ಭ್ರಷ್ಟೋ ರಕ್ಷತಿ ಭ್ರಷ್ಟಃ

Update: 2017-07-25 18:46 GMT

ಮಾನ್ಯರೆ,

ಜುಲೈ 19ರ ವಾಚಕ ಭಾರತಿ ವಿಭಾಗದಲ್ಲಿ ಮಟ್ಟು ಪುತ್ತು ಬಾವ ಘಜನಿಯವರ ‘‘ಹಿರಿಯ ನಾಗರಿಕ ಎಂಬುದು ಆಲಂಕಾರಿಕ ಪದವೇ?’’ ಪತ್ರ ಓದಿದ ನಂತರ ನನ್ನ ಇತ್ತೀಚಿನ ಅನುಭವವನ್ನು ಓದುಗರ ಜತೆ ಹಂಚಿಕೊಳ್ಳಬೇಕು ಎಂದೆನಿಸಿ ಈ ಪತ್ರ.
 ಚಿನ್ನಯ್ಯ ಕೋಟ್ಯಾನ್ ಎನ್ನುವವರು ಮೂಡುಬಿದಿರೆ ಹೋಬಳಿಯ ಮಾರ್ಪಾಡಿ ಗ್ರಾಮದಲ್ಲಿ ಜಮೀನು ಖರೀದಿಸಿದ್ದರು. ಖರೀದಿಸಿ ಸುಮಾರು ಹತ್ತು ವರ್ಷಗಳ ನಂತರ ಅದೊಂದು ದಿನ ಎಫ್.ಎಂ.ಬಿ. ನಕ್ಷೆ ಖರೀದಿಸಿ ಪರೀಕ್ಷಿಸಿದಾಗ ಅದು ದೋಷಪೂರಿತವಾಗಿರುವ ಅಂಶ ಅವರಿಗೆ ತಿಳಿಯಿತು. ಅವರು ಜಮೀನು ಖರೀದಿಸುವುದಕ್ಕಿಂತ ಹಲವಾರು ವರ್ಷಗಳ ಮೊದಲು ಯಾರೋ ಸರ್ವೇಯರ್ ತಪ್ಪಾಗಿ ಪ್ಲಾಟಿಂಗ್ ಮಾಡಿದ್ದರು. ಎಂದೋ ಯಾರೋ ಮಾಡಿದ ತಪ್ಪನ್ನು ಸರಿಪಡಿಸಲು ಡಿ.ಡಿ.ಎಲ್.ಆರ್.ಗೆ ಅಪೀಲು ಸಲ್ಲಿಸುವ ಮೂಲಕ ಚಿನ್ನಯ್ಯ ತನ್ನ ಪ್ರಯತ್ನವನ್ನು ಆರಂಭಿಸಿದರು. ಪ್ರಯತ್ನ ಆರಂಭಿಸಿ ಇಂದಿಗೆ ಮೂರುವರೆ ವರ್ಷಗಳೇ ಸಂದಿವೆ. ಫಲಿತಾಂಶ ಶೂನ್ಯ.
ಭೂಮಾಪನ ಇಲಾಖಾ ನಿಷ್ಕ್ರಿಯತೆಯ ಬಗ್ಗೆ ದಾಖಲೆ ಸಹಿತ ಈಗ ಇರುವ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ನಾನು ಮತ್ತು ಚಿನ್ನಯ್ಯ ವಿವರಿಸಿದೆವು. ‘‘ನನಗೂ ಒಂದು ಅರ್ಜಿ ಕೊಡಿ’’ ಎಂದರು ಜಿಲ್ಲಾಧಿಕಾರಿ. ಇಷ್ಟೆಲ್ಲ ನಡೆದು ಮತ್ತೆ ಆರು ತಿಂಗಳು ದಾಟಿದೆ. ಕಡತ ಜಿಲ್ಲಾಧಿಕಾರಿಯವರಿಂದ ಮತ್ತೊಮ್ಮೆ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಗೆ ಮರಳಿ ಬಂದು ಬೆಚ್ಚಗೆ ಕುಳಿತಿದೆ.
