ಒಂದು ಕೊಲೆಯ ಸುತ್ತ!

Update: 2017-07-23 08:03 GMT

ಭಾಗ - 5

ಸತ್ಯಸಾಯಿಬಾಬಾ ಕಾಲೇಜಿನ ಕೊಲೆಯ ತನಿಖೆ!

1987ರ ಫೆಬ್ರವರಿ 20ರಂದು ಮಂಗಳೂರಿನ ಹೊರವಲಯದಲ್ಲಿ ಯುವಕನೊಬ್ಬನ ಮೃತ ಹೇಹ ಪತ್ತೆಯಾಯಿತು. ಆ ಮೃತದೇಹ ದೇವ ಮಾನವನೆಂದು ಕರೆಸಿಕೊಳ್ಳುವ ಹೆಸರಿನ ಟ್ರಸ್ಟ್ ನಿಂದ ನಡೆಸಲ್ಪಡುವ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ರಾಮಯ್ಯ (ಹೆಸರು ಬದಲಿಸಲಾಗಿದೆ) ಎಂಬಾತನದ್ದೆಂದು ಪತ್ತೆಹಚ್ಚ ಲಾಯಿತು. ಟ್ರಸ್ಟ್‌ನಡಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜು ನಡೆಸಲ್ಪಡುತ್ತಿದ್ದವು. ವಿದ್ಯಾಸಂಸ್ಥೆಗಳ ಕಟ್ಟಡ ಮತ್ತು ಭೂಮಿ ಟ್ರಸ್ಟ್‌ಗೆ ಸೇರಿದ್ದಾಗಿದ್ದರೆ, ಅಲ್ಲಿನ ಖರ್ಚುವೆಚ್ಚವನ್ನು ರಾಜ್ಯ ಸರಕಾರ ಭರಿಸುತ್ತಿತ್ತು.

ಪತ್ತೆಯಾದ ಮೃತದೇಹವನ್ನು ತೊಡಲಾಗಿದ್ದ ಬಟ್ಟೆಗಳ ಮೂಲಕ ಅದನ್ನು ದೃಢಪಡಿಸಲಾಗಿತ್ತು. ಮೃತದೇಹ ಪತ್ತೆಯಾಗುವ ಎರಡು ದಿನಗಳ ಹಿಂದಿನಿಂದ ಆತ ಕಣ್ಮರೆಯಾಗಿರುವುದಾಗಿ ಹೇಳಲಾಗಿತ್ತು. ದೇಹ ಸುಟ್ಟ ಸ್ಥಿತಿಯಲ್ಲಿತ್ತು. ಆತ ತೊಟ್ಟಿದ್ದ ಬಟ್ಟೆಗಳೂ ಅರ್ಧಂಬರ್ಧ ಸುಟ್ಟು ಹೋಗಿತ್ತು. ಆತನ ಕುತ್ತಿಗೆಯಲ್ಲಿ ಸರವೊಂದಿತ್ತು. ಆ ಸರಕ್ಕೆ ಪೆಂಡೆಂಟ್ ಕೂಡಾ ಇತ್ತು. ಅದರಲ್ಲಿ ದೇವ ಮಾನವನೆಂದು ಕರೆಸಿಕೊಳ್ಳುವಾತನ ಫೋಟೊ ಕೂಡಾ. ವಿಶೇಷವೆಂದರೆ, ದೇವಮಾನವನೆಂದು ಹೇಳಿಕೊಳ್ಳುತ್ತಿದ್ದ, ತನ್ನ ಫೋಟೊವನ್ನು ಪೆಂಡೆಂಟ್ ಆಗಿಸಿಕೊಂಡು ಕುತ್ತಿಗೆಯಲ್ಲೇ ಹಾಕಿಕೊಂಡಿದ್ದ ತನ್ನ ಭಕ್ತನ ಈ ರೀತಿಯ ಸಾವನ್ನು ತಪ್ಪಿಸಲು ಆ ಮಹಾತ್ಮನಿಗೆ ಮಾತ್ರ ಆಗಿರಲಿಲ್ಲ!

ಮೃತದೇಹ ಪತ್ತೆಯಾದ ತಕ್ಷಣ ಟ್ರಸ್ಟ್‌ನ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅದೊಂದು ಆತ್ಮಹತ್ಯೆ ಪ್ರಕರಣವೆಂಬ ಹಣೆಪಟ್ಟಿ ಕಟ್ಟಿದರು.

ತನ್ನ ಮೈಮೇಲೆ ಬೆಂಕಿ ಹಚ್ಚಿ ಸುಟ್ಟು ಕೊಳ್ಳುವಾಗ ಗಜಗಳಷ್ಟೇ ಹತ್ತಿರದಲ್ಲಿ ಮಲಗಿದ್ದ ಆತನ ಸಂಗಡಿಗರಿಗೆ ಒಂದಿಷ್ಟೂ ಅರಿವಿಗೆ ಬಾರದಿರಲು ಕಾರಣವೇನು ಎಂಬ ಬಗ್ಗೆ ಮಾತ್ರ ಜನರು ಪ್ರಶ್ನಿಸಲಾ ರಂಭಿಸಿದ್ದರು. ಆದರೆ ಅವರ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗದಾಗಿತ್ತು. ಆತ ಹಾಗೂ ಅತನ ಸಂಗಡಿಗರು ವಾಸವಾಗಿದ್ದ ಕೋಣೆಯ ಕೆಲ ಗಜಗಳ ದೂರದಲ್ಲೇ ಮೃತದೇಹ ಪತ್ತೆಯಾಗಿತ್ತು.

ಮಾತ್ರವಲ್ಲದೆ, ಆತನ ಕುಟುಂಬ ಕೂಡಾ ಆರ್ಥಿಕವಾಗಿ ತೀರಾ ಬಡತನದ್ದಾಗಿರಲಿಲ್ಲ. ಹಾಗಿರುವಾಗ ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಯೂ ಎದ್ದಿತ್ತು.

ಈ ನಡುವೆ ಮೃತ ಯುವಕನ ತಂದೆಯನ್ನು ಸಂಪರ್ಕಿಸಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಲಾಯಿತು. ಜನರ ಒತ್ತಡದ ಮೇರೆಗೆ ಮೃತದೇಹವನ್ನು ಹೂಳಲಾಯಿತು. ಆಶ್ಚರ್ಯದ ಸಂಗತಿಯೆಂದರೆ ಮೃತ ವ್ಯಕ್ತಿಯ ದೇಹದ ಮುಂಭಾಗ ಮತ್ತು ಮುಖ ಮಾತ್ರವೇ ಸುಟ್ಟು ಹೋಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸೀಮೆಎಣ್ಣೆ ಸುರಿದು ತನ್ನ ದೇಹವನ್ನು ಆತನೇ ಸುಡಲು ಪ್ರಯತ್ನಿಸಿದ್ದರೆ, ಆತ ಕೊನೆ ಕ್ಷಣದಲ್ಲಾದರೂ ಜೀವ ಉಳಿಸಿಕೊಳ್ಳಲು, ನೋವಿನಿಂದ ಚೀರಾಡಲು ನಡೆಸಿದ ಹೋರಾಟದ ಯಾವುದೇ ಕುರುಹೂ ಕೂಡಾ ಸಿಕ್ಕಿರಲಿಲ್ಲ. ಈ ಸಂಗತಿ ಜನರ ಬಾಯಿಂದ ಬಾಯಿಗೆ ಹರಿದಾಡತೊಡಗಿದಂತೆ, ಅಲ್ಲಿ ಅನ್ಯಾಯದ ವಾಸನೆಯೊಂದು ದಟ್ಟವಾಗತೊಡಗಿತು.

