ರಸ್ತೆ ಕಾರ್ಮಿಕರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ
ಬೆಂಗಳೂರು, ಜು.23: ಅಸಂಘಟಿತ ರಸ್ತೆ ಕಾರ್ಮಿಕರ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಹಾಗೂ ವಾಸಿಸಲು ನಗರದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಸರಕಾರವನ್ನು ಒತ್ತಾಯಿಸಿದೆ.
ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ 8ನೇ ವರ್ಷದ ಅದ್ದೂರಿ ‘ಚಾಲಕರ ದಿನಾಚರಣೆ’ ಮತ್ತು ಸಾರಥಿ ನಂ.1ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, ನಗರದಲ್ಲಿ ಹಲವಾರು ವಾಹನ ಚಾಲಕರು ಸ್ವಂತ ಮನೆಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ಕಷ್ಟದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಚಾಲಕರಿಗೆ ಮನೆಗಳು ನೀಡಬೇಕೆಂದು ಅಭಿಪ್ರಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಅಶ್ವತ್ ನಾರಾಯಣ, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅಸಂಘಟಿತ ರಸ್ತೆಕಾರ್ಮಿಕರಿಗೆ ನಗರದಲ್ಲಿ 5ಲಕ್ಷ ಮನೆ ನಿರ್ಮಿಸಿಕೊಡಲಾಗುವುದು ಭರವಸೆ ನೀಡಿದರು. ಚಾಲಕರು ದುಡಿದ ಹಣ ಜೀವನ ನಿರ್ವಹಣೆಗೆ ಮಾತ್ರ ಸಾಕಾಗುತ್ತದೆ. ಸ್ವಂತ ಸೂರು ಹೊಂದಬೇಕೆಂಬ ಕನಸು ಹಾಗೆಯೇ ಉಳಿಯುತ್ತದೆ. ಅಷ್ಟಕ್ಕೂ ನಗರದಲ್ಲಿ ಹೇರಳವಾಗಿ ಸರಕಾರಿ ಜಾಗವಿದೆ. ಇದರಲ್ಲಿ 3ರಿಂದ 4ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು 5ಲಕ್ಷ ಮನೆ ನಿರ್ಮಿಸಲು ಸಾಧ್ಯ. ಇದರಲ್ಲಿ ಕೂಡಲೇ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ತಿಳಿಸಿದರು.
ಸರಕಾರಿ ಚಾಲಕನಿಗೆ ಸ್ವರ್ಣ ಪದಕ: ಅಪಘಾತ ರಹಿತ ಚಾಲನೆ ಹಾಗೂ ಪ್ರಾಮಾಣಿಕತೆಯನ್ನು ಮೆರೆದ ಒಟ್ಟು 62 ಚಾಲಕರಿಗೆ ‘ಸಾರಥಿ ನಂ.1 ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಯಚೂರು ಮೂಲದ ಕೆಎಸ್ಸಾರ್ಟಿಸಿ ಬಸ್ ಚಾಲಕ ಮಂಜುನಾಥ್ ಅವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಲ್ಲಿ ಶೇ.55ರಷ್ಟು ಚಾಲಕರು ಸರ್ಕಾರಿ ನೌಕರರು ಎನ್ನುವುದು ಇಲ್ಲಿನ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಲಯನ್ ಎಂ. ಮಂಜುನಾಥ್, ಉದ್ಯಮಿ ಉದಯ್ ಜಿ. ಶೆಟ್ಟಿ, ವಾಹನ ಚಾಲಕರ ಸಂಘದ ನಾರಾಯಣಸ್ವಾಮಿ ಮತ್ತಿತರಿದ್ದರು.