗುತ್ತಿದ್ದ ಬಸ್ಸುಗಳೇ ನಮಗೆ ಆ ಚಿಕ್ಕ ಊರಿನ ದೊಡ್ಡ ಆಕರ್ಷಣೆಗಳಾಗಿದ್ದುವು. ಬಸ್ಸು ಬಂತು, ಹೋಯಿತು. ಅದೇ ದಿಕ್ಕಿನಿಂದ ದೊಡ್ಡ ಗಂಟೊಂದನ್ನು ಹೊತ್ತುಕೊಂಡು ಮುದುಕರೊಬ್ಬರು ನಿಧಾನವಾಗಿ ನಡೆದು ಬರುತ್ತಿದ್ದರು.

ಯಾರೋ ಸೀರೆ ಬಟ್ಟೆಗಳನ್ನು ಮಾರುವವರಿರಬೇಕೆಂದು ಮನೆಯ ಹೆಂಗಸರಿಗೆ ವಿಷಯ ತಿಳಿಸಲು ಒಳಗೆ ಓಡಿದೆ. ಬಂದವರು ವ್ಯಾಪಾರಿ, ನಿಜ. ಆದರೆ ಪುಸ್ತಕಗಳನ್ನು ಮಾರುವವರು. ಪುಸ್ತಕಗಳನ್ನು ಹೊತ್ತು ಮಾರುವುದು ನಾವು ಕಂಡು ಕೇಳದ ಸಂಗತಿ. ವ್ಯಾಪಾರಿಗೋ ಇಳಿವಯಸ್ಸು. ಮೈಯೆಲ್ಲ ಧೂಳು ಕೆಂಪು. ಪುಸ್ತಕಗಳೋ ಮಹಾಭಾರ. ಮನೆಯವರಿಗೆಲ್ಲ ಅವರಲ್ಲಿ ಸಹಾನುಭೂತಿ. ಆ ಪುಸ್ತಕಗಳನ್ನು ಬರೆದವರೂ ಆ ಮುದುಕರೇ! ಇದೀಗ ಆಶ್ಚರ್ಯ. ಎಲ್ಲರಲ್ಲೂ ಗೌರವ ಮೂಡಿದ್ದು. ಎಲ್ಲರೂ ಮೂಕರೇ ಆ ಹೊತ್ತು.’’

ಪುಸ್ತಕಗಳನ್ನು ಹೊತ್ತು ಊರೂರು ಅಲೆದು ಮಾರಾಟ ಮಾಡಿದ ಗಳಗನಾಥರ ಚಿತ್ರವನ್ನು ನಾವು ಇಂದು ಬರೆಯಲೆತ್ನಿಸುವ ಪ್ರಯತ್ನವು ಡಾ. ನಾಯಕರು ಹೇಳಿದಂತೆ ಮಸುಕು ಮಸುಕಾದ ಚಿತ್ರವನ್ನು ಭೂತಗನ್ನಡಿಯಲ್ಲಿ ನೋಡಿದಂತೆಯೇ ಸರಿ. ಆಗಿನ ಅವರ ನಿಜವಾದ ಚಿತ್ರವನ್ನು ಏಕಾಗ್ರಗೊಳಿಸಿ ಯಾರು ಬಣ್ಣಿಸಬಲ್ಲರು?

ಅವರ ಮರಣಕಾಲಕ್ಕೆ ಅನೇಕ ಆಪ್ತರೂ, ಸ್ನೇಹಿತರೂ ಅವರ ಹತ್ತಿರವಿದ್ದರು. ಅವರ ಅಳಿಯ ಶಂಕರ ಭಟ್ಟ ಜೋಶಿಯವರು ಅತೀವ ದುಃಖಿತರಾಗಿರುವುದನ್ನು ಕಂಡು ಸ್ವತಃ ಗಳಗನಾಥರೇ ಅವರನ್ನು ಸಮಾಧಾನಪಡಿಸಿದರಂತೆ! ಕೊನೆಗೆ ‘‘ನನ್ನ ಪುಸ್ತಕಗಳು ಎಲ್ಲಿಯವರೆಗೆ ಇರುವವೋ ಅಲ್ಲಿಯವರೆಗೆ ನಾನು ಸತ್ತರೂ ಇದ್ದಂತೆಯೇ!’’ ಎಂದು ಹೇಳಿದ್ದರು.

