ಪರಭಾಷಿಕರಿಗೆ ಪ್ರೀತಿಯಿಂದ ಕನ್ನಡ ಕಲಿಸಿ: ಮಾಯಣ್ಣ
ಬೆಂಗಳೂರು, ಜು.23: ಪರಭಾಷಿಕರನ್ನು ಪ್ರೀತಿಯಿಂದ ಬರ ಮಾಡಿಕೊಂಡು ಅವರಿಗೆ ಕನ್ನಡ ಕಲಿಸುವುದರ ಮೂಲಕ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಗೀತಗಾಯನ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡಿಗೆ ವಲಸೆ ಬರುವ ಎಲ್ಲರೂ ನಮ್ಮವರೇ. ಹೀಗಾಗಿ ಅವರನ್ನು ದ್ವೇಷಿಸುವ ಬದಲಿಗೆ ನಮ್ಮೊಂದಿಗೆ ಬೆರೆಸಿಕೊಳ್ಳುವ ಮೂಲಕ ಕನ್ನಡ ಕಲಿಸುವ ಕೆಲಸ ಮಾಡೋಣ ಎಂದು ಸಲಹೆ ನೀಡಿದರು. ನಾಡು-ನುಡಿ ಬೆಳೆಸುವ ಸಲುವಾಗಿ ನಾನು ನಿರಂತರವಾಗಿ ದುಡಿಯುತ್ತಿದ್ದೇನೆ. ಇದನ್ನು ಸಹಿಸದ ಹಲವರು ಕಾಲು ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಕನ್ನಡವನ್ನು ಉಳಿಸಲು ಕೆಲಸ ಮಾಡಬೇಕಾದವರು ಈ ರೀತಿಯ ಕೆಲಸ ಮಾಡುತ್ತಿರುವಾಗ ಕನ್ನಡಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂಬ ಉತ್ಸಾಹ ಹೆಚ್ಚಾಗಿದೆ ಎಂದರು.
ಕನ್ನಡ ಕೆಲಸ ಮಾಡುವುದಕ್ಕಾಗಿ ಸಮ್ಮೇಳನ, ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡುವುದು ಸರಿಯಷ್ಟೇ. ಆದರೆ, ಇದೇ ವೇಳೆ ನಾಡಿನಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಕ್ರೀಯಾಶೀಲರನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಮೂಲಕ ಕನ್ನಡ ಉಳಿಸಿ-ಬೆಳೆಸಲು ಸಹಕಾರಿಯಾಗಬೇಕು ಎಂದು ಅವರು ತಿಳಿಸಿದರು. ಕನ್ನಡ ಭಾಷೆ ಉಳಿಸುವುದು ಒಬ್ಬರಿಂದ ಮಾಡುವ ಕೆಲಸವಲ್ಲ. ಅದಕ್ಕಾಗಿ ನಗರದಾದ್ಯಂತ ಎಲ್ಲ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಕೆಲಸ ಮಾಡುವವರನ್ನು ಗುರುತಿಸಲಾಗುತ್ತದೆ. ಅವರನ್ನು ಪ್ರತಿ ಹಂತದಲ್ಲಿಯೂ ಹುರಿದುಂಬಿಸುವ ಕೆಲಸ ಮಾಡಲಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕನ್ನಡದ ಬಗ್ಗೆ ಪ್ರೀತಿ ತೋರಿಸುವ ಚಿಂದಿ ಆಯುವವರಿಂದ ಹಿಡಿದು, ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಗುರುತಿಸಿ ಸನ್ಮಾನದ ಮೂಲಕ ಪ್ರೋತ್ಸಾಹಿಸಲಾಗುತ್ತದೆ ಎಂದು ನುಡಿದರು.
ಕೆಂಪೇಗೌಡ ಜಾತ್ಯತೀತ ವ್ಯಕ್ತಿ: ಬೆಂಗಳೂರು ನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗುವಂತಹ ವ್ಯಕ್ತಿಯಲ್ಲ. ಅವರು ಸರ್ವ ಜಾತಿ, ಧರ್ಮಗಳಿಗೆ ಅನುಕೂಲಕ್ಕಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದು, ಪ್ರತಿಯೊಬ್ಬರೂ ಕೆಂಪೇಗೌಡರನ್ನು ಅರಿಯಬೇಕು ಎಂದು ಮಾಯಣ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಮಹದೇವಪುರ ಕಸಾಪ ಅಧ್ಯಕ್ಷ ಡಾ. ಅಜಿತ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.
ಬಿ.ಜಿ.ಜಗದೀಶ್-ತಾರಕೇಶ್ವರಿ, ಜಿ.ಎಸ್.ಉದಯಕುಮಾರ್- ಚೈತ್ರ, ಪಿ.ಮೋಹನ್-ಕೆ.ಪುಷ್ಪಲತ ದಂಪತಿಗಳಿಗೆ ‘ಆದರ್ಶ ದಂಪತಿ ಪ್ರಶಸ್ತಿ’, ಪದ್ಮಾವತಿ ಚಂದ್ರು, ಜಯಶಂಕರ್ ಪ್ರಕಾಶ್, ಬಿ.ಶಾಂತಕುಮಾರ್, ಎಂ.ಶಿವಸ್ವಾಮಿಗೆ ‘ಆದರ್ಶ ಕನ್ನಡಿಗ ಹಾಗೂ ಕನ್ನಡತಿ ಪ್ರಶಸ್ತಿ’, ಪ್ರಕಾಶ್ ಎಸ್ ಶಿಲ್ಪಿ ಗೆ ‘ಯುವಕಾವ್ಯ ಪ್ರತಿಭಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.