ಬೆಂಕಿ ಹಚ್ಚುವವರಿಗೆ ತಕ್ಕ ಪಾಠ: ಸಿದ್ದರಾಮಯ್ಯ
ಬೆಂಗಳೂರು, ಜು.23: ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೋಮುವಾದಿ ಶಕ್ತಿಗಳು ಎಷ್ಟೇ ಪ್ರಭಾವಶಾಲಿ ಯಾಗಿದ್ದರೂ ಯಾವುದೇ ಮುಲಾಜಿಲ್ಲದೆ ಮಟ್ಟಹಾಕಲಾಗುವುದು. ಬೆಂಕಿ ಹಚ್ಚುವವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಸಿದ್ದಾರೆ.
ರವಿವಾರ ನಗರದ ಜಿಕೆವಿಕೆ ಆವರಣದಲ್ಲಿ ರಾಜ್ಯ ಸರಕಾರದ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ, ಸಹೋದರತೆ ನೆಲೆಸಬೇಕು. ಸರಕಾರಿ ವ್ಯವಸ್ಥೆಯಲ್ಲಿ ಹಿಂದುತ್ವದ ಪರವಾಗಿರುವವರು ಇದ್ದಾರೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ ಪ್ರಿಯರು. ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಉಳ್ಳಾಲದಿಂದ ಉಡುಪಿ ವರೆಗೆ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ನಡಿಗೆ-ಸಾಮರಸ್ಯದ ಕಡೆಗೆ’ ಪಾದಯಾತ್ರೆಗೆ ಅಭೂತ ಪೂರ್ವ ಯಶಸ್ಸು ಸಿಕ್ಕಿತು. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನು ನಾವು ಗೆದ್ದಿದ್ದೇವೆ. ಅದರಲ್ಲಿ ಇಬ್ಬರು ಮುಸ್ಲಿಮರು, ಒಬ್ಬರು ಕ್ರೈಸ್ತರು, ಒಬ್ಬರು ಜೈನರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಆದರೆ, ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತವೆ. ಮೀನುಗಾರರು, ಬಿಲ್ಲವರನ್ನು ಈ ಕೆಲಸಕ್ಕೆ ಬಳಸಿಕೊಂಡು, ಜೈಲಿಗೆ ಕಳುಹಿಸುತ್ತಾರೆ. ಅವರು ಹಿಂದಿರುಗುವಾಗ ಹಾರ ಹಾಕಿ ಅವರನ್ನು ಹೀರೋಗಳನ್ನಾಗಿ ಮಾಡುತ್ತಾರೆ. ಗಲಭೆಗಳು ನಡೆದಾಗ ಪ್ರಾಣ ಕಳೆದುಕೊಳ್ಳುವವರು ಅವರೇ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕೋಮುವಾದಿಗಳು ಕಾಂಗ್ರೆಸ್‌ನಲ್ಲಿ ಇರಲು ಸಾಧ್ಯವಿಲ್ಲ. ಜಾತ್ಯತೀತ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಸಾಮಾಜಿಕ-ಆರ್ಥಿಕ ಅಸಮಾನತೆಯೇ ಜಾತಿ ವ್ಯವಸ್ಥೆ ಜೀವಂತವಾಗಿರಲು ಮೂಲ ಕಾರಣ. ಬಹುಸಂಖ್ಯಾತ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಜಾತಿ ವ್ಯವಸ್ಥೆ ಕೇವಲ ಬಾಯಿಮಾತಿನಿಂದ ನಿರ್ಮೂಲನೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸಂವಾದದಲ್ಲಿ ಚಿಂತಕ ಪ್ರೊ.ರಾಜೇಂದ್ರ ಚನ್ನಿ, ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ಪ್ರೊ.ರಾಡ್ರಿಕ್ಸ್, ಹಿರಿಯ ಪತ್ರಕರ್ತ ಉಮಾಪತಿ, ಪ್ರೊ.ಜಾಫೆಟ್, ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಎಚ್.ಆಂಜನೇಯ ಉಪಸ್ಥಿತರಿದ್ದರು.
