×
Ad

ಬಿಬಿಎಂಪಿ, ಬಿಡಿಎಗೆ ಹೈಕೋರ್ಟ್ ನೋಟಿಸ್

Update: 2017-07-24 21:15 IST

ಬೆಂಗಳೂರು, ಜು.24: ರಾಜಾಜಿನಗರ 3ನೆ ಬ್ಲಾಕ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಸೇರಿದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ರಾಜಾಜಿನಗರ ನಿವಾಸಿಗಳಾದ ಗೀತಾ ಮಿಶ್ರಾ ಹಾಗೂ ಇತರ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಅರ್ಜಿಯ ಸಂಬಂಧ ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ಬಿಬಿಎಂಪಿ ಅರಣ್ಯಾಧಿಕಾರಿ, ಬಿಡಿಎ ಆಯುಕ್ತರು ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ರಾಜಾಜಿನಗರ 3ನೇ ಬ್ಲಾಕ್‌ನ ಕೆಪಿಟಿಸಿಎಲ್ ಕಚೇರಿ ಬಳಿ ಇರುವ 6.1 ಎಕರೆ ಪ್ರದೇಶ ಬಿಡಿಎಗೆ ಸೇರಿದ್ದು, ಹಲವು ವರ್ಷಗಳಿಂದ ಖಾಲಿ ಇರುವ ಈ ಜಾಗ ಸ್ವಾಭಾವಿಕ ಅರಣ್ಯವಾಗಿ ಮಾರ್ಪಟ್ಟಿದೆ. ಸಾವಿರಾರು ವೃಕ್ಷಗಳಿರುವ ಈ ಜಾಗದಲ್ಲಿ ಇದೀಗ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಮುಂದಾಗಿರುವ ಬಿಬಿಎಂಪಿ ಜೆಸಿಬಿ ಮೂಲಕ ಇಲ್ಲಿರುವ ತಡೆಗೋಡೆಯನ್ನು ತೆರವುಗೊಳಿಸಿ, ಹಲವು ವೃಕ್ಷಗಳನ್ನೂ ಕಡಿದುಹಾಕಿದೆ ಎಂದು ಆರೋಪಿಸಿದರು.

ಬಿಡಿಎಗೆ ಸೇರಿದ್ದ 23.14 ಎಕರೆ ಭೂಮಿಯನ್ನು 1949ರಲ್ಲೇ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರ ಕೆಇಬಿಗೆ ಮಂಜೂರು ಮಾಡಿತ್ತು. ಈ ಪೈಕಿ 6.1 ಎಕರೆ ಹೆಚ್ಚುವರಿ ಭೂಮಿ ಎಂದು ಗುರುತಿಸಲಾಗಿತ್ತು. ಆದರೆ ಹೆಚ್ಚುವರಿ ಭೂಮಿಯನ್ನು ಬಿಡಿಎ ಈವರೆಗೂ ಕೆಪಿಟಿಸಿಎಲ್‌ನಿಂದ ಹಿಂಪಡೆಯಲಾಗಿಲ್ಲ. ಸುಮಾರು 60 ವರ್ಷಗಳಿಂದ ಖಾಲಿ ಇರುವ ಈ ಪ್ರದೇಶ ಅರಣ್ಯ ಪ್ರದೇಶವಾಗಿ ಮಾರ್ಪಾಡಾಗಿದೆ. ಹೀಗಾಗಿ ಕೂಡಲೇ ಕೆಪಿಟಿಸಿಎಲ್ ವಶದಲ್ಲಿರುವ 6.1 ಎಕರೆ ಭೂಮಿಯನ್ನು ಹಿಂಪಡೆಯುವಂತೆ ಬಿಡಿಎಗೆ ನಿರ್ದೇಶಿಸಬೇಕು ಹಾಗೂ ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸದಂತೆ ಬಿಬಿಎಂಪಿಗೆ ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News