ದುರ್ಬಲರ ಪರವಾಗಿ ಸಾಮಾಜಿಕ-ಆರ್ಥಿಕ ಕಾಯ್ದೆಗಳು ಬಲಗೊಳ್ಳಲಿ: ಜೈರಾಂ ರಮೇಶ್
ಬೆಂಗಳೂರು, ಜು.23: ದುರ್ಬಲರ ಸಬಲೀಕರಣಕ್ಕೆ ಸಾಮಾಜಿಕ ಮತ್ತು ಆರ್ಥಿಕ ಕಾಯ್ದೆಗಳನ್ನು ಬಲಗೊಳಿಸುವುದು ಅಗತ್ಯವಾಗಿದೆ ಎಂದು ಸಂಸದ, ಮಾಜಿ ಸಚಿವ ಜೈರಾಂ ರಮೇಶ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಜಿಕೆವಿಕೆಯಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶಿಕ್ಷಣ, ಆಹಾರ ಭದ್ರತೆಗೆ ಒತ್ತು ಕೊಟ್ಟು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸಾಮಾಜಿಕ, ಆರ್ಥಿಕ ಕಾಯಿದೆಗಳನ್ನು ಜಾರಿಗೊಳಿಸಬೇಕಾಗಿದೆ ಎಂದು ತಿಳಿಸಿದರು.
60-70ರ ದಶಕಗಳಲ್ಲಿ ಹೆಚ್‌ಎಂಟಿ, ಡಿಆರ್‌ಡಿಓ, ಬಿಇಎಲ್, ಎಚ್‌ಎಎಲ್, ಸಾರ್ವಜನಿಕ ವಲಯಗಳ ಪ್ರಭಾವ ಹೆಚ್ಚಿತ್ತು. ಆದರೆ 25 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಖಾಸಗಿ ವಲಯಗಳ ಪ್ರಭಾವ ಆರ್ಥಿಕತೆಯ ಮೇಲೆ ಹೆಚ್ಚಿದೆ. ಹೀಗಾಗಿ ಸಾಮಾಜಿಕ ಕಾಯ್ದೆಗಳು ದುರ್ಬಲ ವರ್ಗದವರ ಪರವಾಗಿ ರೂಪಿತಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವುದಕ್ಕೆ ತಮ್ಮ ಅಧಿಕಾರವನ್ನು ವಿನಿಯೋಗಿಸುತ್ತಿದ್ದಾರೆ. ಆಧಾರ್ ಮಸೂದೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಿದ್ದಾರೆ. ಆ ಮೂಲಕ ಸಂವಿಧಾನದ ಆಶಯಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸಂವಿಧಾನ ರಚನೆ ಮಾಡಿದ ಸಂದರ್ಭ ಹಾಗೂ ಹಿಂದೂ ಕಾನೂನುಗಳಿಗೆ ಸುಧಾರಣೆ ತಂದಾಗ ಅಂಬೇಡ್ಕರ್‌ರನ್ನು ತೀವ್ರವಾಗಿ ವಿರೋಧಿಸಿದ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಇಂದು ಅವರ ತತ್ವಸಿದ್ಧಾಂತಗಳನ್ನು ತಿರುಚುವಂತಹ ಕೆಲಸಕ್ಕೆ ಮುಂದಾಗಿದೆ. ಅದಕ್ಕಾಗಿಯೇ ಅಂಬೇಡ್ಕರ್ ಕುರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತ ರತ್ನ ಪ್ರಶಸ್ತಿಯು ದುರ್ಬಲಕೆ ಆಗುತ್ತಿದ್ದು, ನಾನೇನಾದರು ಪ್ರಧಾನಮಂತ್ರಿ ಆದರೆ ಭಾರತರತ್ನ ಸೇರಿದಂತೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ರದ್ದುಪಡಿಸುತ್ತೇನೆ. ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಸರ್ವಪಲ್ಲಿ ರಾಧಾಕಷ್ಣನ್, ಸರ್.ಎಂ. ವಿಶ್ವೇಶ್ವರಯ್ಯ ತಮ್ಮ ಸಾಧನೆಗಳ ಮುಖಾಂತರ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು, ಭಾರತ ರತ್ನ ಪ್ರಶಸ್ತಿಗಿಂತ ನಿಜವಾದ ರತ್ನಗಳಾಗಿದ್ದಾರೆ. ಇತ್ತೀಚೆಗೆ ನೀಡುತ್ತಿರುವ ಭಾರತ ರತ್ನ ಮತ್ತು ಇತರೆ ಪ್ರಶಸ್ತಿಗಳನ್ನು ಯಾವುದೇ ಒಬ್ಬ ವ್ಯಕ್ತಿಗೆ ನೀಡಿದರೆ ಅದರಿಂದ ಅವರ ಬೆಂಬಲಿಗರು ಮತ್ತು ಅನುಯಾಯಿಗಳು ಅಷ್ಟೇ ಸಂತಸ ಪಡುವಂತಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.