‘ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಪ್ರಸ್ತುತ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬೆಳಕಿಗೆ ಬರುತ್ತಿರುವ ಘಟನೆಗಳು ನನ್ನ ಗಮನಕ್ಕೆ ಬಂದಿದ್ದು ದೇವದಾಸಿ ನಿರ್ಮೂಲನೆಗಾಗಿ ಮತ್ತಷ್ಟು ಕಠಿಣ ಕಾನೂನು ಮತ್ತು ಯೋಜನೆಗಳನ್ನು ರೂಪಿಸಲು ಸರಕಾರ ಚಿಂತನೆ ನಡೆಸಿದೆ. ದೇವದಾಸಿ ಮಹಿಳೆಯರ ಆರ್ಥಿಕ ಸದೃಢತೆಗೆ ಕೃಷಿ ಭೂಮಿ ಹಂಚಿಕೆಗೆ ಪರಿಶೀಲಿಸಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ
ಮಾತೃಭಾಷೆಯಲ್ಲಿ ಶಿಕ್ಷಣ: ಮಾತೃಭಾಷೆಯಲ್ಲಿ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಉದ್ದೇಶ. ಆದರೆ ಸುಪ್ರೀಂ ಕೋರ್ಟ್ ಮಕ್ಕಳ ಶಿಕ್ಷಣದ ಮಾಧ್ಯಮವನ್ನು ಪೋಷಕರು ನಿರ್ಧರಿಸಬೇಕು ಎಂದು ಆದೇಶಿಸಿದೆ. ಈ ವಿಚಾರದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದ ಅಗತ್ಯವಿದೆ. ಆದುದರಿಂದ, ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿಗೆ ಪತ್ರ ಬರೆದೆ. ಎಲ್ಲಾ ಮುಖ್ಯಮಂತ್ರಿಗಳಿಗೂ ಪತ್ರ ಬರೆದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಡೆದ ದಲಿತ, ರೈತ ಸೇರಿದಂತೆ ಎಲ್ಲ ಹೋರಾಟಗಳಿಗೆ ಅಂಬೇಡ್ಕರ್ ಸ್ಫೂರ್ತಿ. ಅಹಿಂದ ಚಳವಳಿ ರಾಜಕೀಯ ಉದ್ದೇಶಕ್ಕೆ ಆರಂಭಿಸಿಲ್ಲ. ಈ ವರ್ಗಗಳಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದ್ದು. ಕೋಲಾರದಲ್ಲಿ 2004-5ರಲ್ಲಿ ಕೋಲಾರದಲ್ಲಿ ನಾನು, ಜಾಲಪ್ಪ ಹಾಗೂ ದ್ವಾರಕನಾಥ್ ಇದನ್ನು ಆರಂಭಿಸಿದ್ದು ಎಂದು ಮುಖ್ಯಮಂತ್ರಿ ತಿಳಿಸಿದರು.
ನನ್ನನ್ನು ಅಹಿಂದ ಮುಖ್ಯಮಂತ್ರಿ, ನನ್ನ ಬಜೆಟ್‌ಗಳನ್ನು ಅಹಿಂದ ಬಜೆಟ್ ಎಂದು ಟೀಕಿಸುವವರಿದ್ದಾರೆ. ಅವರ ಟೀಕೆಯನ್ನು ನಾನು ಗೌರವ ಎಂದು ಸ್ವೀಕರಿಸುತ್ತೇನೆ. ಅಹಿಂದ ಜೊತೆಗೆ ರೈತರು, ಮಹಿಳೆಯರು, ಕಾರ್ಮಿಕರು, ಯುವಕರಿಗೆ ನೀಡಿರುವ ಕಾರ್ಯಕ್ರಮಗಳು, ಯೋಜನೆಗಳು ಎಲ್ಲರನ್ನೂ ಒಳಗೊಂಡಿವೆ ಎಂದು ಸಿದ್ದರಾಮಯ್ಯ ಹೇಳಿದರು.