ಟ್ರಸ್ಟ್ ಆಡಳಿತವು ತನ್ನ ಸಾಹಸವನ್ನು ಪ್ರದರ್ಶಿಸಿದ ಇದೇ ಮೊದಲ ಪ್ರಕರಣವೇನೂ ಆಗಿರಲಿಲ್ಲ. ಇದಕ್ಕೆ ಕೆಲ ವರ್ಷಗಳ ಹಿಂದೆ, ಟ್ರಸ್ಟ್ ಆಡಳಿತವು ಹಠಾತ್ತನೆ ಹೆಣ್ಣು ಮಕ್ಕಳ ಪ್ರವೇಶಾತಿಯನ್ನು ರದ್ದು ಪಡಿಸಿತ್ತು. ಬಡ ಕುಟುಂಬಗಳ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಸಂಸ್ಥೆ ಇದೊಂದೇ ಆಗಿದ್ದರಿಂದ ಇದು ಸ್ಥಳೀಯರಿಂದ ವಿರೋಧಕ್ಕೆ ಕಾರಣವಾಯಿತು. ಕೊನೆಗೆ ಸ್ಥಳೀಯರು ಹಾಗೂ ಕೆಲ ಪ್ರಗತಿಪರ ಚಿಂತಕರ ಒತ್ತಡದ ಮೇರೆಗೆ ಟ್ರಸ್ಟ್ ಆಡಳಿತ ಮತ್ತೆ ಹೆಣ್ಣು ಮಕ್ಕಳ ಪ್ರವೇಶವನ್ನು ಆರಂಭಿಸಿತು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ತರಗತಿ ಗಳನ್ನು ನಡೆಸಲು ನಿರ್ಧರಿಸಲಾಯಿತು. ಟ್ರಸ್ಟ್‌ಗೆ ಭೂಮಿ ಮತ್ತು ಆಸ್ತಿಯನ್ನು ಸ್ಥಳೀಯರಿಂದಲೇ ಕೊಡುಗೆಯಾಗಿ ನೀಡಿದ್ದ ಕಾರಣ ಟ್ರಸ್ಟ್ ಆಡಳಿತ ಅದಕ್ಕೆ ಒಪ್ಪಲೇ ಬೇಕಾಯಿತು.

