ಸೌದಿ: ಸಂಕಷ್ಟದಲ್ಲಿದ್ದ ಯುವಕನಿಗೆ ನೆರವಾದ ಐ.ಎಸ್.ಎಫ್

Update: 2017-07-25 08:54 GMT

ರಿಯಾದ್, ಜು. 25: ಸುಮಾರು 9 ತಿಂಗಳುಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುತ್ರಬೈಲ್ ಗ್ರಾಮದ ಹೈದರ್ ಅಲಿ ಎಂಬವರು ಮಂಗಳೂರಿನ ಏಜೆಂಟರ ಮೂಲಕ ಸೌದಿ ಅರೇಬಿಯಾಕ್ಕೆ ವಾಹನ ಚಾಲಕನಾಗಿ ಅಗ್ರಿಮೆಂಟ್ ವೀಝದ ಮೂಲಕ ಸೌದಿಗೆ ತಲುಪಿದ್ದರು. ಈ ಸಂದರ್ಭ ಹೈದರ್ ಅಲಿ  ಏಜೆಂಟ್ ರಿಗೆ ತನ್ನಲ್ಲಿ ಸೌದಿಯ ವಾಹನ ಪರವಾನಿಗೆ ಇಲ್ಲವೆಂದು ಹೇಳಿದರೂ, ''ಅದೆನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ, ನಾನು ನಿನಗೆ ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ'' ಎಂದು ಹೇಳಿ ಕಳುಹಿಸಿದ್ದರು.

ಸೌದಿ ಅರೇಬಿಯಾಕ್ಕೆ ಬಂದ ಹೈದರ್ ಅಲಿ ತನ್ನ ಕಂಪನಿಯನ್ನು ಸಂಪರ್ಕಿಸಿದಾಗ, ಕಂಪನಿಯು ವಾಹನ ಪರವಾನಿಗೆ ಇಲ್ಲದೆ ಕೆಲಸವನ್ನು ನೀಡವುದಿಲ್ಲವೆಂದು  ಹೇಳಿ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ಮಧ್ಯೆ ಹಲವು ಬಾರಿ ಏಜೆಂಟನನ್ನು ಸಂಪರ್ಕಿಸಿದ ಹೈದರ್ ಅಲಿಯ ಮನೆಯವರು ಯಾವುದೇ ಪ್ರಯೋಜನವಾಗದೇ ಅಲ್ಲಿಂದ ಕೇವಲ ಉಡಾಫೆಯ ಉತ್ತರಗಳು ಮಾತ್ರ ಸಿಗುತ್ತಿದ್ದವು.

ಹೀಗೆ 9 ತಿಂಗಳು ಹೈದರ್ ಅಲಿ ಯಾವುದೇ ಕೆಲಸ ಇಲ್ಲದೆ  ಸೌದಿಯಲ್ಲಿ ಅತಂತ್ರವಾಗಿ ಜೀವನ  ನಡೆಸುತ್ತಿದರು. ಈ ವಿಷಯವನ್ನು  ತಿಳಿದ ಇಂಡಿಯನ್ ಸೋಶಿಯಲ್ ಫಾರಂ (ಐ.ಎಸ್.ಎಫ್) ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಮಜೀದ್ ಜೋಕಟ್ಟೆ ಅವರು ತಂಡವನ್ನು ರಚಿಸಿ, ಇಕ್ಬಾಲ್ ಲೈಲಾ ಅವರ ಸಹಕಾರದೊಂದಿಗೆ ಹೈದರ್ ಅಲಿಗೆ ನೆರವಾದರು.

ಸದ್ರಿ ತಂಡವು ಇವರ ಸಮಸ್ಯೆಯ ಪರಿಹಾರಕ್ಕಾಗಿ ಭಾರತೀಯ ರಾಯಭಾರಿ ಕಚೇರಿ ಮತ್ತು ಅವರ ಕಂಪೆನಿಯನ್ನು ಸಂಪರ್ಕಿಸಿದರೂ ಯಶಸ್ಸು ಸಿಗದ ಕಾರಣ ಅಂತಿಮವಾಗಿ ಕಂಪನಿಯ ಬೇಡಿಕೆಯಂತೆ  ಸುಮಾರು ಮೂರು ಸಾವಿರ ರಿಯಾಲನ್ನು ಸ್ವತಃ ಹೈದರ್ ಅಲಿ ಪಾವತಿಸಿ ನಿರ್ಗಮನ ಪತ್ರ ಪಡೆದುಕೊಂಡರು.

ಇನ್ನು ಸ್ವದೇಶಕ್ಕೆ ಮರಳಲು ಟಿಕೇಟಿನ ಸಮಸ್ಯೆ ಎದುರಾದಾಗ  ಇಂಡಿಯನ್ ಸೋಶಿಯಲ್ ಫಾರಂ ಮತ್ತು ಸ್ಥಳೀಯ ದಾನಿಯಾದ ಅಹ್ಮದ್ ಅವರ ನೆರವಿನೊಂದಿಗೆ ವಿಮಾನಯಾನದ ಟಿಕೇಟಿನ ವ್ಯವಸ್ಥೆ ಮಾಡಿ  ಹೈದರ್ ಅಲಿ ಯನ್ನು ಜುಲೈ 17 ರಂದು  ಬೆಂಗಳೂರು ಮಾರ್ಗವಾಗಿ ಸ್ವಗ್ರಾಮಕ್ಕೆ ಕಳುಹಿಸಿ ಕೊಡಲಾಯಿತು.

ಇತ್ತೀಚಿನ ದಿನಗಳಲ್ಲಿ ಏಜೆಂಟರುಗಳ ವಂಚನೆಯು ಹೆಚ್ಚಾಗಿದ್ದು ಸೌದಿಗೆ ಬರುವ ಅನಿವಾಸಿಗಳು ಏಜೆಂಟರುಗಳ ಯಾವುದೇ ಮಾತಿಗೆ ಮರುಳಾಗದೆ ಎಲ್ಲ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಖಾತ್ರಿಪಡಿಸಿದ ನಂತರವೇ ಪ್ರಯಾಣಿಸಬೇಕೆಂದು ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ರಾಜ್ಯ ಸಮಿತಿಯು ಈ ಮೂಲಕ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News