ವಿಐಪಿ ಸೌಲಭ್ಯ ನೀಡಿದ್ದು ಪಿಎಸ್ಸೈ ಗಜರಾಜ?
ಬೆಂಗಳೂರು, ಜು.24: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಆರೋಪ ಪ್ರಕರಣ ಸಂಬಂಧ ಜೈಲಿನಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರಿಗೆ ವಿಐಪಿ ವಿಶೇಷ ಸೌಲಭ್ಯ ನೀಡಿದ್ದು ರಾಜ್ಯ ಕೈಗಾರಿಕಾ ಭದ್ರತಾ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಗಜರಾಜ ಮಾಕನೂರು ಎನ್ನುವ ಆರೋಪ ಕೇಳಿಬಂದಿದೆ.
ಸೋಮವಾರ ನೊಂದ ಜೈಲು ಅಧಿಕಾರಿ ಮತ್ತು ಸಿಬ್ಬಂದಿ ಹೆಸರಿನಲ್ಲಿ ಪರಪ್ಪನ ಅಗ್ರಹಾರ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸುವಲ್ಲಿ ಪಿಎಸ್ಸೈ ಗಜರಾಜ ಪಾತ್ರ ಬಹುದೊಡ್ಡದು ಎಂದು ಉಲ್ಲೇಖಿಸಿ ಆಪಾದಿಸಿದ್ದಾರೆ.
ಪತ್ರದಲ್ಲಿ ಏನಿದೆ: ಪಿಎಸ್ಸೈ ಗಜರಾಜ ಮಾಕನೂರು ವಿ.ಕೆ.ಶಶಿಕಲಾ ಅವರಿಗೆ ಜೈಲಿನಲ್ಲಿ ಸಕಲ ವಿಐಪಿ ಸೌಲಭ್ಯಗಳನ್ನು ಒದಗಿಸುವ ಮಧ್ಯವರ್ತಿಯಂತೆ(ಬ್ರೋಕರ್) ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಸರಕಾರ ಜೈಲು ಬಂದೋಬಸ್ತ್‌ಗೆ ಹೊರಗೋಡೆ ಕಾವಲಿಗೆ, ಮುಖ್ಯದ್ವಾರ ಸಂದರ್ಶಕರ ತಪಾಸಣೆಗೆ ನಿಯೋಜನೆ ಮಾಡಿದೆ. ಆದರೆ, ಗಜರಾಜ ಲಂಚ ಪಡೆದು ಶಿಕ್ಷೆಗೆ ಒಳಗಾಗಿರುವ ಕೈದಿಗಳಗೆ ವಿಶೇಷ ಸೌಲಭ್ಯ ನೀಡಿ ಮಹಾರಾಜರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
ಸಂಜೆ 7ಕ್ಕೆ: ವಿ.ಕೆ.ಶಶಿಕಲಾ ಅವರನ್ನು ನೋಡಲು ಬರುತ್ತಿದ್ದ ಟಿಟಿವಿ ದಿನಕರನ್, ಇಳವರಿಸಿ ಪುತ್ರ ವಿವೇಕ್, ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿಗಳು, ತಮಿಳುನಾಡಿನ ಶಾಸಕರನ್ನು ಸಂಜೆ 7 ಗಂಟೆ ನಂತರ ಜೈಲಿನೊಳಗೆ ಪ್ರವೇಶ ಮಾಡಿಕೊಳ್ಳುತ್ತಿದ್ದರು. ಶಶಿಕಲಾ ಸಂಬಂಧಿಗಳು ಗಜರಾಜನೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಹೊಂದಿದ್ದು, ಈತನ ಬಳಿ ಮೂರು ಮೊಬೈಲ್, ನಾಲ್ಕು ಸಿಮ್‌ಕಾರ್ಡ್ ಬಳಸುತ್ತಿದ್ದಾನೆ ಎಂದು ಪತ್ರದಲ್ಲಿ ಹೇಳಲಾಗಿದೆ.
ತಮಿಳುನಾಡು ಹೊಸೂರಿನ ಶಾಸಕ ಮತ್ತು ಮಹಾದೇವ್ ಎಂಬಾತ ಶಶಿಕಲಾ ಅವರಿಗೆ ಬೇಕಾದ ದಿನನಿತ್ಯದ ವಸ್ತುಗಳನ್ನು ಸರಬರಾಜು ಮಾಡುತ್ತಾರೆ. ಆಕೆಯ ಕೊಠಡಿಯಲ್ಲಿ ಟಿವಿ, ದುಬಾರಿ ಬೆಲೆಯ ಮಂಚ, ಎಸಿ ಇಡಲಾಗಿದೆ. ಅದು ಅಲ್ಲದೆ, ಆ್ಯಂಬುಲೆನ್ಸ್ ಮೂಲಕ ಅಡುಗೆ, ವಿವಿಧ ವಸ್ತುಗಳನ್ನು ಸಾಗಾಟ ಮಾಡುತ್ತಾರೆ. ಇದಕ್ಕೆಲ್ಲಾ ಪಿಎಸ್ಸೈ ಗಜರಾಜ ಕಾರಣ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ದಿನಕರನ್ ಮೂಲಕ ಪಿಎಸ್ಸೈ ಗಜರಾಜ ಒಂದು ನಿವೇಶನ, ಎರಡು ಕಾರು ಖರೀದಿ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಮೂರು ಬಾರಿ ತಮಿಳುನಾಡಿನ ಚೆನ್ನೈಗೆ ಹೋಗಿ ಬಂದಿದ್ದಾನೆ. ಹೀಗಾಗಿ, ಈತನ ವಿರುದ್ಧ ತನಿಖೆ ನಡೆಸಬೇಕೆಂದು ನೊಂದ ಜೈಲು ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರಿನ ಪತ್ರದಲ್ಲಿ ಒತ್ತಾಯಿಸಲಾಗಿದೆ.