ಸರಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಯಿಂದ ಕೋಮುದ್ವೇಷ: ದಿನೇಶ್ ಗುಂಡೂರಾವ್ ಆರೋಪ
ಬೆಂಗಳೂರು, ಜು. 24: ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದು, ಅದರ ಭಾಗವಾಗಿ ಕೋಮುವಾದದ ವಿಷಬೀಜ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಆರೋಪಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದು, ಸಚಿವರ ಮೇಲೆ ಐಟಿ ದಾಳಿ, ಜೈಲಿಗೆ ಹೋಗುತ್ತಾರೆ ಅಂತ ಹೇಳುತ್ತಿದ್ದರು. ಆದರೆ, ಅದು ನಡೆಯಲಿಲ್ಲ. ಆದರೆ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋಮುಗಲಭೆ ಮುಂದಿಟ್ಟುಕೊಂಡು ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದರೂ, ಅದು ಸಾಧ್ಯವಾಗಲಿಲ್ಲ. ಜನ ಸಾಮಾನ್ಯರಿಗೆ ಬಿಜೆಪಿ ಸಂಚು ಏನೆಂದು ಗೊತ್ತಾಗಿದೆ. ಹೀಗಾಗಿ ಶೋಭಾ ಕರಂದ್ಲಾಜೆ, ರಾಜನಾಥ್ ಸಿಂಗ್‌ಗೆ ಪತ್ರ ಬರೆದು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆಂದು ಟೀಕಿಸಿದರು.
ರಾಜ್ಯದಲ್ಲಿ ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಜಿಹಾದಿ ಸಂಸ್ಕೃತಿ ತರಲಾಗುತ್ತಿದೆ ಎಂದು ಆರೋಪಿಸುತ್ತಿದ್ದ ಶೋಭಾ ಕರಂದ್ಲಾಜೆ, ಇದೀಗ ಜೀವಂತ ವ್ಯಕ್ತಿಯನ್ನು ಮೃತಪಟ್ಟಿದ್ದಾರೆಂದು ರಾಜನಾಥ್ ಸಿಂಗ್‌ಗೆ ಬರೆದ ಪತ್ರದಲ್ಲಿ ಸೇರಿದ್ದಾರೆ. ಕೋಮು ಗಲಭೆಯಲ್ಲಿ ಕೇವಲ ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಪಟ್ಟಿ ನೀಡಿದ್ದಾರೆ. ಆದರೆ, ಅಲ್ಲಿ ಅಲ್ಪಸಂಖ್ಯಾತರ ಹೆಸರು ಪ್ರಸ್ತಾಪಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡದಲ್ಲಿ ರಾಷ್ಟ್ರೀಯ ತನಿಖೆ ದಳ(ಎನ್‌ಐಎ) ಕೇಂದ್ರ ಪ್ರಾರಂಭಿಸುವ ಅಗತ್ಯವಿಲ್ಲ. ಕೋಮು ಸಂಘರ್ಷದಿಂದ ಪ್ರಕ್ಷುಬ್ಧಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಅಲ್ಲಿನ ಸ್ಥಳೀಯ ಪೊಲೀಸರೇ ಪರಿಸ್ಥಿತಿ ನಿಭಾಯಿಸಲಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.
ನಮ್ಮ ಪಾತ್ರವಿಲ್ಲ: ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತೀಯ ಸಂಬಂಧವಿಲ್ಲ. ಮಾನ್ಯತೆ ಸಂಬಂಧ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ ಎಂದು ದಿನೇಶ್ ಸ್ಪಷ್ಟಣೆ ನೀಡಿದರು.
ಕ್ರಮ ಕೈಗೊಂಡರೆ ಎಲ್ಲ ಸರಿಯಾಗಲಿದೆ
2007ರಿಂದ ಈವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 279 ಹತ್ಯೆಗಳಾಗಿವೆ. ಆ ಪೈಕಿ ಶೇ.70ರಷ್ಟು ಪ್ರಕರಣಗಳು ಪ್ರಸಕ್ತ ವರ್ಷದಲ್ಲಿ ನಡೆದಿದ್ದು, ಅದು ಜಿಲ್ಲೆಯ ಕಲ್ಲಡ್ಕ ವ್ಯಾಪ್ತಿಯಲ್ಲೆ ನಡೆದಿವೆ. ಪ್ರಧಾನಿ ಮೋದಿಯವರು ಮೊದಲು ಶೋಭಾ, ನಳೀನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮ ಕೈಗೊಂಡರೆ ಎಲ್ಲವೂ ಸರಿಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.