×
Ad

ನೂತನ ಪಿಂಚಣಿ ಯೋಜನೆ ರದ್ದತಿಗೆ ಮಾಲಗತ್ತಿ ಆಗ್ರಹ

Update: 2017-07-23 18:29 IST

ಬೆಂಗಳೂರು, ಜು. 22 : ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಪಿಂಚಣಿ ಹಣವನ್ನು ಷೇರು ಮತ್ತು ಕಾರ್ಪೋರೇಟ್ ವಲಯದಲ್ಲಿ ಹೂಡಲು ರೂಪಿಸಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ ಒತ್ತಾಯಿಸಿದ್ದಾರೆ.

 ರವಿವಾರ ನಗರದ ಗಾಂಧಿ ಭವನದಲ್ಲಿ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಆಯೋಜಿಸಿದ್ದ ನೂತನ ಪಿಂಚಣಿ ಯೋಜನೆಯ ವಿಫಲತೆ ಕುರಿತ -ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಿಂಚಣಿ ಹಣವನ್ನು ಕಾನೂನ್ಮಾಕವಾಗಿ ಷೇರು ಮಾರುಕಟ್ಟೆಯಲ್ಲಿ ಜೂಜಾಡಲು ನೌಕರರನ್ನು ಸರಕಾರ ಬಲವಂತವಾಗಿ ತಳ್ಳುತ್ತಿದೆ.ರೈತರು ನಿಸರ್ಗದೊಂದಿಗೆ ಜೂಜಾಡಿ ಆತ್ಮಹತ್ಯೆಗೆ ಶರಣಾಗುವ ರೀತಿಯಲ್ಲೆ ಮುಂದೆ ಒಂದು ದಿನ ಸರಕಾರಿ ನೌಕರರು ಸರಣಿ ಆತ್ಮಹತ್ಯೆ ಆರಂಭವಾದರೂ ಅಚ್ಚರಿ ಪಡಬೇಕಿಲ್ಲ ಎಂದು ಭೀತಿ ವ್ಯಕ್ತಪಡಿಸಿದರು.

ಪಿಂಚಣಿ ಎಂಬುವುದು ನಿವೃತ್ತಿ ಜೀವನದ ಊರುಗೋಲು.ಆದರೆ ನೀತನ ಪಿಂಚಣಿ ಯೋಜನೆಯ ಮೂಲಕ ಈ ಊರುಗೋಲನ್ನು ಕೇಂದ್ರ ಸರಕಾರ ಮುರಿಯಲು ಯತ್ನಿಸುತ್ತಿದೆ. ಈ ಯೋಜನೆಯಿಂದ ಪಿಂಚಣಿದಾರರ ಸ್ಥಿತಿ ಕಾಸಾಯಿಖಾನೆ ಮುಂದೆ ನಿಂತ್ತಿರುವ ಹಸುವಿನಂತ್ತಿದೆ ಎಂದರು.
 ಸರಕಾರ ಮಾತೃತ್ವದ ಹೃದಯ ಹೊಂದಿರಬೇಕೆ ವಿನಃ ಮಾರ್ವಾಡಿಗಳ ಹೃದಯ ಹೊಂದಿರಬಾರದು. ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲು ತೋರಿಸುತ್ತಿರುವ ಆಸಕ್ತಿಯನ್ನು ಸರಕಾರಿ ನೌಕರರ ಪಿಂಚಣಿ ಯೋಜನೆಗೆ ತೋರಿಸಲಿ ಎಂದು ಆಗ್ರಹಿಸಿದರು.

