×
Ad

ಒಳಾಂಗಣ ಕ್ರೀಡಾಂಗಣ ಕುರಿತ ಪಿಐಎಲ್ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್

Update: 2017-07-24 21:28 IST

ಬೆಂಗಳೂರು, ಜು.24: ಇಂದಿರಾನಗರ ಮೊದಲನೆ ಹಂತದಲ್ಲಿರುವ ಹೊರಾಂಗಣ ಕ್ರೀಡಾಂಗಣವನ್ನು ಒಳಾಂಗಣ ಕ್ರೀಡಾಂಗಣವನ್ನಾಗಿ ನಿರ್ಮಾಣ ಮಾಡುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಬಿಬಿಎಂಪಿ ಕರೆದಿರುವ ಗುತ್ತಿಗೆ ರದ್ದು ಕೋರಿ ಇಂದಿರಾನಗರ 1ನೆ ಹಂತದ ಲೀಗ್ ಅಸೋಶಿಯೇಷನ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪಾಲಿಕೆಯ ಆಯುಕ್ತರು ಹಾಗೂ ಬಿಬಿಎಂಪಿ ರಸ್ತೆೆ ಅಭಿವೃದ್ಧಿ ಮುಖ್ಯ ಎಂಜಿನಿಯರ್‌ಗೆ ನೋಟಿಸ್ ಜಾರಿ ಮಾಡಿತು.

ಅರ್ಜಿದಾರ ಪರ ವಕೀಲೆ ರೇಣುಕಾ ವಾದ ಮಂಡಿಸಿ, ಇಂದಿರಾನಗರದ ಮೊದಲ ಹಂತದಲ್ಲಿರುವ ಏಕೈಕ ಆಟದ ಮೈದಾನವಿದು. ಸುಮಾರು 45 ವರ್ಷಗಳಿಂದ ಸುತ್ತಮುತ್ತಲಿನ ಮಕ್ಕಳು ಆಟ ಆಡುತ್ತಾರೆ. ಆದರೆ ಬಿಬಿಎಂಪಿ ಈ ಮೈದಾನವನ್ನು ಒಳಾಂಗಣ ಕ್ರೀಡಾಂಗಣವನ್ನಾಗಿ ಮಾಡಲು ಮುಂದಾಗಿದ್ದು, ಟೆಂಡರ್ ಸಹ ಕರೆಯಲಾಗಿದೆ. ಒಳಾಂಗಣ ಕ್ರೀಡಾಂಗಣ ನಿರ್ಮಾಣದಿಂದ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿಲಿದೆ. ಹೀಗಾಗಿ ಟೆಂಡರ್ ರದ್ದು ಮಾಡುವಂತೆ ಪೀಠಕ್ಕೆ ಮನವಿ ಮಾಡಿದರು.
 ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News