ಕನ್ನಡಿಗರು ದ್ವಿಭಾಷಾ ಸೂತ್ರವನ್ನು ಒಪ್ಪಬೇಕೆ ಹೊರತು ತ್ರಿಭಾಷಾ ಸೂತ್ರವನ್ನಲ್ಲ: ಡಾ.ಸಿದ್ದಲಿಂಗಯ್ಯ

Update: 2017-07-25 16:16 GMT

ಬೆಂಗಳೂರು, ಜು.25: ನಾವು ದ್ವಿಭಾಷಾ ಸೂತ್ರವನ್ನು ಒಪ್ಪಬೇಕೇ ಹೊರತು, ತ್ರಿಭಾಷಾ ಸೂತ್ರವನ್ನಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಸರಕಾರಿ ನೌಕರರು ಕಟಿಬದ್ಧರಾಗಬೇಕು ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.

ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಯು.ಡಿ.ನರಸಿಂಹಯ್ಯ ಅಭಿನಂದನಾ ಸಮಿತಿ ಆಯೋಜಿಸಿದ್ದ ‘ಯು.ಡಿ.ನರಸಿಂಹಯ್ಯ ಅಭಿನಂಧನಾ ಸಮಾರಂಭ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿ ಭಾಷೆ ಹೇರಿಕೆ ಖಂಡನೀಯವಾದುದು. ಮಹಾಕವಿ ಕುವೆಂಪು ತ್ರಿಭಾಷಾ ಸೂತ್ರವನ್ನು ತ್ರಿಶೂಲ ಎಂದು ಕರೆದಿದ್ದರು. ಅವರ ಮಾತು ಇಂದು ನಿಜವಾಗುತ್ತಿದೆ. ನಾವು ದ್ವಿಭಾಷಾ ಸೂತ್ರವನ್ನು ಒಪ್ಪಬೇಕೇ ಹೊರತು, ತ್ರಿಭಾಷಾ ಸೂತ್ರವನ್ನಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಸರಕಾರಿ ನೌಕರರು ಕಟಿಬದ್ಧರಾಗಬೇಕು. ರಾಜ್ಯ ದ್ವಿಭಾಷಾ ನೀತಿಯನ್ನು ಒಪ್ಪಿರುವ ಬಗ್ಗೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಯು.ಡಿ.ನರಸಿಂಹಯ್ಯ ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಎಲ್ಲ ಸರಕಾರಿ ನೌಕರರು ಜಾತ್ಯತೀತ ವ್ಯಕ್ತಿತ್ವ, ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಂಡು ಸರ್ವರ ಏಳಿಗೆಗೆ ದುಡಿಯಬೇಕು. ಕನ್ನಡ ಬಳಸುವ ನ್ಯಾಯಾಧೀಶರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಶಸ್ತಿ ನೀಡುತ್ತಿದೆ. ಅದೇ ರೀತಿ ಕನ್ನಡ ಬಳಸುವ ಸರಕಾರಿ ನೌಕರರು, ಅಧಿಕಾರಿಗಳಿಗೆ ಪ್ರತಿ ವರ್ಷ ಪ್ರಶಸ್ತಿ ಕೊಡುವಂತಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕನ್ನಡ ಭಾಷೆಯನ್ನು ವಿರೋಧಿಸುವ ಅಧಿಕಾರಿಗಳಿದ್ದಾರೆ. ಅಂತಹ ಅಧಿಕಾರಿಗಳನ್ನು ಸರಕಾರಿ ನೌಕರರು ದೂರವಿಡಬೇಕು, ಅವರ ಮೇಲೆ ಸರಕಾರ ಉಗ್ರ ಕ್ರಮ ಕೈಗೊಳ್ಳಬೇಕು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮಾತನಾಡಿ, ಹಲವರು ಸರಕಾರಿ ನೌಕರರು ಸೋಮಾರಿಗಳು, ಕೆಲಸ ಮಾಡುವುದಿಲ್ಲ ಎಂದು ಜರಿಯುತ್ತಾರೆ. ಆದರೆ, ನರಸಿಂಹಯ್ಯ ಅದಕ್ಕೆ ವಿರುದ್ಧ ಎಂಬಂತೆ ಕೆಲಸ ಮಾಡಿ ತೋರಿಸಿದ್ದಾರೆ. ಸರಕಾರಿ ನೌಕರರು ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಗಳಿಸಬೇಕು. ಇದರಿಂದ ನಮ್ಮ ವ್ಯಕ್ತಿತ್ವವೂ ಉತ್ತಮಗೊಳ್ಳುತ್ತದೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯು.ಡಿ. ನರಸಿಂಹಯ್ಯ, ನಾನು ಹೋರಾಟಗಳಿಂದಲೇ ಮುನ್ನೆಲೆಗೆ ಬಂದವನು. ನೌಕರರ ಪರವಾಗಿ, ಅವರ ಸಮಸ್ಯೆಗಳಿಗೆ ದನಿಯಾಗಿರಬೇಕು ಎಂದು ಬಯಸಿದವನು. ಇಂದು ನೌಕರರ ಸಮುದಾಯದಲ್ಲಿ ಗುರುತಿಸಲ್ಪಟ್ಟಿರುವುದು ನೆಮ್ಮದಿ ತಂದಿದೆ. ಸರಕಾರಿ ನೌಕರರ ಸಂಘಟನೆಯಲ್ಲಿ ಇರುವವರು ಮಾದರಿಯಾಗಿರಬೇಕು ಎಂದು ಆಶಿಸಿದರು.

 ಕಾರ್ಯಕ್ರಮದಲ್ಲಿ ಕೃಷ್ಣಕುಮಾರ್ ರಚಿಸಿರುವ ‘ನಮ್ಮ ನೆಚ್ಚಿನ ಯು.ಡಿ’ ಕಿರುಹೊತ್ತಿಗೆಯನ್ನು ಎನ್.ಆರ್. ವಿಶುಕುಮಾರ್ ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಯು.ಡಿ.ನರಸಿಂಹಯ್ಯರವರ ಪತ್ನಿ ಪಂಕಜ, ಅಭಿನಂದನಾ ಸಮಿತಿ ಅಧ್ಯಕ್ಷ ಟಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ಕರುನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಕನ್ನಡ ನಾಡಿಗೆ ಪ್ರತ್ಯೇಕವಾದ ಗೀತೆಯಿದೆ. ಅದೇ ರೀತಿ ಸರಕಾರ ನಾಡಧ್ವಜವನ್ನು ರೂಪಿಸಲು ಮುಂದಾಗಿರುವುದು ಶ್ಲಾಘನೀಯ. ಸರಕಾರ ನಾಡಧ್ವಜ ವಿಚಾರದಲ್ಲಿ ಮುಂದುವರೆದು ಕನ್ನಡಿಗರ ಅಸ್ಮಿತೆಯನ್ನು ಕಾಪಾಡಬೇಕು.

-ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News