ನೂತನ ಪಿಂಚಣಿ ಯೋಜನೆಯಿಂದ ಜೀವನಾಂಶಕ್ಕೆ ಅಗತ್ಯವಿರುವ ಆದಾಯ ಸಿಗದೆ ಪಿಂಚಣಿದಾರರು ಅತಂತ್ರ, ಒತ್ತಡಕ್ಕೆ ಸಿಲುಕಲಿದ್ದಾರೆ.ಈ ಯೋಜನೆ ಕುಟುಂಬವನ್ನು ಹೊಡೆಯಲಿದೆ.ಪ್ರತಿ ಗ್ರಾಮಕ್ಕೊಂದು ವೃದ್ಧಾಶ್ರಮಗಳನ್ನು ತೆರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದನ್ನು ಅರಿತು ಕೂಡಲೆ ಕೇಂದ್ರ ಸರಕಾರ ಈ ಯೋಜನೆಯನ್ನು ಹಿಂತೆಗೆದುಕೊಂಡು ಸರಕಾರಿ ನೌಕರರ ಹಿತದೃಷ್ಟಿಯಿಂದ 5 ಮತ್ತು 7ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಚಾಚು ತಪ್ಪದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ ಮಾತನಾಡಿ, ಸರಕಾರಿ ನೌಕರರು ಬಿಕ್ಷುಕರಾಗಿ ಬಂದಿಲ್ಲ. ಪಿಂಚಣಿ ಎಂಬುವುದು ಅವರ ಮೂಲಭೂತ ಹಕ್ಕೇ ಹೊರತು ಬೇಡಿಕೆ ಅಲ್ಲ. ಒಂದೇ ಸಂಸ್ಥೆಯಲ್ಲಿ ತಾರತಮ್ಯವಿರುವ ಎರಡು ರೀತಿಯ ಪಿಂಚಣಿ ಯೋಜನೆ ತರವಲ್ಲ. ಸರಕಾರದ ಎಲ್ಲ ನೌಕರರಿಗೆ ವೌಲ್ಯಯುತ ನಿರ್ದಿಷ್ಟ ಪಿಂಚಣಿ ನೀಡಲು ಮೀನಾಮೇಷ ಬೇಡ ಎಂದರು.

ಏಕರೂಪ ವೇತನ-ಪಿಂಚಣಿ ಜಾರಿಗೆ ತನ್ನಿ:  ದೇಶದಲ್ಲಿ ಒಂದೇ ರೀತಿ ತೆರಿಗೆ ಜಿಎಸ್ಟಿ ರೀತಿಯಲ್ಲಿ ಸರಕಾರಿ ನೌಕರರಿಗೆ ಏಕರೂಪ ವೇತನ ಮತ್ತ ಪಿಂಚಣಿಯನ್ನು ಕೇಂದ್ರ ಸರಕಾರ ಜಾರಿಗೆ ತರಲಿ ಎಂದು ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ಸವಾಲು ಹಾಕಿದರು.

ನೂತನ ಪಿಂಚಣಿ ಯೋಜನೆಯಲ್ಲಿನ ತಾರತಮ್ಯವನ್ನು ನೀಗಿಸಲು ಸರಕಾರದ ಮೇಲೆ ಒತ್ತಡ ತರಲು 10 ಸಾವಿರ ನೌಕರರಿಂದ ನವೆಂಬರ್ ತಿಂಗಳಲ್ಲಿ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಆಷ್ಟರೊಳಗೆ ನೌಕರರೊಂದಿಗೆ ಸಭೆ ಕರೆದು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

 ಕಾರ್ಯಕ್ರಮದಲ್ಲಿ ರಾಜ್ಯ ಸರಕಾರ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ, ತೆಲಂಗಾಣ ಪಿಂಚಣಿ ಯೋಜನೆ ನೌಕರರ ಸಂಘದ ಅಧ್ಯಕ್ಷ ಸ್ಥಿತ ಪ್ರಜ್ಞಾ, ಆಂಧ್ರ ಪ್ರದೇಶ ನೌಕರರ ಸಂಘಟನೆಯ ರಾಮಾಂಜನೆಯಲು, ಉತ್ತರ ಪ್ರದೇಶದ ಶಿಕ್ಷಕರ ಮತ್ತು ನೌಕರರ ಕಲ್ಯಾಣ ಸಂಘಟನೆಯ ಅಧ್ಯಕ್ಷ ವಿಜಯ್ ಕುಮಾರ್ ಬಂಧು ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News