ಮೆಟ್ರೋ ಹಿಂದಿ ನಾಮಫಲಕ ತೆರವುಗೊಳಿಸದಿದ್ದರೆ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ, ಶಿಸ್ತುಕ್ರಮ

Update: 2017-07-25 16:14 GMT

ಬೆಂಗಳೂರು, ಜು. 25: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ಕೂಡಲೆ ಹಿಂಪಡೆಯಲು ಮೀನಾಮೇಷ ಎಣಿಸುವ ಅಧಿಕಾರಿಗಳ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಮೆಟ್ರೋ ರೈಲು ನಿಗಮದಲ್ಲಿ ಕನ್ನಡ ಅನುಷ್ಠಾನ ಕುರಿತು ಪರಿಶೀಲಿಸಿದ ಬಳಿಕ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೆಟ್ರೋ ರೈಲು ನಿಗಮ ರಾಜ್ಯ ಸರಕಾರದ ಸ್ವಾಯತ್ತ ನಿಗಮ. ರಾಜ್ಯ ಸರಕಾರದ ಎಲ್ಲ ನಿಗಮಗಳಲ್ಲಿಗೆ ಅನ್ವಯಿಸುವ ಕಾನೂನು ನಿಯಮಗಳು ಮೆಟ್ರೋ ರೈಲು ನಿಗಮಕ್ಕೂ ಅನ್ವಯಿಸಲಿದೆ. ಈ ಸಂಸ್ಥೆ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ಸಂಸ್ಥೆ. ಇದೇನು ಭಾರತೀಯ ರೈಲ್ವೇ ಇಲಾಖೆಯ ಅಡಿಯಲ್ಲಿ ಬರುವುದಿಲ್ಲ. ಮೆಟ್ರೋದಲ್ಲಿ ಕನ್ನಡ ಬಳಕೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

2011ರಲ್ಲಿ ನಿಗಮದ ಅಧಿಕಾರಿಯೊಬ್ಬರು ಮಾಡಿದ ತಪ್ಪನ್ನು ಮುಂದುವರೆಸುವುದು ಬೇಡ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಬಿಎಂಆರ್‌ಸಿಎಲ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಬಳಸಿರುವ ಹಿಂದಿ ನಾಮ ಫಲಕಗಳನ್ನು ಕೂಡಲೆ ತೆರವುಗೊಳಿಸಬೇಕು. ಇದಕ್ಕೆ ರಾಜ್ಯ ಸರಕಾರದ ಆದೇಶಕ್ಕೆ ಕಾಯುವ ಅಗತ್ಯವೂ ಇಲ್ಲ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲ ಅವರಿಗೆ ಸೂಚನೆ ನೀಡಿದರು.

ಕೇಂದ್ರ ಸರಕಾರ ಹಿಂದಿ ಬಳಕೆ ಮಾಡಿ ಎಂದು ಪತ್ರದ ಮೂಲಕ ಸಲಹೆ ನೀಡಿದೆಯೇ ವಿನಹ ಆದೇಶವನ್ನು ನೀಡಿಲ್ಲ. ಈ ಪತ್ರಕ್ಕೆ ಮಾನ್ಯತೆ ನೀಡುವ ಅಗತ್ಯತೆ ಇಲ್ಲ. ಅದು ನಿಗಮದ ಅರಿವಿಗೂ ಬಂದಿದೆ. ಇಷ್ಟಾದರೂ ರಾಜ್ಯ ಸರಕಾರದತ್ತ ಬೊಟ್ಟು ಮಾಡುವುದು ನಿಲ್ಲಿಸಬೇಕು. ಹಿಂದಿ ಹೇರಿಕೆ ವಿಚಾರದಲ್ಲಿ ರಾಜ್ಯ ಸರಕಾರವೂ ವಿರೋಧ ವ್ಯಕ್ತಪಡಿಸಿದೆ ಎಂದು ಮನವರಿಕೆ ಮಾಡಿದರು.