ಮರಣ ಕಾಲದಲ್ಲಿ ಕೂಡ ಗಳಗನಾಥರಿಗೆ ತಮ್ಮ ಪುಸ್ತಕಗಳ ಬಗ್ಗೆ ಎಂಥ ವಿಶ್ವಾಸ!

ಗ್ರಂಥ ಸಮುದಾಯವನ್ನುಳಿದು, ಬೇರಾವ ಲೌಕಿಕ ಸಂಪತ್ತನ್ನೂ ಅವರು ತಮ್ಮ ಸಂಸಾರಕ್ಕೆಂದು ಬಿಟ್ಟು ಹೋಗಿರಲಿಲ್ಲ. 10 ದಿನಗಳ ನಂತರದ ಅವರ ಕರ್ಮದ ವೆಚ್ಚಕ್ಕೆ ಆ ಅವಧಿಯಲ್ಲಿ ಮಾರಾಟವಾದ ಪುಸ್ತಕಗಳು ನೆರವಾದುವೆಂಬುದು ಶೋಚನೀಯ ವಾದರೂ ಸತ್ಯಸಂಗತಿ.

‘‘ನನಗೆ ದೊರೆತ ಶ್ರೇಷ್ಠ ಶಿಕ್ಷಣವೆಂದರೆ, ಧಾರವಾಡದ ಕನ್ನಡ ಟ್ರೈನಿಂಗ್ ಕಾಲೇಜ್‌ನ ಮೂರು ವರ್ಷದ ಕೌದಿಯ ಚಂದದ ಹಂಡಬಂಡ ಶಿಕ್ಷಣವು! ನನ್ನ ಕನ್ನಡ ಭಾಷೆಯ ಜ್ಞಾನವು, ಕೇವಲ ಜನ್ಮಭಾಷೆಯೆಂಬ ಪ್ರಧಾನ ಕಾರಣದಿಂದ ವಿಸ್ತೃತವಾಗಬಹು ದಾದಷ್ಟರ ಮಟ್ಟಿಗೆ ಬೆಳವಣಿಗೆ ಹೊಂದಿದ್ದು, ಕೊಂಕಣಸ್ಥರ ಸಹವಾಸದಿಂದ ತಿಳಿಯಬಹುದಾದಷ್ಟು ಮಹಾರಾಷ್ಟ್ರ ಭಾಷೆಯು ನನಗೆ ತಿಳಿಯುತ್ತಿರುವುದು, ನನ್ನ ಸಂಸ್ಕೃತ ಭಾಷೆಯ ಜ್ಞಾನವು, ನಾನು ಟ್ರೈನಿಂಗ್ ಕಾಲೇಜ್‌ನಲ್ಲಿಯ ಪರೀಕ್ಷೆಗಳಿಗಾಗಿ ಮೂರು ವರ್ಷ ಓದಿದ ತೀರ ಸಾಮಾನ್ಯವಾದ ತಾಳು ತಂತು ಇಲ್ಲದ ಪುಸ್ತಕೀಯ ಜ್ಞಾನದಲ್ಲಿ ಹರಿದು ಮುರಿದು ಉಳಿದದ್ದು, ಇಂಗ್ಲಿಷ್ ಭಾಷೆಯ ಮೂಲಾಕ್ಷರಗಳನ್ನೂ ಸಾಲಾಗಿ ಬರೆಯಲಿಕ್ಕೆ ನನಗೆ ಬರುವುದಿಲ್ಲ’’

ಕನ್ನಡದ ಹಿರಿಯ ಬರಹಗಾರ ರಲ್ಲಿ ಒಬ್ಬರಾಗಿದ್ದ ಗಳಗನಾಥರ ಬಗ್ಗೆ ಕೃಷ್ಣಮೂರ್ತಿ ಕಿತ್ತೂರರವರು ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಕೃತಿಯ ಆಯ್ದ ಭಾಗಗಳನ್ನು ಇಲ್ಲಿ ನೀಡಿದೆ. ನಾಲ್ಕು ದಶಕಗಳ ಹಿಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ನಿಲಯವು ಈ ಕೃತಿಯನ್ನು ಪ್ರಕಟಿಸಿದೆ.

Writer - ಕೃಷ್ಣಮೂರ್ತಿ ಕಿತ್ತೂರ

contributor

Editor - ಕೃಷ್ಣಮೂರ್ತಿ ಕಿತ್ತೂರ

contributor

Similar News