ಈ ಅರ್ಜಿಗಳಲ್ಲಿ ಯಾರಾದರೂ ಒಬ್ಬರಿಗೆ ‘‘ಈ ಅರ್ಜಿ ವಿಲೇವಾರಿ ಮಾಡಲೇ ಬೇಕು’’ ಎಂದು ಅನಿಸಿರುತ್ತಿದ್ದರೆ ಕೇವಲ ಐದೇ ನಿಮಿಷ ವ್ಯಯಿಸಿದರೂ ನಿರ್ದೋಷಿ ಅರ್ಜಿದಾರನ ಸಮಸ್ಯೆಗೆ ಮುಕ್ತಿ ದೊರೆಯುತ್ತಿತ್ತು. ಜಿಲ್ಲೆಯ ಆಡಳಿತಾತ್ಮಕ ಹುದ್ದೆಗಳಲ್ಲಿ ಈ ಹಿಂದೆ ಪೊನ್ನುರಾಜ್‌ರಂತಹ ದಕ್ಷರು ಬಂದು ಹೋಗಿದ್ದಾರೆ. ತಮ್ಮ ಮೊಬೈಲಿಗೆ ಬರುವ ಜನಸಾಮಾನ್ಯರ ಕರೆಗಳನ್ನು ಅವರು ‘‘ಸೇವೆ ಸಲ್ಲಿಸಲು ತಮಗೆ ಸಿಕ್ಕಿರುವ ಅವಕಾಶ’’ ಎಂಬಂತೆ ಸ್ವೀಕರಿಸಿ ಸ್ಪಂದಿಸುತ್ತಿದ್ದರು. ಎಸ್ಸೆಮ್ಮೆಸ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಆದರಿಂದು ನಮ್ಮ ಸೇವೆಗಾಗಿ ನಿಯುಕ್ತರಾಗಿರುವ ಅಧಿಕಾರಿಗಳ ಸ್ಪಂದನಶೂನ್ಯತೆಯು ನಮಗೆ ಅವರ ನೆನಪನ್ನು ಹುಟ್ಟಿಸುತ್ತದೆ. ಯಾವುದೇ ಪ್ರಭಾವಳಿ ಇಲ್ಲದ, ಪುಢಾರಿಗಳ ಬಾಲಬಡುಕರಲ್ಲದ ನಮ್ಮಂತಹ ಮಂದಿ ತಮ್ಮ ಹಕ್ಕಿನ ಕೆಲಸ ಮಾಡಿಸಿಕೊಡಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ದಾವೆ ಸಲ್ಲಿಸುವುದು ಇನ್ನುಳಿದಿರುವ ದಾರಿ ಎಂದು ನನಗೆ ಅನಿಸುತ್ತಲಿದೆ.
ಕೋಟ್ಯಾನರ ಪ್ರಾಯ ಅರುವತ್ತಾರು. ಅವರು ಹಿರಿಯ ನಾಗರಿಕರು. ಬಿಪಿ, ಶುಗರ್ ಇತ್ಯಾದಿ ಅವರನ್ನು ಓಡಾಡಲು ಬಿಡುತ್ತಿಲ್ಲ. ಈ ಪ್ರಕರಣದಲ್ಲಿ ನಾನು ಮಾಡಿರುವ ಒಂದೇ ಒಂದು ತಪ್ಪನ್ನು ಯಾರಾದರೂ ಗುರುತಿಸಿ ತಿಳಿಸಿದರೆ ಅವರಿಗೆ ನಾನು ಆಭಾರಿ ಎನ್ನುವ ಅರ್ಜಿದಾರ ‘‘ನಾನು ಸಾಯುವ ಮೊದಲು ಪ್ಲಾಟಿಂಗ್ ರದ್ದಾದೀತೇ?’’ ಎಂದೆಲ್ಲ ಪ್ರಶ್ನಿಸುತ್ತಾರೆ.
ಉತ್ತರಿಸುವವರು ಯಾರು?

Writer - -ರಾಜೇಂದ್ರ ಪೈ, ಮೂಡುಬಿದಿರೆ

contributor

Editor - -ರಾಜೇಂದ್ರ ಪೈ, ಮೂಡುಬಿದಿರೆ

contributor

Similar News