 ಮೆಟ್ರೋ ನಿಗಮದಲ್ಲಿ ಕನ್ನಡ ಘಟಕ: ಮೆಟ್ರೋ ರೈಲು ನಿಗಮದಲ್ಲಿ ಕೂಡಲೆ ಕನ್ನಡ ಘಟಕವನ್ನು ಆರಂಭಿಸಿ ಮೂರು ತಿಂಗಳಿಗೊಮ್ಮೆ ಕನ್ನಡ ಅನುಷ್ಠಾನದ ಕುರಿತು ಪ್ರಾಧಿಕಾರಕ್ಕೆ ವರದಿ ನೀಡಬೇಕು. ನಿಗಮಕ್ಕೆ ಪ್ರತ್ಯೇಕವಾದ ಕನ್ನಡ ಸಂಘಟನೆಯನ್ನು ರಚಿಸಬೇಕು. ಜೊತೆಗೆ ನಿಗಮದಲ್ಲಿನ ಸಿ ಮತ್ತು ಡಿ ದರ್ಜೆಯ ಉದ್ಯೋಗಕ್ಕೆ ಶೇ.100ರಷ್ಟು ಕನ್ನಡಿಗರಿಗೇ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಚೆನ್ನೈ ಮೆಟ್ರೋದಲ್ಲಿ ತ್ರಿಬಾಷಾ ಸೂತ್ರ ಬಳಕೆ ಮಾಡಿಲ್ಲ. ದೆಹಲಿಯಲ್ಲೂ ದ್ವಿ ಭಾಷಾ ಸೂತ್ರವೇ ಇದೆ. ಆದರೆ ಇಲ್ಲಿ ಯಾಕೆ ಎಂದು ಪ್ರಶ್ನಿಸಿದರು.

ನಿಗಮಗಳಲ್ಲಿ ಕನ್ನಡ ಭಾಷೆ ಅನುಷ್ಠಾನ ಕಡ್ಡಾಯಗೊಳಿಸಲಾಗಿದೆ. ಮೆಟ್ರೋ ರೈಲು ನಿಗಮದಲ್ಲಿ ಹಿಂದಿ ಹೇರಿಕೆ ಮಾಡುವ ಮೂಲಕ ಅಧಿಕಾರಿಗಳು ಸದನದ ಹಕ್ಕುಚ್ಯುತಿ ಮಾಡಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೊರ ಗುತ್ತಿಗೆ ಆಧಾರದಲ್ಲಿ ಮೆಟ್ರೋದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸಲು ಕಡ್ಡಾಯಗೊಳಿಸಬೇಕು. ಕನ್ನಡ ಮಾತನಾಡಲು ಮೂರು ತಿಂಗಳು ಅವಕಾಶ ಕೊಟ್ಟು ನೋಡಿ, ಕಲಿಯದಿದ್ದರೆ ಅವರಿಗೆ ವೇತನ ನೀಡುವುದನ್ನು ಸ್ಥಗಿತಗೊಳಿಸಿ ಎಂದರು.

ದೇಶದ್ರೋಹದ ಕೆಲಸವಲ್ಲ:  ಮೇಟ್ರೋ ರೈಲಿನ ಬೋಗಿ ಮತ್ತು ನಿಲ್ದಾಣದ ಹೊರಗಡೆ ಹಾಕಿರುವ ಹಿಂದಿ ನಾಮಫಲಕಗಳನ್ನು ತೆರವುಗೊಳಿಸುವುದು ದೇಶದ್ರೋಹದ ಕೆಲಸವಲ್ಲ. ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ನಾವು ರೈಲು ಹಳಿಗಳನ್ನು ಬದಲಿಸಿ ಎಂದು ಹೇಳುತ್ತಿಲ್ಲ. ಹಿಂದಿ ನಾಮಫಲಕಗಳನ್ನು ಕೂಡಲೆ ತೆರವುಗೊಳಿಸಿ ಜನರ ಮೆಚ್ಚುಗೆಗೆ ಪಾತ್ರವಾಗಬೇಕು ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದರು.

ಸಭೆಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂದರಾ ಭೂಪತಿ, ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ಬಿಎಂಆರ್‌ಸಿಎಲ್ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

 ಮೆಟ್ರೋದಲ್ಲಿ ಹಿಂದಿ ಭಾಷೆ ತೆಗೆಯುವುದು ಭಾಷೆಗೆ ಮಾಡಿದ ಅಪಮಾನವೇನಲ್ಲ. ಈ ಕ್ರಮ ಒಕ್ಕೂಟದ ವ್ಯವಸ್ಥೆಗೆ ಗೌರವ ನೀಡಿದಂತೆ. ಮೆಟ್ರೋ ರೈಲು ನಿಗಮ ಕೂಡಲೆ ಹಿಂದಿ ನಾಮಫಲಕಗಳನ್ನು ತೆರವುಗೊಳಿಸುವ ವಿಶ್ವಾಸವಿದೆ.

-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಕ್ಷ್ಮ ಮಾರ್ಗಸೂಚಿಗಳನ್ನು ಗಂಭೀರವಾಗಿ ಸ್ವೀಕರಿಸಿ, ನಿಗಮ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

 -ಪ್ರದೀಪ್ ಸಿಂಗ್ ಕರೋಲ, ವ್ಯವಸ್ಥಾಪಕ ನಿರ್ದೇಶಕ ಬಿಎಂಆರ್‌ಸಿಎಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News