ಈ ನಡುವೆ ರಾಮಯ್ಯ ಸಾವಿನ ತನಿಖೆಗೆ ಸಂಬಂಧಿಸಿ ಪೊಲೀಸ್ ಠಾಣೆ ಎದುರು ಉಪವಾಸ ಸತ್ಯಾಗ್ರಹವೂ ನಡೆಯಿತು. ಕೊನೆಗೂ ಪ್ರತಿಭಟನೆಗೆ ಮಣಿದು ರಾಮಯ್ಯ ಸಾವನ್ನು ಅಸಹಜ ಸಾವು ಎಂದು ಪೊಲೀಸರು ದಾಖಲಿಸಿಕೊಂಡು ತನಿಖೆಗೆ ಮುಂದಾದರು. ನಮ್ಮ ತಂಡ ಕೂಡಾ ಈ ಪ್ರಕರಣದ ಕುರಿತಂತೆ ರಾಮಯ್ಯರ ಪೋಷಕರನ್ನು ಮಾತನಾಡಿಸಿದರೂ ಅವರು ಯಾವುದೇ ವಿಷಯವನ್ನು ತಿಳಿಸದ ಕಾರಣ ನಮಗೂ ಪ್ರಕರಣದ ಕುರಿತು ಬಲವಾದ ಸಾಕ್ಷಗಳು ದೊರಕಲಿಲ್ಲ. ಆದರೆ, ಆ ಸಂದರ್ಭ ಅಲ್ಲಿನ ಜನರಾಡುತ್ತಿದ್ದ ಮಾತುಗಳ ಪ್ರಕಾರ ರಾಮಯ್ಯ ಉತ್ತಮ ವಿದ್ಯಾರ್ಥಿಯಾಗಿದ್ದ. ಆಡಳಿತ ಮಂಡಳಿಯವರೊಂದಿಗೆ ನಿಷ್ಠೆಯಿಂದಿದ್ದ. ಅದೊಂದು ದಿನ ಶಿಕ್ಷಕರೆಲ್ಲರೂ ವಿದ್ಯಾರ್ಥಿಗಳಿಂದ ದೂರವಾಗಿದ್ದ ವೇಳೆ ಕೆಲ ಹುಡುಗರು ಮಾಂಸಾಹಾರ ಮತ್ತು ಶರಾಬು ತಂದು ಅದನ್ನು ಸೇವಿಸಲಾರಂಭಿಸಿದರಂತೆ. ಈ ವಿಷಯವನ್ನು ಆಡಳಿತ ಮಂಡಳಿಗೆ ರಾಮಯ್ಯ ತಿಳಿಸಿದ್ದ. ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಅಮಾನತುಗೊಳಿಸಲಾಯಿತು. ಮತ್ತೆ ಕೆಲ ಸಮಯದ ನಂತರ ವಿದ್ಯಾರ್ಥಿಗಳು ಸಂಸ್ಥೆಗೆ ಮರು ಸೇರ್ಪಡೆಗೊಂಡಾಗ ಆ ವಿದ್ಯಾರ್ಥಿಗಳಲ್ಲಿ ಒಬ್ಬಾತ ಹಾಗೂ ರಾಮಯ್ಯ ಜತೆ ವಾಗ್ವಾದ ನಡೆದು ಈ ಬಗ್ಗೆ ವಾರ್ಡನ್‌ರಿಂದ ತನಿಖೆಯೂ ನಡೆಯಿತು. ಈ ಸಂದರ್ಭ ರಾಮಯ್ಯ ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆಯುತ್ತಾನೆ. ಈ ವಿಚಾರಣೆಯಲ್ಲಿ ಭಾಗವಹಿಸಿದ್ದ ವಾರ್ಡನ್ ಹಾಗೂ ಇತರರು ಸೇರಿ ಮೃತದೇಹವನ್ನು ಸೀಮೆಎಣ್ಣೆ ಹಾಕಿ ಸುಟ್ಟುಹಾಕುತ್ತಾರೆ. ಒಂದು ವೇಳೆ ಆತ ಆತ್ಮಹತ್ಯೆಮಾಡಿಕೊಂಡಿದ್ದರೆ, ಈ ಬಗ್ಗೆ ಪತ್ರವಾಗಲೀ, ಬಲವಾದ ಸಾಕ್ಷವಾಗಲಿ ಯಾವುದೂ ಲಭ್ಯವಿರಲಿಲ್ಲ. ಆದರೆ ಸಂಸ್ಥೆಯು ದೇವಮಾನವನ ಪ್ರಭಾವದಿಂದಾಗಿ ಅವೆಲ್ಲವನ್ನೂ ಮರೆಮಾಚಿತ್ತು. ಜನರ ಇನ್ನೊಂದು ಆರೋಪದ ಪ್ರಕಾರ, ಸಂಸ್ಥೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ರಾಮಯ್ಯ ತಿಳಿದಿದ್ದ. ಸಾಕ್ಷ ನಾಶ ಮಾಡುವ ಉದ್ದೇಶದಿಂದ ರಾಮಯ್ಯ ಕೊಲೆ ನಡೆದಿತ್ತು ಎಂಬುವುದು ಜನರ ಬಲವಾದ ಆರೋಪ, ಹೇಳಿಕೆಗಳನ್ನು ಆಧರಿಸಿ ರಾಜ್ಯ ಸರಕಾರ ಪೊಲೀಸ್ ಡಿಟೆಕ್ಟಿವ್‌ಗಳ ಮೂಲಕ ತನಿಖೆಗೂ ಆದೇಶಿಸಿತ್ತು. ಆದರೆ, ಸಂಸ್ಥೆಯ ಪ್ರಬಲ ಪ್ರಭಾವದಿಂದಾಗಿ ತನಿಖೆ ಹಳ್ಳ ಹಿಡಿಯಿತು.

ಮುಂದುವರಿಯುವುದು

ನಿರೂಪಣೆ: ಸತ್ಯಾ ಕೆ.

Writer - ನರೇಂದ್ರ ನಾಯಕ್

contributor

Editor - ನರೇಂದ್ರ ನಾಯಕ್

contributor

Similar News