ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ಅಗತ್ಯ: ಅಮೀನ್ ಮಟ್ಟು

Update: 2017-07-23 17:31 GMT

 ಬೆಂಗಳೂರು, ಜು. 23: ಖಾಸಗಿ ಕ್ಷೇತ್ರದಲ್ಲಿ ಮೀಸ ಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ತಿಳಿಸಿದ್ದಾರೆ.

  ರವಿವಾರ ನಗರದ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ‘ಅಂಬೇಡ್ಕರ್‌ರವರ ಸಾಮಾಜಿಕ ನ್ಯಾಯ ಹಾಗೂ ಕರ್ನಾಟಕದ ಸಾಮಾಜಿಕ ಚಳವಳಿ’ ಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ವಲಯದಲ್ಲಿ ಶೇ.2.5ರಷ್ಟು ಮಾತ್ರವೇ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಈಗ ಅದನ್ನು ಖಾಸಗಿ ಮಯಗೊಳಸಲಾಗುತ್ತಿದೆ. ಹೀಗಾಗಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗಾಗಿ ದೊಡ್ಡ ಮಟ್ಟದ ಅಂದೋಲನ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಜಾತಿಯ ಶೋಷಣೆ ಬದಲಾದ ಕಾಲಘಟ್ಟದಲ್ಲಿ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಬಸ್‌ನಲ್ಲಿ ಎಲ್ಲರೂ ಒಟ್ಟಿಗೆ ಸಾಗುವುದು, ಹೋಟೆಲ್‌ನಲ್ಲಿ ಪಕ್ಕದಲ್ಲಿಯೇ ಕುಳಿತು ಊಟ ಮಾಡುವುದರಿಂದ ಜಾತಿ ಎಲ್ಲಿದೆ ಎಂದು ಪ್ರಶ್ನಿಸುವವರಿದ್ದಾರೆ. ಆದರೆ, ಉದ್ಯೋಗ ನೀಡುವಿಕೆಯಲ್ಲಿ ಜಾತಿ ಶೋಷಣೆ ಜೀವಂತವಾಗಿದೆ ಎಂದು ಅವರು ಹೇಳಿದರು.

ದಲಿತ ಸಮುದಾಯ ಎಷ್ಟೇ ಪ್ರತಿಭಾವಂತನಾಗಿದ್ದರೂ ಜಾತಿಯ ಕಾರಣಕ್ಕೆ ನಿರುದ್ಯೋಗಿಯಾಗುವಂತಾಗಿದೆ. ವಿದೇಶಿ ಕಂಪೆನಿಗಳಲ್ಲಿ ವ್ಯಕ್ತಿಯ ಹೆಸರಿನ ಆಧಾರದಲ್ಲಿ ಜಾತಿಯನ್ನು ಗುರುತಿಸಿ ಉದ್ಯೋಗ ನೀಡಲಾಗುತ್ತಿದೆ. ಹೀಗಾಗಿ ಜಾತಿ ಶೋಷಣೆ ಎನ್ನುವುದು ಅಗೋಚರವಾಗಿ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News