ಪ್ರಕರಣಗಳ ಪಟ್ಟಿ ಸಿದ್ಧಪಡಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜು.24: ಕಳ್ಳತನ ಮಾಡಿದ್ದ ಚಿನ್ನಾಭರಣ ಖರೀದಿಸಿದ ಆರೋಪ ಸಂಬಂಧ ಅಟಿಕಾ ಗೋಲ್ಡ್ ಕಂಪೆನಿ ವಿರುದ್ಧ ನಗರದಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಈ ಸಂಬಂಧ ಪ್ರಕರಣ ರದ್ದುಕೋರಿ ಪಿ.ಎಸ್.ಆಯೂಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅಟಿಕಾ ಗೋಲ್ಡ್ ಕಂಪೆನಿಯು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಖರೀದಿಸಿ, ನಂತರ ಅವುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದೆ ಎಂಬ ಆರೋಪ ಸಂಬಂಧ ಅಯೂಬ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯವರು ದೂರು ದಾಖಲಿಸಿಕೊಂಡಿದ್ದರು.
ಆದರೆ, ನಾನು ಅಟಿಕಾ ಗೋಲ್ಡ್ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದೇನೆ. ಆದರೆ, 2016ರಲ್ಲಿ ಕಂಪೆನಿಯ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದು, ಅದು ಅಂಗೀಕಾರವಾಗಿದೆ. ಈ ಕಳ್ಳತನದ ಮಾಲುಗಳನ್ನು ಖರೀದಿಸುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಕೇವಲ ಕಿರುಕುಳ ನೀಡುವ ಉದ್ದೇಶದಿಂದ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದನ್ನು ರದ್ದುಪಡಿಸುವಂತೆ ಕೋರಿದ್ದಾರೆ. ಸೋಮವಾರ ಈ ಅರ್ಜಿಗಳ ವಿಚಾರಣೆ ಮಾಡಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ವಿಜಯನಗರ ಠಾಣಾ ಪೊಲೀಸರು ಜಾರಿ ಮಾಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಿತು.